ಬೆಂಗಳೂರು (ಆ.19): ಲಾಕ್‌ಡೌನ್‌ ಜಾರಿ ಮುನ್ನ ಹಾಗೂ ಲಾಕ್‌ಡೌನ್‌ ವಾಪಸ್‌ ತೆಗೆದುಕೊಂಡ ವೇಳೆ ಮದ್ಯದ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಕಳ್ಳತನದ ವ್ಯಾಪಾರ ಎಂದು ಪರಿಗಣಿಸಿ, ಮದ್ಯ ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವಿಧಾನಮಂಡಲದ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿ​ಎ​ಸಿ​)’ ಸೂಚನೆ ನೀಡಿದೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಮಿತಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ್‌, ಲಾಕ್‌ಡೌನ್‌ ಅವಧಿಯಲ್ಲಿ ಮದ್ಯ ಮಾರಾಟ ಸೇರಿದಂತೆ ಅನೇಕ ಅನಪೇಕ್ಷಣಿಯ ವ್ಯಾಪಾರ, ವ್ಯವಹಾರಗಳು ನಡೆದಿವೆ. ಆ ಅವಧಿಯಲ್ಲಿ ಮದ್ಯ ಮಾರಾಟ ಮಾಡಿರುವುದು ಅಕ್ರಮ ಎಂದು ಪರಿಗಣಿಸಬೇಕು. ಡಿಸ್ಟಿಲರಿಗಳಲ್ಲಿ ಮದ್ಯಸಾರ ಉತ್ಪಾದನೆ, ತಯಾರಿಕೆ ಹಾಗೂ ಉತ್ಪಾದನೆಯ ಅಂಕಿ-ಅಂಶಗಳ ನಡುವೆ ವ್ಯತ್ಯಾಸವಾಗುತ್ತಿರುವುದರಿಂದ ರಾಜ್ಯ ಸರ್ಕಾರಕ್ಕೆ ಕೊಟ್ಯಂತರ ರು. ನಷ್ಟವಾಗುತ್ತಿದೆ ಎಂದು ಸಮಿತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಇಲ್ಲಿಯ ಜನರಿಗೆ ಐದು ತಿಂಗಳ ನಂತರ ಮದ್ಯದಂಗಡಿ ಓಪನ್ ಭಾಗ್ಯ!

ಸಾರಾಯಿ ಮಾರಾಟ ನಿಷೇಧಿಸಿದ ನಂತರ ಸಾರಾಯಿ ಮಾರಾಟಗಾರರಿಗೆ ಯಾವುದೇ ಪುನರ್‌ವಸತಿ ಕಲ್ಪಿಸದೇ ಇರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು ಎಂದು ವಿವರಿಸಿದರು.

ಸೊಲ್ಲಾಪುರದ ಡಾಬಾಗಳಲ್ಲಿ ಹಾಗೂ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲಾಖೆಯ ಆದಾಯ ಕ್ರೋಡೀಕರಣದಲ್ಲಿ ಆಗುತ್ತಿರುವ ಸೋರಿಕೆಯ ಬಗ್ಗೆ ಚರ್ಚೆಯಾಗಿದೆ. ಸೋರಿಕೆಗೆ ಕಡಿವಾಣ ಹಾಕುವ ಸಂಬಂಧ ಸದಸ್ಯರು ಅನೇಕ ಸಲಹೆಗಳನ್ನು ನೀಡಿದರು ಎಂದರು.

ರಾಜ್ಯದ ಗಡಿಭಾಗದ ಸೊಲ್ಲಾಪುರದ ಡಾಬಾಗಳಲ್ಲಿ ಗಾಂಜಾ, ಆಫೀಮು ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಅನೇಕ ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿರುವ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸಿ, ಇಂತಹ ಚಟುವಟಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಗೆ ತಿಳಿಸಲಾಗಿದೆ ಎಂದರು.

ಬೆಂಗಳೂರಿನ ಡಿ.ಜಿ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಹಾಗಾಗಿ ಸಮಿತಿ ಈಗ ಹಸ್ತಕ್ಷೇಪ ಮಾಡುವುದಿಲ್ಲ. ಆದರೂ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಎಚ್‌.ಕೆ. ಪಾಟೀಲ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಭೆಯಲ್ಲಿ ರಮೇಶಕುಮಾರ್‌, ಮುರುಗೇಶ್‌ ನಿರಾಣಿ, ಬಿ.ಕೆ. ಹರಿಪ್ರಸಾದ್‌, ವೈ. ಎ. ನಾರಾಯಣಸ್ವಾಮಿ, ಬಿ.ಸಿ. ನಾಗೇಶ್‌ ಮುಂತಾದವರು ಭಾಗಿಯಾಗಿದ್ದರು.