ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಹಾಗೂ ಕಾರ್ಮಿಕ ನಾಯಕ ಅನಂತ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನದ ಆಘಾತದಿಂದ ಪತ್ನಿ ಅಸ್ವಸ್ಥರಾಗಿದ್ದು, ಕುಟುಂಬದ ನಿರ್ಧಾರದಂತೆ ಅಂತಿಮ ವಿಧಿವಿಧಾನಗಳ ನಂತರ ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗುವುದು.

ಬೆಂಗಳೂರು (ಜ.28): ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರು ಹಾಗೂ ಹಿರಿಯ ಕಾರ್ಮಿಕ ನಾಯಕ ಅನಂತ ಸುಬ್ಬರಾವ್ ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನೌಕರರ ಹಿತರಕ್ಷಣೆಗಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದ ಸುಬ್ಬರಾವ್ ಅವರ ನಿಧನದಿಂದ ಸಾರಿಗೆ ಇಲಾಖೆಯ ಸಿಬ್ಬಂದಿ ವರ್ಗದಲ್ಲಿ ಶೋಕ ಸಾಗರವೇ ಆವರಿಸಿದೆ. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಅನಂತ ಸುಬ್ಬರಾವ್ ಪತ್ನಿ ಆರೋಗ್ಯದಲ್ಲಿ ಏರುಪೇರು

ಪತಿ ಅನಂತ ಸುಬ್ಬರಾವ್ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿ ನಾಗರತ್ನ ಅವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಇದರಿಂದ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದು, ಕೂಡಲೇ ಸಂಬಂಧಿಕರು ಅವರನ್ನು ವಿಜಯನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪತಿಯ ಅಗಲಿಕೆಯ ನೋವು ತಡೆಯಲಾಗದೆ ಅವರು ಅಸ್ವಸ್ಥರಾಗಿದ್ದು, ಸದ್ಯ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಅಂತಿಮ ದರ್ಶನ ಎಲ್ಲಿ?

ಮಲ್ಲೇಶ್ವರಂನ ಘಾಟೆ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ಅಂತಿಮ ದರ್ಶನಕ್ಕೆ . ಬಳಿಕ ಸಂಜೆ 4 ಗಂಟೆ ಬಳಿಕ ನಿಮ್ಹಾನ್ಸ್ ಆಸ್ಪತ್ರೆಗೆ ಮೃತ ದೇಹ ಹಸ್ತಾಂತರ ಮಾಡಲಿರುವ ಕುಟುಂಬಸ್ಥರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುವ ಸಾಧ್ಯತೆ ಯಿದೆ. ನಾಳೆ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಸೇರಿದಂತೆ ರಾಜ್ಯದ ಪ್ರಮುಖ ಗಣ್ಯರು ಅಂತಿಮ ನಮನ ಸಲ್ಲಿಸಲಿದ್ದಾರೆ.

ವೈದ್ಯಕೀಯ ಕಾಲೇಜಿಗೆ ದೇಹದಾನ

ಅನಂತ ಸುಬ್ಬರಾವ್ ಅವರ ಹಿರಿಯ ಪುತ್ರಿ ರೇಖಾ ಅವರು ಸದ್ಯ ಅಮೆರಿಕದಲ್ಲಿದ್ದು, ಜನವರಿ 30ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಗಳು ಬಂದ ನಂತರವಷ್ಟೇ ಮುಂದಿನ ಕಾರ್ಯಗಳು ನಡೆಯಲಿವೆ. ಕುಟುಂಬದ ನಿರ್ಧಾರದಂತೆ, ಅಂತಿಮ ವಿಧಿವಿಧಾನಗಳ ನಂತರ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.