ಚಿಕ್ಕೋಡಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿ.ಟಿ. ರವಿ, ಸರ್ಕಾರ ಹಾರಾಟ ನಿಲ್ಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ರೈತರಿಗೆ ಪರಿಹಾರ ನೀಡಿ ತಮ್ಮ ಬದ್ಧತೆಯನ್ನು ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದರು.

ಚಿಕ್ಕೋಡಿ(ಅ.3): ಸರ್ಕಾರ ಹಾರಾಟ-ದೊಂಬರಾಟ ನಿಲ್ಲಿಸಿ, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಬಿಜೆಪಿ ನಾಯಕ ಸಿಟಿ ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇಂದು ಚಿಕ್ಕೋಡಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಚಿಕ್ಕೋಡಿಗೆ ಭೇಟಿ ನೀಡದಿರುವುದನ್ನು ಟೀಕಿಸಿದರು. ರಾಜಕೀಯ ಕಾರ್ಯಕರ್ತರಿಗೆ ಚುನಾವಣೆ ಮುಖ್ಯವಾಗಿರಬಹುದು, ಆದರೆ ಆಡಳಿತ ನಡೆಸುವ ಸಚಿವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಬದುಕಿದ್ದರೆ ಪರಿಹಾರ ಕೊಟ್ಟು ಸಾಬೀತುಪಡಿಸಿ:

ನಿಮಗೆ ಜನ ಅಧಿಕಾರ ಕೊಟ್ಟಿದ್ದಾರೆ. ಆದ್ರೆ ಅದನ್ನ ಭ್ರಷ್ಟಾಚಾರ ನಡೆಸಲು ಬಳಸಿಕೊಂಡಿದ್ದೀರಿ. ಕಾಂಗ್ರೆಸ್‌ನವರು ಬಂದಿಲ್ಲ ಅನ್ನುವ ಕಾರಣಕ್ಕೆ ನಾವಿಲ್ಲಿಗೆ ಬಂದಿದ್ದೇವೆ. ನಿಜವಾಗಲೂ ಬದುಕಿದ್ದೀರಿ ಎಂದಾದರೆ ರೈತರಿಗೆ ಪರಿಹಾರ ಕೊಟ್ಟು ಸಾಬೀತು ಮಾಡಿ ಎಂದು ಸವಾಲು ಹಾಕಿದರು.

ಇದೇ ವೇಳೆ ಯತ್ನಾಳ ಬಿಜೆಪಿಗೆ ಸೇರುವ ವಿಚಾರಕ್ಕೆ ಸಂಬಂಧಿಸಿ, 'ಕಾಲಾಯ ತಸ್ಮೈ ನಮಹ! ಕಾಲವೇ ಎಲ್ಲಕ್ಕೂ ಉತ್ತರ ನೀಡುತ್ತದೆ" ಎಂದು ನಿಗೂಢವಾಗಿ ಹೇಳಿದ ಸಿಟಿ ರವಿ, ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ತಿಳಿಸಿದರು.