'ಐ ಲವ್ ಮೊಹಮ್ಮದ್' ಅಭಿಯಾನವು ಸೌಹಾರ್ದತೆಗಿಂತ ಹೆಚ್ಚಾಗಿ ರಾಜಕೀಯ ಷಡ್ಯಂತ್ರವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆರೋಪಿಸಿದ್ದಾರೆ. ಇದು ಹಿಂದಿನ 'ಟೂಲ್ ಕಿಟ್' ತಂತ್ರಗಳಂತೆಯೇ ಇದ್ದು, ಇದಕ್ಕೆ ಪ್ರತಿಯಾಗಿ 'ಐ ಲವ್ ಮಹದೇವ್' ಅಭಿಯಾನವೂ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಸೆ.27): ಇತ್ತೀಚೆಗೆ ವ್ಯಾಪಕ ಪ್ರಚಾರ ಗಿಟ್ಟಿಸುತ್ತಿರುವ 'ಐ ಲವ್ ಮೊಹಮ್ಮದ್' (I LOVE Mohamad) ಅಭಿಯಾನದ ಹಿಂದೆ ಷಡ್ಯಂತ್ರವಿದೆ. ಪ್ರವಾದಿ ಮೊಹಮ್ಮದ್ ಅವರು ಜನ್ಮ ತಾಳಿ ಈಗಾಗಲೇ 1,500 ವರ್ಷಗಳಾಗಿವೆ. ಹಾಗಾದರೆ ಇಷ್ಟು ವರ್ಷಗಳ ಕಾಲ ಈ ಪ್ರೀತಿ (ಲವ್) ಇರಲಿಲ್ಲವೇ? ಇವರ ಅಭಿಯಾನಕ್ಕೆ ಪ್ರತಿಯಾಗಿ 'ಐ ಲವ್ ಮಹದೇವ್' ಅಭಿಯಾನವೂ ಶುರುವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ 'ಐ ಲವ್ ಮೊಹಮ್ಮದ್' (I Love Mohammad) ಅಭಿಯಾನದ ಹಿಂದೆ ಒಂದು ರಾಜಕೀಯ ಷಡ್ಯಂತ್ರ ಅಡಗಿದೆ. ಈ ಪ್ರಚಾರದ ಉದ್ದೇಶ ಸೌಹಾರ್ದತೆಗಿಂತ ಹೆಚ್ಚಾಗಿ ದೇಶದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡುವುದಾಗಿದೆ. ಐ ಲವ್ ಮೊಹಮ್ಮದ್ ಎನ್ನುವುದರ ಹಿಂದೆ ಪ್ರೀತಿ ಉಕ್ಕಿ ಹರಿದಿರುವ ಕಾರಣವನ್ನು ಯಾರೂ ಹೇಳುತ್ತಿಲ್ಲ. ಈ ಮೂಲಕ ಅವರ ಪ್ರಚಾರದ ಹಿಂದೆ ಖಚಿತವಾಗಿ ಏನೋ ಷಡ್ಯಂತ್ರ ಇದೆ ಎಂಬುದು ಸ್ಪಷ್ಟವಾಗುತ್ತಿದೆ. ಆದರೆ, ಅವರ ಅಭಿಯಾನಕ್ಕೆ ಪ್ರತಿಯಾಗಿ ಈಗಾಗಲೇ 'ಐ ಲವ್ ಮಹದೇವ್' ಅಭಿಯಾನವೂ ಶುರುವಾಗಿದೆ ಎಂದು ತಿಳಿಸಿದರು.
ಹಳೆಯ 'ಟೂಲ್ ಕಿಟ್' ಷಡ್ಯಂತ್ರಗಳ ನೆನಪು
ದೇಶದಲ್ಲಿ ಈ ಹಿಂದೆಯೂ ಅನೇಕ ಸೂಕ್ಷ್ಮ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಂಡು ಟೂಲ್ ಕಿಟ್ ಮೂಲಕ ಅಪಪ್ರಚಾರ ಮಾಡಲಾಗಿತ್ತು. ಈ ಹಿಂದೆ ದೇಶದಲ್ಲಿ ಅನೇಕ ವಿಚಾರಗಳನ್ನು ಎಳೆದು ತಂದಿದ್ದಾರೆ. ರಾಷ್ಟ್ರವನ್ನೇ ಬಳಸಿಕೊಂಡು ಟೂಲ್ ಕಿಟ್ ಮಾಡಿಕೊಂಡರು. ಮೊದಲು 'ಇನ್ ಟಾಲರೆನ್ಸ್' (ಅಸಹಿಷ್ಣುತೆ) ಅಂತ ಶುರುವಾಯ್ತು. ಮೋದಿಯೇ ಬಂದು ಕುತ್ತಿಗೆಗೆ ಹಗ್ಗ ಹಾಕಿದ್ರು ಅನ್ನುವಂತೆ ಬಿಂಬಿಸಿದರು. ಸಾವನ್ನ ಇನ್ನೊಬ್ಬರ ತಲೆಗೆ ಕಟ್ಟುವ ಕೆಲಸ ಆಯ್ತು. ನಂತರ ಅವಾರ್ಡ್ ವಾಪಸ್ ಕೊಡುವ ಚಳುವಳಿ ಶುರುವಾಯ್ತು, ಎಂದು ಹಿಂದಿನ ರಾಜಕೀಯ ತಂತ್ರಗಳನ್ನು ಉಲ್ಲೇಖಿಸಿದ್ದಾರೆ.
ಅಲ್ಲದೆ, ಇತ್ತೀಚೆಗೆ ಖಲಿಸ್ತಾನ್ ಗ್ಯಾಂಗ್‌ನ ಷಡ್ಯಂತ್ರಗಳು ಹೆಚ್ಚಾಗಿವೆ. 'ಮುಸ್ಲಿಮರನ್ನೇ ದೇಶದಿಂದ ಓಡಿಸುತ್ತಾರೆ' ಅನ್ನೋ ವ್ಯಾಪಕ ಪ್ರಚಾರ ಶುರುವಾಗಿತ್ತು. ಚುನಾವಣಾ ಫಲಿತಾಂಶ ಬಿಜೆಪಿ ಪರ ಬಂದರೆ ಇವಿಎಂ (EVM) ಮೇಲೆ ಅಪಪ್ರಚಾರ ಮಾಡುವ ಕೆಲಸವನ್ನೂ ಮಾಡಲಾಗಿದೆ. 'ಮತದಾರರ ಪಟ್ಟಿ ಮೇಲೂ ಈಗ ಆರೋಪ ಶುರುವಾಗಿದೆ. ಚುನಾವಣಾ ಆಯೋಗವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸೋ ಕೆಲಸ ನಡೆಯುತ್ತಿದೆ' ಎಂದು ವಿಪಕ್ಷಗಳ ವಿರುದ್ಧ ಸಿ.ಟಿ. ರವಿ ಗುಡುಗಿದರು.
ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸುವಿಕೆ:
ವಿರೋಧ ಪಕ್ಷದ ನಾಯಕರು ಬಹಿರಂಗ ಬಂಡಾಯಕ್ಕೆ ಕರೆ ನೀಡುತ್ತಿರುವುದು ಮತ್ತು ಕರ್ನಾಟಕ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳಂತಹ ಪ್ರಾದೇಶಿಕ ನಾಯಕರು ಈ ನಡುವೆ ಒಟ್ಟಿಗೆ ಸೇರುತ್ತಿರುವುದು ಕೂಡ ಈ ಷಡ್ಯಂತ್ರದ ಭಾಗವಾಗಿರಬಹುದು. ಒಟ್ಟಾರೆಯಾಗಿ, 'ಐ ಲವ್ ಮೊಹಮ್ಮದ್' ಎಂಬ ಪ್ರಚಾರವು ನಿಜವಾದ ಪ್ರೀತಿ ಉಕ್ಕಿ ಹರಿದಿರುವುದರ ಸಂಕೇತವಾಗಿ ಕಾಣಿಸುತ್ತಿಲ್ಲ. ಇದರ ಹಿಂದೆ ದೇಶದಲ್ಲಿ ಮತ್ತೊಂದು 'ಕೋಮು ರಾಜಕಾರಣ' ಹುಟ್ಟುಹಾಕುವ ಮತ್ತು ರಾಜಕೀಯ ಲಾಭ ಪಡೆಯುವ ಷಡ್ಯಂತ್ರ ಇದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.
ಪಾಕ್ ಪ್ರಧಾನಿ ಹೇಳಿಕೆ ಕುರಿತು ಖಂಡನೆ
ಹಿಂದೂ ಧರ್ಮ ಅತ್ಯಂತ ಕೆಟ್ಟ ಧರ್ಮ ಎಂದು ಪಾಕಿಸ್ತಾನದ ಪ್ರಧಾನಿ ಷೇಬಾಜ್ ಷರೀಫ್ ನೀಡಿರುವ ಹೇಳಿಕೆ ಕುರಿತು ಮಾತನಾಡಿದ ಸಿ.ಟಿ. ರವಿ ಅವರು, 'ಧರ್ಮ ಎಂದರೆ ಏನು ಅನ್ನೋದರ ಅರ್ಥವೇ ಅವರಿಗೆ ಗೊತ್ತಿಲ್ಲ. ಭಾರತದಲ್ಲಿ 'ದಯೆಯೇ ಧರ್ಮದ ಮೂಲವಯ್ಯ' ಎಂಬ ಸಿದ್ಧಾಂತ ಇದೆ. ವ್ಯಾಪಾರದಲ್ಲಿ ಮೋಸ ಮಾಡದಿರುವುದೇ ಧರ್ಮ ಎಂದು ನಾವು ನಂಬುತ್ತೇವೆ. ಆದರೆ, ಮೋಸವನ್ನೇ ವೃತ್ತಿ, ಕೊಲ್ಲುವುದನ್ನೇ ಕಾಯಕ ಮಾಡಿಕೊಂಡವರಿಗೆ ಧರ್ಮದ ಅರ್ಥ ಆಗುವುದಿಲ್ಲ. ಅವನು 'ರಾಕ್ಷಸ ಸಂತಾನ' ಎಂದು ಸಿ.ಟಿ. ರವಿ ಪಾಕಿಸ್ತಾನ ಪ್ರಧಾನಿ ಷರೀಫ್ ಹೇಳಿಕೆಯನ್ನು ಖಂಡಿಸಿದರು.
