ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದೇಕೆ, ಕಾಂಗ್ರೆಸ್ ಸರ್ಕಾರಕ್ಕೆ ಬೆದರಿಕೆ ಇತ್ತೇ?: ಸಿ.ಟಿ. ರವಿ
ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ, ಸಂಸದರ ಸಭೆ ನಡೆಸಿದ್ದು ಸರಿಯಲ್ಲ. ರಾಜ್ಯದ ರೈತರ ಸಂಕಷ್ಟ ದೂರ ಮಾಡುವುದರ ಬದಲು ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ಇದ್ದಂತಿದೆ. ಇದಕ್ಕೆ ಕರ್ನಾಟಕ ಬಲಿಪಶು ಆಗಿದೆ ಎಂದು ಅಭಿಪ್ರಾಯಪಟ್ಟ ಸಿ.ಟಿ. ರವಿ

ಬೆಂಗಳೂರು(ಸೆ.22): ತಮಿಳುನಾಡಿಗೆ ಮುಂಚಿತವಾಗಿಯೇ ನೀರು ಬಿಡಲು ನಿಮಗೇನಾದರೂ ಬೆದರಿಕೆ ಇತ್ತೇ? ನಿಮ್ಮ ಪಕ್ಷದಿಂದ ಒತ್ತಡ ಇತ್ತೇ? ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದು ಯಾಕೆ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟದ ಭಾಗವಾಗಲು ನೀರು ಬಿಡಿ ಎಂದು ಡಿಎಂಕೆ ಬೆದರಿಕೆ ಹಾಕಿರಬಹುದು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಮತ್ತೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್! ಪ್ರತಿದಿನ 5000 ಕ್ಯೂಸೆಕ್ಸ್ ಕಾವೇರಿ ನೀರು ಬಿಡಲು ಆದೇಶ
ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ, ಸಂಸದರ ಸಭೆ ನಡೆಸಿದ್ದು ಸರಿಯಲ್ಲ. ರಾಜ್ಯದ ರೈತರ ಸಂಕಷ್ಟ ದೂರ ಮಾಡುವುದರ ಬದಲು ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ಇದ್ದಂತಿದೆ. ಇದಕ್ಕೆ ಕರ್ನಾಟಕ ಬಲಿಪಶು ಆಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರವು ಕಾವೇರಿ ನೀರಿನ ವಿಷಯದಲ್ಲಿ ಆರಂಭದಿಂದಲೂ ಅನುಮಾನಾಸ್ಪದವಾಗಿ ನಡೆದುಕೊಂಡಿದೆ. ಅದರ ಪರಿಣಾಮವಾಗಿ ನಮ್ಮ ವಿರುದ್ಧ ತೀರ್ಪು ಬಂದಿದೆ. ವಾಸ್ತವಿಕ ಸ್ಥಿತಿಯನ್ನು ಸುಪ್ರೀಂಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ರವಿ ತಿಳಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಮಿಳುನಾಡು ಬೇಡಿಕೆ ಮುಂದಿಡುವುದಕ್ಕಿಂತ ಮುಂಚಿತವಾಗಿಯೇ ನೀರು ಬಿಡುವ ಮೂಲಕ ತಮ್ಮ ಉದಾರತೆಯನ್ನು ಪ್ರದರ್ಶನ ಮಾಡಿತ್ತು. ಅದರ ಪರಿಣಾಮವಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಶೇ.42ರಷ್ಟು ನೀರಿನ ಕೊರತೆ ಇದ್ದರೂ ನೀರು ಬಿಟ್ಟಿದ್ದಾರೆ ಎಂದರು.