ಮಲೆನಾಡಲ್ಲಿ ಮಳೆ ಇಲ್ಲದೆ ಬೆಳೆ ನಾಶ; 2 ದಿನದಲ್ಲಿ ಇಬ್ಬರು ರೈತರ ಸಾವು!
ಮಲೆನಾಡಲ್ಲಿ ಮಳೆಗಾಲದ ಬಿಸಿಲಿಗೆ ಜನ ಛತ್ರಿ ಇಟ್ಕೊಂಡು ಓಡಾಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡ ದಶದಿಕ್ಕುಗಳಲ್ಲೂ ಮಲೆನಾಡಿಗರು ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.1) : ಮಲೆನಾಡಲ್ಲಿ ಮಳೆಗಾಲದ ಬಿಸಿಲಿಗೆ ಜನ ಛತ್ರಿ ಇಟ್ಕೊಂಡು ಓಡಾಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡ ದಶದಿಕ್ಕುಗಳಲ್ಲೂ ಮಲೆನಾಡಿಗರು ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದಾರೆ.
ಅಡಿಕೆ-ತೆಂಗು-ಕಾಫಿ-ಮೆಣಸು, ಆಹಾರ ಧಾನ್ಯ ಎಲ್ಲಾ ಬೆಳೆಗಳಿಗೂ ಒಂದೇ ಪ್ರಾಬ್ಲಂ ನೀರು ನೀರು ನೀರು! ಮಲೆನಾಡ ರೈತರು ಮಳೆಯಾಗುವ ಆಶಾವಾದದಲ್ಲಿದ್ದಾರೆ. ಆದ್ರೆ, ಅದರಲ್ಲೂ ಬಯಲುಸೀಮೆ ಭಾಗದ ರೈತರು ಮಳೆಗಾಲದ ಮಳೆ ಸ್ಥಿತಿ ಕಂಡು ಮಳೆಯಾಗುವ ಆಸೆಯನ್ನೇ ಕೈಚೆಲ್ಲಿದ್ದಾರೆ. ಆದ್ರೆ, ಹಾಕಿದ ಬೆಳೆ. ಮಾಡಿದ ಸಾಲಕ್ಕೆ ನೊಂದ ರೈತರು ಆತ್ಮಹತ್ಯೆಯ ದಾರಿ ಹಿಡಿದ್ದಾರೆ.
ಮಲೆನಾಡಲ್ಲಿ ಮಳೆ ಕೊರತೆ: ತಾಪಮಾನದಿಂದ ಕಾಫಿ , ಕಾಳು ಮೆಣಸು ನಾಶ!
ಮಲೆನಾಡಲ್ಲಿ ಈ ಬಾರಿ ಮಳೆಗೆ ಬರ :
ಸಪ್ತ ನದಿಗಳ ನಾಡು ಅಂತೆಲ್ಲಾ ಕರೆಸಿಕೊಳ್ಳೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಮಳೆಗೆ ಬರ ಬಂದಿದೆ. ಮಲೆನಾಡಿಗರು ಮಳೆಗಾಲದಲ್ಲಿ ಕಾಣದ ಬಿಸಿಲನ್ನ ಕಾಣ್ತಿದ್ದಾರೆ. ಆದ್ರೆ, ಬಯಲುಸೀಮೆ ಭಾಗದಲ್ಲಿ ರೈತರು ಮಳೆ ಇಲ್ಲದೆ ಉಸಿರು ಚೆಲ್ಲುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಮಳೆಯೇ ಕಡಿಮೆ ಆಗಿದೆ. ವಾಡಿಕೆ ಮಳೆಯಲ್ಲೂ ಅರ್ಧ ಮಳೆಯೂ ಬಂದಿಲ್ಲ.
ಕಳೆದ ಐದು ವರ್ಷಗಳಿಂದ ಮಳೆರಾಯನ ಅಬ್ಬರ ಕಂಡಿದ್ದ ರೈತರು ಸಾಲ ಮಾಡಿ, ಹೆಂಡತಿ-ಮಕ್ಕಳ ಒಡವೆ ಅಡವಿಟ್ಟು ಬೆಳೆ ಹಾಕಿದ್ರು. ಆದ್ರೆ, ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಿನ್ನೆಲೆ ಅಜ್ಜಂಪುರ ತಾಲೂಕಿನ ಈರುಳ್ಳಿ ಬೆಳೆ ಬೆಳೆದಿದ್ದ ಸತೀಶ್ ಹಾಗೂ ಪರಮೇಶ್ವರಪ್ಪ ಎಂಬ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರೈತರ ಆತ್ಮಹತ್ಯೆಗೆ ಕಳವಳ ವ್ಯಕ್ತಪಡಿಸಿರೋ ರೈತ ಸಂಘ, ಸರ್ಕಾರ ಸಾವಿಗೀಡದ ಇಬ್ಬರು ರೈತರ ಕುಟುಂಬದ ಜವಾಬ್ದಾರಿಯನ್ನ ಸರ್ಕಾರವೇ ಹೊರಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸರ್ಕಾರದ ವಿರುದ್ಧ ಅಸಮಾಧಾನ :
ಕಳೆದ ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 11 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲಿ ಅಜ್ಜಂಪುರ ತಾಲೂಕಿನಲ್ಲಿ ಎರಡು ದಿನದಲ್ಲಿ ಇಬ್ಬರು ರೈತರು ಮಳೆ ಇಲ್ಲ, ಬೆಳೆ ಇಲ್ಲ, ಮಾಡಿದ ಸಾಲ ಹಾಗೇ ಇದೆ. ಹೇಗೆ ತೀರಿಸೋದು ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮಧ್ಯೆ ರೈತರು ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ಎಲ್ಲಾ ಫ್ರೀ ಫ್ರೀ ಅಂತಿದೆ. ರೈತರಿಗೆ ಏನು ಫ್ರೀ ನೀಡಿದೆ. ಗೊಬ್ಬರದ ದರ ಡಬಲ್. ಬಿತ್ತನೆ ಬೀಜದ ದರವೂ ಜಾಸ್ತಿ. ಮಳೆ ಇಲ್ಲ.ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದಲೂ ಮಹಿಳೆಯರು ಕೂಲಿ ಕೆಲಸಕ್ಕೆ ಬರುತ್ತಾ ಇಲ್ಲ , ಹೊಲಗದ್ದೆಗಳಲ್ಲಿ ಕಳೆ ಕೀಳೋರು ಯಾರೂ ಇಲ್ಲ. ಸರ್ಕಾರ ರೈತರಿಗೆ ಏನು ಫ್ರೀ ನೀಡಿದೆ. ರೈತರಿಗೆ ಒಂದಷ್ಟು ಫ್ರೀ ಕೊಡಲಿ ಎಂದು ರೈತ ಸೋಮೇಗೌಡ ಆಗ್ರಹಿಸಿದ್ದಾರೆ.
'ದಕ್ಷಿಣ ಕಾಶ್ಮೀರ' ಖ್ಯಾತಿಯ ಕೊಡಗಿನಲ್ಲೀಗ ಭೀಕರ ಬರ; ಬಿರುಕು ಬಿಟ್ಟ ನೆಲ!
ಒಟ್ಟಾರೆ ಮಳೆ ಇದ್ರೆ ಬೆಳೆ. ಬೆಳೆ ಇದ್ರೆ ಬದುಕು. ಆದ್ರೆ, ಮಳೆ ಇಲ್ಲದೆ ಬೆಳೆ ಹಾಳಾಯ್ತು ಎಂದು ಅನ್ನದಾತ ನೇಣಿನ ಕುಣಿಕೆಗೆ ಕೊರಳೊಡ್ತಿರೋದು ನಿಜಕ್ಕೂ ದುರಂತ. ಹೀಗಾಗಿ ಬರಪೀಡಿತ ಪ್ರದೇಶವೆಂದು ಘೋಷಸಿ ಸರ್ಕಾರ ರೈತರಿಗೆ ನೆರವಿಗೆ ನಿಲ್ಲಬೇಕು ಎಂದು ರೈತರು ಮನವಿ ಮಾಡಿದ್ದಾರೆ.