ಬೆಂಗಳೂರು (ಅ.17):  ಕೊರೋನಾ ಸೋಂಕು ಪತ್ತೆಗೆ ಪ್ರಸ್ತುತ ನಡೆಸುತ್ತಿರುವ ಆರ್‌ಟಿ-ಪಿಸಿಆರ್‌ ಪರೀಕ್ಷೆ ಶೇ.100ರಷ್ಟುನಿಖರವಲ್ಲ. ಕೊರೋನಾ ಸೋಂಕು ಇದ್ದರೂ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಶೇ.60ರಿಂದ 70ರಷ್ಟುಮಂದಿಗೆ ಮಾತ್ರ ಪಾಸಿಟಿವ್‌ ಬರುತ್ತದೆ. ಹೀಗಾಗಿ ಸೋಂಕು ಲಕ್ಷಣಗಳುಳ್ಳವರಿಗೆ ಎದೆಭಾಗದ ಸಿಟಿ ಸ್ಕ್ಯಾನ್‌ (ಸಿ.ಟಿ-ಥೊರಾಕ್ಸ್‌) ನಡೆಸಿ ಕೊರೋನಾ ಪತ್ತೆಹಚ್ಚುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ವಿಶ್ವಾದ್ಯಂತ ಪ್ರಸ್ತುತ ಗೋಲ್ಡ್‌ ಸ್ಟಾಂಡರ್ಡ್‌ ಎಂದು ಪರಿಗಣಿಸುತ್ತಿರುವ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಶೇ.60ರಿಂದ 70ರಷ್ಟುಮಾತ್ರ ಸೆನ್ಸಿಟಿವಿಟಿ (ನಿಜವಾದ ಪಾಸಿಟಿವ್‌ ಪ್ರಕರಣಗಳ ಪತ್ತೆ ಸಾಮರ್ಥ್ಯ) ಇರುತ್ತದೆ. ಐಸಿಎಂಆರ್‌ ಪ್ರಕಾರವೂ ಶೇ.50.76ರಿಂದ ಶೇ.84ರವರೆಗೆ ಮಾತ್ರ ಸೆನ್ಸಿಟಿವಿಟಿ ಇರುತ್ತದೆ. ಇದರಿಂದ ಪಾಸಿಟಿವ್‌ ಪ್ರಕರಣಗಳಿಗೂ ನೆಗೆಟಿವ್‌ ಎಂದು ವರದಿ ಬರಬಹುದು. ಹೀಗೆ ನೆಗೆಟಿವ್‌ ವರದಿ ಬಂದವರಿಗೆ ಕೊರೋನಾ ಸೋಂಕು ಲಕ್ಷಣ (ಕೆಮ್ಮು, ಜ್ವರ, ನೆಗಡಿ, ವಿಷಮಶೀತಜ್ವರ) ಇದ್ದರೆ ಅವರ ಎದೆ ಭಾಗದ ಸಿ.ಟಿ. ಸ್ಕಾ್ಯನ್‌ ನಡೆಸಿ ಶ್ವಾಸಕೋಶದಲ್ಲಿ ಸೋಂಕು ಉಂಟಾಗಿದೆಯೇ ಎಂದು ಪತ್ತೆಹಚ್ಚಿ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

'ಬೆಂಗಳೂರಲ್ಲಿ ಕೊರೋನಾ ಪಾಸಿಟಿವ್‌ ಕೇಸ್‌ ಕೊಂಚ ಇಳಿಕೆ' ...

ಒಂದು ವೇಳೆ ಶ್ವಾಸಕೋಶದಲ್ಲಿ ಸೋಂಕು ಪತ್ತೆಯಾಗಿ ರಕ್ತ ಪರೀಕ್ಷೆಯಲ್ಲಿ ಬಯೋಮಾರ್ಕರ್‌ಗಳಲ್ಲೂ ಸೋಂಕು ಲಕ್ಷಣಗಳು ಪತ್ತೆಯಾದರೆ ಅವರನ್ನು ಕೊರೋನಾ ಸೋಂಕಿತ ಎಂದೇ ಭಾವಿಸಿ ಚಿಕಿತ್ಸೆ ನೀಡಿ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಶೇ.98ರವರೆಗೆ ನಿಖರತೆ:  ಸಿ.ಟಿ ಸ್ಕ್ಯಾನ್‌ನಲ್ಲಿ ಹೆಚ್ಚು ಸೆನ್ಸಿಟಿವಿಟಿ ಇರುತ್ತದೆ. ಶೇ.98ರಷ್ಟುಪ್ರಕರಣವರೆಗೆ ನಿಖರವಾಗಿ ಸೋಂಕು ಪತ್ತೆ ಮಾಡಬಹುದು. ಪ್ರಸ್ತುತ ದೇಶ ಹಾಗೂ ರಾಜ್ಯದಲ್ಲಿ ಸೋಂಕಿನ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಾದಂತೆ ಸೋಂಕೂ ಹೆಚ್ಚಾಗುತ್ತಿದೆ. ಇದೇ ವೇಳೆ ಸುಳ್ಳು ನೆಗೆಟಿವ್‌ ವರದಿಗಳೂ ಹೆಚ್ಚಾಗುತ್ತಿವೆ. ಭವಿಷ್ಯದಲ್ಲಿ ಈ ಪ್ರಮಾಣ ಮತ್ತಷ್ಟುಹೆಚ್ಚಾಗಿ ಸೋಂಕು ಉಳ್ಳವರೂ ನೆಗೆಟಿವ್‌ ಎಂದು ನಿರ್ಲಕ್ಷ್ಯವಹಿಸಿ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಹೀಗಾಗಿ ಕೊರೋನಾ ಮಾದರಿ ಕಾಯಿಲೆ ಲಕ್ಷಣಗಳು (ಕೋವಿಡ್‌ ಲೈಕ್‌ ಸಿಂಡ್ರೋಮ್‌) ಹೊಂದಿರುವವರಿಗೆ ಸಿ.ಟಿ. ಸ್ಕಾ್ಯನ್‌ ಮಾಡಿಸಬಹುದು. ಈ ಮೂಲಕ ಸೋಂಕು ಹೆಚ್ಚಾಗುವುದನ್ನು ನಿಯಂತ್ರಿಸಿ, ಸೂಕ್ತ ವೇಳೆಗೆ ಚಿಕಿತ್ಸೆ ನೀಡಬಹುದು. ಇದರಿಂದ ಸಾವಿನ ಪ್ರಮಾಣವನ್ನೂ ಕಡಿಮೆ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.