ರಾಜಕಾರಣದಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕಾಗುತ್ತದೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ರಾಜಕಾರಣದಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ.

ತುಮಕೂರು (ಡಿ.25): ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ರಾಜಕಾರಣದಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಡಿ.ಕೆ.ಶಿವಕುಮಾರ್ ಭೇಟಿ ಕುರಿತು ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಯಾರು ಶಾಶ್ವತ ಮಿತ್ರರಲ್ಲ, ಶತ್ರುಗಳು ಅಲ್ಲ. ರಾಜಕಾರಣದಲ್ಲಿ ಫ್ಲೆಕ್ಸಿಬಿಲಿಟಿ ಇರಬೇಕಾಗುತ್ತದೆ. ನಾನೊಬ್ಬನೇ ಅಲ್ಲ, ಎಲ್ಲರನ್ನು ಡಿಕೆಶಿಯವರು ಭೇಟಿಯಾಗಿದ್ದಾರೆ. ಸಿದ್ದರಾಮಯ್ಯ ಪರ ಮಾತನಾಡುವವರು, ಡಿಕೆಶಿ ಪರ ಮಾತನಾಡುವವರು ಒಂದಷ್ಟು ಜನ ಇರುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ರಾಜಕೀಯ ಮುಖಂಡರು ಮಾಡುತ್ತಾರೆ. ಅದೇ ರೀತಿ ಶಿವಕುಮಾರ್ ಸಹ ಮಾಡಿದ್ದಾರೆ. ಡಿಕೆಶಿ ಜೊತೆ ಚರ್ಚೆ ಮಾಡಿದ್ದು ಪಕ್ಷ ಸಂಘಟನೆ ಬಗ್ಗೆ ಎಂದರು.

ಡಿಕೆಶಿ ಕ್ಯಾಬಿನೆಟ್ ನಲ್ಲಿ ನಾನು ಮಂತ್ರಿ ಆಗಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದರ ಬಗ್ಗೆ ಎಲ್ಲೂ, ಯಾವುದೇ ಚರ್ಚೆ ಆಗಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಳಿಯೂ ಚರ್ಚೆ ಆಗಿಲ್ಲ. ನಾನು ಸಚಿವ ಸ್ಥಾನವನ್ನು ನಿರೀಕ್ಷೆ ಮಾಡ್ತಿದ್ದೇನೆ. ನಾನು ಅಧಿಕಾರ ಹುಡುಕಿಕೊಂಡು ಹೋದವನಲ್ಲ. ಅಧಿಕಾರ ಕೊಟ್ಟರೆ ನಾನು ಜನಪರ ಕೆಲಸ ಮಾಡುತ್ತೇನೆ ಎಂದರು. ಸಂಪುಟ ಪುನಾರಚನೆ ಬಗ್ಗೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿ ಹೈಕಮಾಂಡ್‌ ಅನುಮತಿ ತೆಗೆದುಕೊಂಡು ಸಚಿವ ಸಂಪುಟ ಪುನಾರಚನೆ ಮಾಡಬೇಕು. ಜನವರಿ ಮಧ್ಯ ಭಾಗದಲ್ಲಿ ಆಗುತ್ತೋ, ಫೆಬ್ರವರಿ ಮಧ್ಯ ಭಾಗದಲ್ಲಿ ಆಗುತ್ತೋ ಎಂಬುದನ್ನು ಹೇಳುವುದಕ್ಕೆ ಆಗುವುದಿಲ್ಲ ಎಂದರು.

ನನ್ನ ಭವಿಷ್ಯಕ್ಕಾಗಿ ನಮ್ಮ ತಂದೆ ಡಿಕೆಶಿ ಭೇಟಿಯಾಗಿಲ್ಲ: ರಾಜಣ್ಣ ಪುತ್ರ

ನನ್ನ ಭವಿಷ್ಯ ರೂಪಿಸುವುದು ಕ್ಷೇತ್ರದ ಜನರು, ಮತದಾರರು ಎಂದು ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರಿಪ್ಕೋ ಸಭೆ ಇದ್ದ ಕಾರಣ ದೆಹಲಿಗೆ ಬಂದಿದ್ದೆ. ಇಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಕ್ಕರೆ ಭೇಟಿ ಆಗುವೆ ಎಂದರು. ಈ ವೇಳೆ ಸುದ್ದಿಗಾರರು ನಿಮ್ಮ ರಾಜಕೀಯ ಭವಿಷ್ಯ ರೂಪಿಸಲು ಪದೇ ಪದೇ ರಾಜಣ್ಣ ಮತ್ತು ಡಿಕೆಶಿ ಭೇಟಿ ಆಗುತ್ತಿದ್ದಾರೆ ಎನ್ನುವ ಮಾತುಗಳಿವೆ ಎಂದು ಪ್ರಶ್ನಿಸಿದಾಗ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ ಭೇಟಿ ಮಾಡಿದ್ದಾರೆ. ಬೇರೆ ಏನು ಮಾತಾಡಿದ್ದಾರೆ ಗೊತ್ತಿಲ್ಲ. ಡಿಕೆಶಿ, ರಾಜಣ್ಣ ಯೂತ್ ಕಾಂಗ್ರೆಸ್‌ನಿಂದಲೂ‌ ಜತೆಯಲ್ಲಿ ಇದ್ದವರು. ಹೀಗಾಗಿ ಭೇಟಿ ಮಾಡಿದ್ದಾರೆ ಅಷ್ಟೇ ಎಂದರು.