ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಹಾಗೂ ಹಿರಿಯ ಕಾರ್ಮಿಕ ನಾಯಕ ಅನಂತ್ ಸುಬ್ಬರಾವ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬದುಕಿದ್ದಾಗ ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದ ಅವರು, ಸಾವಿನ ನಂತರವೂ ಶರೀರವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಬೆಂಗಳೂರು (ಜ.29): ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷರು ಹಾಗೂ ದಶಕಗಳ ಕಾಲ ಕಾರ್ಮಿಕರ ಹಿತರಕ್ಷಣೆಗಾಗಿ ಹೋರಾಡಿದ್ದ ಹಿರಿಯ ಕಾರ್ಮಿಕ ನಾಯಕ ಅನಂತ್ ಸುಬ್ಬರಾವ್ ಅವರು ಬುಧವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬದುಕಿದ್ದಾಗ ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದ ಅವರು, ಸಾವಿನ ನಂತರವೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸುಬ್ಬರಾವ್ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರು ನಿಮ್ಹಾನ್ಸ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ನೇತ್ರ, ಮೆದುಳು ದಾನದ ಸಾರ್ಥಕತೆ
ನಿನ್ನೆ ರಾತ್ರಿ ಅವರು ನಿಧನರಾದ ತಕ್ಷಣವೇ ಅವರ ಕುಟುಂಬಸ್ಥರು ಸುಬ್ಬರಾವ್ ಅವರ ಮೆದುಳು ಮತ್ತು ಕಣ್ಣುಗಳನ್ನು ದಾನ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ವೈದ್ಯಕೀಯ ಸಂಶೋಧನೆ ಮತ್ತು ಮತ್ತೊಬ್ಬರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ಈ ಮಹದಾನ ಮಾಡಲಾಗಿದೆ. ಇಂದು ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
ಅಮೆರಿಕದಿಂದ ಬರಲಿರುವ ಪುತ್ರಿಗಾಗಿ ಕಾಯುತ್ತಿರುವ ತಂದೆ!
ಅನಂತ್ ಸುಬ್ಬರಾವ್ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅವರ ಹಿರಿಯ ಪುತ್ರಿ ಪ್ರಸ್ತುತ ಅಮೆರಿಕದಲ್ಲಿದ್ದು, ನಾಳೆ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ತನ್ನ ತಂದೆಯ ಅಂತಿಮ ದರ್ಶನ ಪಡೆಯಲು ಅವರಿಗೆ ಅವಕಾಶ ಕಲ್ಪಿಸಿಕೊಡುವಂತೆ ಕುಟುಂಬಸ್ಥರು ಕೋರಿದ್ದ ಹಿನ್ನೆಲೆಯಲ್ಲಿ, ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಮೃತದೇಹವನ್ನು ನಾಳೆಯವರೆಗೆ ಆಸ್ಪತ್ರೆಯ ಫ್ರೀಜರ್ ಬಾಕ್ಸ್‌ನಲ್ಲಿ ಕಾಯ್ದಿರಿಸಲು ವ್ಯವಸ್ಥೆ ಮಾಡಿದ್ದಾರೆ.

ಹೋರಾಟದ ಹಾದಿ ಅಂತ್ಯ
ಸಾರಿಗೆ ನೌಕರರ ಪ್ರತಿಭಟನೆ, ವೇತನ ಹೆಚ್ಚಳ ಮತ್ತು ಹಕ್ಕುಗಳ ಹೋರಾಟದ ಮುಂಚೂಣಿಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಸುಬ್ಬರಾವ್ ಅವರ ನಿಧನ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿರುವ ಇವರ ಅಂತ್ಯಕ್ರಿಯೆಯ ಬದಲು ದೇಹದಾನ ಮಾಡಿರುವ ನಿರ್ಧಾರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


