'ದಕ್ಷಿಣ ಕಾಶ್ಮೀರ' ಖ್ಯಾತಿಯ ಕೊಡಗಿನಲ್ಲೀಗ ಭೀಕರ ಬರ; ಬಿರುಕು ಬಿಟ್ಟ ನೆಲ!
ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇಂದು ಇಂತಹ ಭೀಕರತೆ ಕಾಣಿಸುತ್ತಿದೆ ಎಂದರೆ ಅದು ಇನ್ಯಾವ ಮಟ್ಟಿಗೆ ಬರ ಎದುರಾಗಿದೆ ಎನ್ನುವುದನ್ನು ಊಹಿಸಿಕೊಳ್ಳಿ. ಜನೆವರಿಯಿಂದ ಇದುವರೆಗೆ ಶೇ 45 ರಷ್ಟೇ ಮಳೆಯಾಗಿದ್ದು, 55 ರಷ್ಟು ಮಳೆ ಕೊರತೆಯಾಗಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.1) : ಕೊಡಗು ಜಿಲ್ಲೆ ಅಂದರೆ ಯಾವಾಗಲೂ ಮಳೆ ಸುರಿಯುತ್ತೆ, ಮನೆಬಿಟ್ಟು ಆಚೆಗೂ ಓಡಾಡುವುದಕ್ಕೆ ಆಗಲ್ಲ ಎಂದು ಹೊರ ಜಿಲ್ಲೆಯ ಜನರು ಕೊಡಗಿಗೆ ಬರುವುದಕ್ಕೂ ಹಿಂಜರಿಯುತ್ತಿದ್ದರು. ಆದರೀಗ ವರುಣ ಮುನಿಸಿಕೊಂಡಿದ್ದರಿಂದ ಬಿತ್ತಿದ ಬೆಳೆಯೂ ಕೈಸೇರುವುದಿಲ್ಲ ಎಂದು ರೈತರು ಮುಗಿಲತ್ತ ನೋಡುತ್ತಿದ್ದಾರೆ. ಒಂದು ಹನಿಯೂ ನೀರಿಲ್ಲದೆ ಒಣಗಿ ಬಿರುಕುಬಿಟ್ಟ ಗದ್ದೆಗಳು, ಒಣಗಿ ತರಗೆಲೆಯಂತಾಗಿರುವ ಮೆಕ್ಕೆ ಜೋಳ. ದನಗಳಾದರೂ ತಿನ್ನಲಿ ಎಂದು ಜೋಳವನ್ನು ಕೊಯ್ದು ಜಾನುವಾರುಗಳಿಗೆ ಹಾಕುತ್ತಿರುವ ರೈತರು. ಇದು ಮಲೆನಾಡು, ದಕ್ಷಿಣ ಕಾಶ್ಮೀರ ಎಂದೆಲ್ಲಾ ಖ್ಯಾತಿಯಾಗಿದ್ದ ಕೊಡಗು ಜಿಲ್ಲೆಯ ಚಿತ್ರಣ.
ಹೌದು ಇದು ಅಚ್ಚರಿ ಎನಿಸಿದರು ಸತ್ಯ. ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಕೊಡಗು ಜಿಲ್ಲೆಯಲ್ಲೂ ಇಂತಹ ಭೀಕರತೆ ಕಾಣಿಸುತ್ತಿದೆ ಎಂದರೆ ಅದು ಇನ್ಯಾವ ಮಟ್ಟಿಗೆ ಬರ ಎದುರಾಗಿದೆ ಎನ್ನುವುದನ್ನು ಊಹಿಸಿಕೊಳ್ಳಿ. ಜನೆವರಿಯಿಂದ ಇದುವರೆಗೆ ಶೇ 45 ರಷ್ಟೇ ಮಳೆಯಾಗಿದ್ದು, 55 ರಷ್ಟು ಮಳೆ ಕೊರತೆಯಾಗಿದೆ. ಜೂನ್ ಮತ್ತು ಆಗಸ್ಟ್ ತಿಂಗಳಲ್ಲೇ ಕನಿಷ್ಠ 189 ಸೆಂಟಿ ಮೀಟರ್ ಮಳೆ ಸುರಿಯಬೇಕಾಗಿತ್ತು. ಆದರೆ ಈ ಬಾರಿ ಎರಡು ತಿಂಗಳಲ್ಲಿ ಕೇವಲ 102 ಸೆಂಟಿ ಮೀಟರ್ ಮಳೆಯಾಗಿದೆ.
8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ 4.5 ಟಿಎಂಸಿ ಮಾತ್ರವೇ ನೀರು ಲಭ್ಯ!
ಜಿಲ್ಲೆಯಲ್ಲಿ 29 ಸಾವಿರ ಹೆಕ್ಟೇರ್ ನಷ್ಟು ಭತ್ತದ ಬೆಳೆ ಬಿತ್ತನೆಯ ಗುರಿಹೊಂದಲಾಗಿತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ 18.117 ಹೆಕ್ಟೇರ್ ಮಾತ್ರವೇ ಬಿತ್ತನೆ ಮಾಡಲಾಗಿದೆ. ಜುಲೈ ತಿಂಗಳ ಕೊನೆಯಲ್ಲಿ ಸುರಿದ ಮಳೆಯನ್ನು ನಂಬಿಕೊಂಡು ಭತ್ತದ ಮಡಿ ಮಾಡಿದ್ದರು. ನಿರೀಕ್ಷೆಯಷ್ಟು ಮಳೆ ಬಾರದ ಹಿನ್ನಲೆಯಲ್ಲಿ ಅವುಗಳನ್ನು ಕಿತ್ತು ನಾಟಿ ಮಾಡಲಾಗಿಲ್ಲ.
ಹೀಗಾಗಿ ಮಡಿಗಳಲ್ಲೇ ಸಸಿಗಳು ಉಳಿದಿದ್ದು ಅವುಗಳಿಗೆ ಕೊಳವೆ ಬಾವಿಗಳಿಂದ ನೀರು ಹಾಯಿಸುತ್ತಿದ್ದಾರೆ. ಭತ್ತದ ಸಸಿ ನಾಟಿ ಮಾಡುವುದಕ್ಕಾಗಿ ಹದ ಮಾಡಿಕೊಂಡಿದ್ದ ಗದ್ದೆಗಳು ನೀರಿಲ್ಲದೆ ಒಣಗಿ ಬಿರುಕು ಬಿಟ್ಟಿವೆ. ಹೀಗಾಗಿ ರೈತರು ಇಂದು ಮಳೆ ಬರಬಹುದೇ, ನಾಳೆ ಬರಬಹುದೇ ಎಂದು ಆಕಾಶದತ್ತ ಮುಖ ಮಾಡಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ ರೈತ ವಿಶ್ವಕುಮಾರ್.
ಗದ್ದೆಗಳ ಕತೆ ಹೀಗಾದರೆ ಕುಶಾಲನಗರ, ಸೋಮವಾರಪೇಟೆ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ರೈತರ ಮೆಕ್ಕೆ ಜೋಳದ ಬೆಳೆ ಒಣಗಿ ಹೋಗುತ್ತಿದೆ. ಜೋಳದ ಮ್ಯಾತೆಗಳು ಸಣ್ಣದಾಗಿ ಬಂದಿದ್ದು ಹತ್ತರಿಂದ ಹದಿನೈದು ಕಾಳುಗಳಿಗೆ ಬೆಳವಣಿಗೆ ಕುಂಠಿತವಾಗಿದೆ.
ಹೀಗೆ ಬಂದಿರುವ ಜೋಳದಿಂದ ಒಂದು ಎಕರೆಗೆ ಏಳು ಕ್ವಿಂಟಾಲ್ ಇಳುವರಿ ಬಂದರೂ ಹೆಚ್ಚು ಎನ್ನುವಂತಾಗಿದೆ. ಬಂದಿರುವ ಜೋಳ ಕೂಡ ಒಣಗಿ ಹೋಗುತ್ತಿದ್ದು ಬೇರೆ ದಾರಿಯಿಲ್ಲದೆ ಜೋಳದ ಬೆಳೆಯನ್ನು ದನಗಳಿಗೆ ಕೊಯ್ದು ಹಾಕುತ್ತಿದ್ದೇವೆ ಎಂದು ರೈತ ಪವಿತ್ರ ಅಳಲು ತೋಡಿಕೊಂಡಿದ್ದಾರೆ.
ಸಹಕಾರ ಸಂಘಗಳಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು, ಸ್ವಸಹಾಯ ಸಂಘಗಳಲ್ಲೂ ಸಾಲ ಮಾಡಿ ಜೋಳದ ಬೆಳೆ ಬೆಳೆದಿದ್ದರು. ಆದರೀಗ ಎಲ್ಲವೂ ಒಣಗಿ ಹೋಗುತ್ತಿದ್ದು ಮಾಡಿದ ಸಾಲವನ್ನಾದರೂ ತೀರಿಸುವುದು ಹೇಗೆ ಎಂದು ರೈತರ ಮಹಿಳೆ ಸುಶೀಲ ಕಣ್ಣೀರಿಟ್ಟಿದ್ದಾರೆ.
ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಹೊಲಗದ್ದೆಗಳಿಗೆ ಬಂದು ಪರಿಶೀಲಿಸಿ ನಮಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದು ಒಂದೇ ದಾರಿ ಎನ್ನುವಂತೆ ಆಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೊಡಗು: ತವರಿನಲ್ಲೇ ಬರಿದಾಗುತ್ತಿದೆ ಕಾವೇರಿ ಒಡಲು!
ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆಯ ಕೊರತೆ ಎದುರಾಗಿದ್ದು ಬೇಸಿಗೆಯಂತಹ ವಾತಾವರಣ ಕಂಡು ಬರುತ್ತಿದೆ. ಬರದ ಛಾಯೇ ಹೀಗೆ ಮುಂದುವರಿದರೆ ಬೆಳೆಯ ಮಾತಿರಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವುದರಲ್ಲಿ ಅಚ್ಚರಿಯಿಲ್ಲ.