ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಳೇ ಪ್ರದೇಶದಲ್ಲಿ, ಕಾಳಿ ನದಿಯ ತೀರದಲ್ಲಿ ಅಳವಡಿಸಲಾಗಿದ್ದ ಸುರಕ್ಷತಾ ಬೇಲಿಯನ್ನು ಬೃಹತ್ ಮೊಸಳೆಯೊಂದು ದಾಟಿ ಬಂದಿದೆ. ಬಟ್ಟೆ ಒಗೆಯುವ ಸ್ಥಳದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ವಾಪಸ್ ನದಿಗೆ ತೆರಳಿದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕಾರವಾರ, ಉತ್ತರಕನ್ನಡ (ಅ.26): ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೇ ದಾಂಡೇಲಿ ಪ್ರದೇಶದಲ್ಲಿ ಮತ್ತೊಮ್ಮೆ ಮೊಸಳೆಯ ಪ್ರತ್ಯಕ್ಷವಾಗಿದೆ. ಬೃಹತ್ ಮೊಸಳೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕಾಳಿ ನದಿಯಲ್ಲಿ ಮೊಸಳೆಗಳಿಂದ ರಕ್ಷಣೆಗಾಗಿ ಅರಣ್ಯ ಇಲಾಖೆ ಮತ್ತು ದಾಂಡೇಲಿ ನಗರಾಡಳಿತ ಹಾಕಿದ್ದ ತಂತಿ ಬೇಲಿಯನ್ನು ಲೆಕ್ಕಿಸದೇ ದಾಟಿ ಬಂದ ಬೃಹತ್ ಗಾತ್ರದ ಮೊಸಳೆ, ಬಟ್ಟೆ ಒಗೆಯುವ ಸ್ಥಳದಲ್ಲಿ ಕೊಂಚ ಹೊತ್ತು ವಿಶ್ರಾಂತಿ ಪಡೆದು ವಾಪಸ್ ಆಗಿದೆ. ಈ ದೃಶ್ಯ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
ಮೊಬೈಲ್‌ನಲ್ಲಿ ಸೆರೆಯಾಯ್ತು ಬೃಹತ್ ಮೊಸಳೆ:
ಹಳೇ ದಾಂಡೇಲಿಯ ನಿವಾಸಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದ ಈ ಭಯಾನಕ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ! ವಿಡಿಯೋದಲ್ಲಿ ಮೊಸಳೆ ಬೇಲಿ ದಾಟಿ ದಡದಲ್ಲಿ ಆರಾಮವಾಗಿ ಮಲಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕೆಲವು ಕ್ಷಣಗಳ ನಂತರ ಅದು ತನ್ನಷ್ಟಕ್ಕೇ ಬೇಲಿ ನಡುವೆ ಮತ್ತೆ ನದಿಗೆ ಹಿಂದಿರುಗಿದೆ ಎಂದು ತಿಳಿದುಬಂದಿದೆ.
ಸುರಕ್ಷತಾ ಕ್ರಮಗಳ ಮೇಲೆ ಪ್ರಶ್ನೆ!
ಅರಣ್ಯ ಇಲಾಖೆ ಹಾಕಿದ್ದ ಬೇಲಿಯನ್ನು ಮೊಸಳೆ ಇಷ್ಟು ಸುಲಭವಾಗಿ ದಾಟಿರುವುದು ಸಾರ್ವಜನಿಕರ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ. 'ಇದು ಎಷ್ಟು ಸುರಕ್ಷಿತ? ಮುಂದೆ ಇದೇ ರೀತಿ ಸಾರ್ವಜನಿಕ ಪ್ರದೇಶಗಳಿಗೆ ನುಗ್ಗಿದರೆ ಏನು ಮಾಡುವುದು? ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
