*  ಕೃಷಿ ಪತ್ತಿನ ಸಹಕಾರಿ ಸಂಘಗಳ ಬಲವರ್ಧನೆಗೂ ಕೇಂದ್ರ ಸರ್ಕಾರ ಕ್ರಮ*  ನಂದಿನಿ ಬ್ರ್ಯಾಂಡ್‌ ಬಗ್ಗೆ ಕೇಂದ್ರ ಸಚಿವ ಪ್ರಶಂಸೆ*  ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ಗೆ ಚಾಲನೆ ನೀಡಿ ಅಮಿತ್‌ ಶಾ ಘೋಷಣೆ 

ಬೆಂಗಳೂರು(ಏ.02): ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರ ವಿಶ್ವವಿದ್ಯಾಲಯ(Sahakara University) ಸ್ಥಾಪಿಸುವುದಾಗಿ ಘೋಷಿಸಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ(Amit Shah), ಸಹಕಾರ ಕ್ಷೇತ್ರದ ಪಾರದರ್ಶಕ ನಿರ್ವಹಣೆಗೆ ನೀತಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ, ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌(Credit Card) ವಿತರಿಸಲು ಉದ್ದೇಶಿಸಿದ್ದು, ಆ ಯೋಜನೆ ಕರ್ನಾಟಕದಿಂದಲೇ(Karnataka)ಪ್ರಾಯೋಗಿಕವಾಗಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಂಗಳೂರು ಅರಮನೆಯಲ್ಲಿ ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಮೇಳದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ನ ಲಾಂಛನ ಬಿಡುಗಡೆ ಮತ್ತು ಸೌಹಾರ್ದ ಸಹಕಾರಿ ಸೌಧವನ್ನು ವರ್ಚುವಲ್‌ ಮೂಲಕ ಉದ್ಘಾಟನೆ ಅವರು ಮಾತನಾಡಿದರು.

Tumakuru: ಉತ್ತ​ರ​ದಲ್ಲಿ ಗಂಗೆ, ದಕ್ಷಿ​ಣದಲ್ಲಿ ಸಿದ್ಧ​ಗಂಗೆ: ಕೇಂದ್ರ ಸಚಿವ ಅಮಿತ್‌ ಶಾ

ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಮೂಲಕ ಎಲ್ಲಾ ಹಾಲು ಉತ್ಪಾದಕರಿಗೆ ಕ್ರೆಡಿಟ್‌ ಕಾರ್ಡ್‌ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇದು ಕೇಂದ್ರದ ಯೋಜನೆಯಾಗಿದ್ದು, ಪ್ರಾಯೋಗಿಕವಾಗಿ ಕರ್ನಾಟಕದಿಂದಲೇ ಆರಂಭವಾಗಲಿ. ಇದಕ್ಕೆ ಬೇಕಾದ ಎಲ್ಲ ಸಹಕಾರ-ಸಹಾಯವನ್ನು ಕೇಂದ್ರ ಸರ್ಕಾರ(Central Government) ನೀಡಲಿದೆ ಎಂದು ಆಶ್ವಾಸನೆ ನೀಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಿದ್ದು, ಕಾನೂನು ತರಲು ಮುಂದಾಗಿದೆ. ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗುತ್ತಿದೆ. ನಂತರ ಎಲ್ಲಾ ರಾಜ್ಯಗಳಿಗೂ ಅದನ್ನು ಕಳುಹಿಸಿಕೊಡಲಾಗುವುದು. ಕಾನೂನು ಅಳವಡಿಕೆ ಮಾಡಿಕೊಂಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಶಾ ತಿಳಿಸಿದರು.
ಸಹಕಾರ ರಂಗದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಹಕಾರ ವಿಶ್ವವಿದ್ಯಾಲಯ ಆರಂಭಿಸಲಾಗುವುದು. ಸಹಕಾರ ಕ್ಷೇತ್ರವು ಸರ್ಕಾರದ ಹಸ್ತಕ್ಷೇಪ ಇಲ್ಲದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಹಕಾರ ನೀತಿಯನ್ನು ಸಹ ಜಾರಿಗೊಳಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.

ಸಹಕಾರ ಆಂದೋಲನವು ಕರ್ನಾಟಕ ರಾಜ್ಯದಿಂದ ಆರಂಭಗೊಂಡಿದೆ. ಅಮೂಲ್‌ ಸಂಸ್ಥೆ, ಲಿಜ್ಜತ್‌ ಪಾಪಡ್‌ ಹೆಸರಲ್ಲಿ ಮಹಿಳೆಯರು(Women) ತಯಾರಿಸಿದ ಹಪ್ಪಳ ರಫ್ತು, ಕ್ರಿಬ್ಕೊದಂತಹ ಸಹಕಾರ ಸಂಸ್ಥೆಗಳು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿವೆ. ಇವೆಲ್ಲವು ಆಂದೋಲನದ ಫಲಶೃತಿಯಾಗಿದೆ. ಇದರೊಂದಿಗೆ ಕರ್ನಾಟಕದ ನಂದಿನಿ ಬ್ರ್ಯಾಂಡ್‌ ಸಹ ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಬಹು ಸಾಮರ್ಥ್ಯ ಇರುವ ಸಹಕಾರಿ ಕ್ಷೇತ್ರವು ಗ್ರಾಮೀಣ ಅಭಿವೃದ್ಧಿಯ ಜತೆಗೆ ದೇಶದ ಆರ್ಥಿಕತೆಗೆ ಹೊಸ ದಿಕ್ಕು ನೀಡಿದೆ. ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಕಷ್ಟುಅವಕಾಶಗಳು ಇವೆ. ಜತೆ ಜತೆಗೆ ಸವಾಲುಗಳೂ ಇವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲದಿದ್ದರೆ ಸಹಕಾರ ಆಂದೋಲನ ಕಷ್ಟಕರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಾವೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿದ್ದೇವೆ. ಈ ವೇಳೆ ನಾವೆಲ್ಲ ಒಂದು ಸಂಕಲ್ಪ ಮಾಡಬೇಕು. ಅಮೃತ ಮಹೋತ್ಸವದಿಂದ ಶತಮಾನೋತ್ಸವದ ವೇಳೆಗೆ ದೇಶದ ಗ್ರಾಮೀಣ ಭಾಗದ ಪ್ರತಿ ಮನೆಗೂ ಸಹಕಾರ ಆಂದೋಲನವನ್ನು ಮುಟ್ಟಿಸುವ ಕೆಲಸ ಮಾಡಬೇಕು. ಈ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಅಮಿತ್‌ ಶಾ ಪ್ರತಿಪಾದಿಸಿದರು.

ಗ್ರಾಮೀಣ ವಿಕಾಸದಲ್ಲಿ ಸಹಕಾರ ಕ್ಷೇತ್ರದ ಅನಿವಾರ್ಯತೆ ಸೃಷ್ಟಿಯಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕು. ಚುನಾವಣೆ, ಮುಂಬಡ್ತಿ, ನೇಮಕಾತಿ, ಖರೀದಿ ಪ್ರಕ್ರಿಯೆಗಳು ಪಾರದರ್ಶಕವಾಗಬೇಕು. ಇದಕ್ಕಾಗಿ ಜೆಮ್‌ (ಗವರ್ನಮೆಂಟ್‌ ಇ-ಮಾರ್ಕೆಟ್‌ಪ್ಲೇಸ್‌) ಎಂಬ ಹೊಸ ಸಾಫ್‌್ಟವೇರ್‌ ರೂಪಿಸಲಾಗಿದೆ. ಇದರಿಂದ ಭ್ರಷ್ಟಾಚಾರ ಶೂನ್ಯಕ್ಕಿಳಿಯಲಿದೆ. ಅಲ್ಲದೇ, ಪ್ಯಾಕ್ಸ್‌, ಡಿಸಿಸಿ, ರಾಜ್ಯ ಸಹಕಾರ ಬ್ಯಾಂಕ್‌ ಮತ್ತು ನಬಾರ್ಡ್‌ಗಳನ್ನು ಡಿಜಿಟಲೀಕರಣಗೊಳಿಸಿ ಎಲ್ಲದಕ್ಕೂ ಒಂದೇ ಸಾಫ್ಟ್‌ವೇರ್‌ ಮಾಡಲಾಗುವುದು. ಇದು ಎಲ್ಲಾ ರಾಜ್ಯ ಭಾಷೆಯಲ್ಲಿಯೂ ಲಭ್ಯವಾಗಲಿದೆ ಎಂದು ತಿಳಿಸಿದರು.

Karnataka Politics: ವಿಜಯೇಂದ್ರಗೆ ಭೇಷ್‌ ಎಂದ ಅಮಿತ್‌ ಶಾ

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ, ಭಗವಂತ್‌ ಖೂಬಾ, ರಾಜ್ಯದ ಸಚಿವರಾದ ಎಸ್‌.ಟಿ.ಸೋಮಶೇಖರ್‌, ಆರ್‌.ಅಶೋಕ್‌, ಆರಗ ಜ್ಞಾನೇಂದ್ರ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಪ್ರಭು ಚವ್ಹಾಣ್‌, ಬಿ.ಸಿ.ಪಾಟೀಲ್‌, ಶಿವರಾಂ ಹೆಬ್ಬಾರ್‌, ಶಶಿಕಲಾ ಜೊಲ್ಲೆ, ಕೆ.ಗೋಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸಹಕಾರಿ ರಂಗದಲ್ಲಿ ಕರ್ನಾಟಕ ಎ ಗ್ರೇಡ್‌:

ಸಹಕಾರಿ ರಂಗದ ರೂವಾರಿ ಸಿದ್ಧನಗೌಡ ಪಾಟೀಲ್‌ ಅವರನ್ನು ನೆನೆದು ಅವರಿಗೆ ನಮಸ್ಕರಿಸಿ ಭಾಷಣ ಆರಂಭಿಸಿದ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ, ಸಹಕಾರಿ ಆಂದೋಲನದಲ್ಲಿ ಕರ್ನಾಟಕ ರಾಜ್ಯ ಎ ಗ್ರೇಡ್‌ನಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

1905ರಲ್ಲಿ ಸಹಕಾರ ಸಂಸ್ಥೆ ಆರಂಭಿಸುವ ಮೂಲಕ ಇಡೀ ದೇಶದಲ್ಲಿಯೇ ಸಹಕಾರ ಆಂದೋಲನ ಆರಂಭವಾಯಿತು. ಮಹಾತ್ಮ ಗಾಂಧೀಜಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರೇರಣೆಯೊಂದಿಗೆ ಗದಗ ಜಿಲ್ಲೆಯ ಗ್ರಾಮವೊಂದರಲ್ಲಿ ದೇಶದ ಮೊದಲ ಸಹಕಾರ ಸಂಸ್ಥೆ ಆರಂಭವಾಯಿತು. ದೇಶದಲ್ಲಿ ಸಹಕಾರ ಚಳವಳಿ ಯಶಸ್ವಿಯಾಗುವುದರ ಹಿಂದೆ ಕರ್ನಾಟಕದ ಪಾತ್ರ ಬಹುದೊಡ್ಡದಿದೆ. ಈ ವಿಚಾರದಲ್ಲಿ ಕರ್ನಾಟಕ ಎ ಗ್ರೇಡ್‌ ಸ್ಥಾನದಲ್ಲಿದೆ. ಕರ್ನಾಟಕ ಸಹಕಾರ ಆಂದೋಲನವು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಾಧನೆ ಮಾಡಿದೆ ಎಂದು ಹೇಳಿದರು.