ಬೆಂಗಳೂರು(ಜ.03): ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 11 ಸಾವಿರದೊಳಗೆ ಇದೆ. ಹೀಗಾಗಿ ಕೊರೋನಾದ ಅಪಾಯದ ದಿನಗಳು ದೂರವಾಗಿದೆ. ಇದರ ಜತೆಗೆ ಜನವರಿಯಲ್ಲೇ ಲಸಿಕೆ ಕೂಡ ಲಭ್ಯವಾಗಲಿದ್ದು, ಪರಿಸ್ಥಿತಿ ಮತ್ತಷ್ಟುಸುಧಾರಿಸಲಿದೆ ಎಂದು ಆರೋಗ್ಯ ಸಚಿವ ಡಾ ಕೆ. ಸುಧಾಕರ್‌ ಹೇಳಿದ್ದಾರೆ.

ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ವಿತರಣೆಯ ಅಣಕು ಕಾರ್ಯವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್‌, ಅಧಿಕೃತವಾಗಿ ಲಸಿಕೆ ಬಂದ ತಕ್ಷಣದ ಅದರ ಪೂರೈಕೆಗೆ ಪೂರ್ವ ತಯಾರಿ ನಡೆಸಲಾಗಿದೆ. ಇದು ಲಸಿಕೆಯನ್ನು ತ್ವರಿತವಾಗಿ ನೀಡಲು ಸಹಕಾರಿಯಾಗುತ್ತದೆ ಎಂದರು.

ರಾಜ್ಯದಲ್ಲಿ ಈಗಾಗಲೇ ಶೇ.50 ಮಂದಿಗೆ ಕೊರೋನಾ?

‘ಕೋವಿಡ್‌-19ಕ್ಕೆ ಜನವರಿಯಲ್ಲೇ ಲಸಿಕೆ ವಿತರಣೆಯಾಗುವ ನಿರೀಕ್ಷೆ ಇದೆ. ಲಸಿಕೆ ವಿತರಣೆಗೆ ಬೇಕಾದ ಕೋಲ್ಡ… ಸ್ಟೋರೇಜ…, ಸಾರಿಗೆ ವ್ಯವಸ್ಥೆ, ಸಿಬ್ಬಂದಿ ನೇಮಕ ಮೊದಲಾದ ಸಿದ್ಧತೆ ಪೂರ್ಣಗೊಂಡಿದೆ. ಶಿಷ್ಟಾಚಾರದಂತೆ ಲಸಿಕೆ ಹಾಕುವ ಅಣಕು ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದರು.

‘ಕೊರೊನಾ ಲಸಿಕೆಯನ್ನು ಕೊರೊನಾ ಯೋಧರಿಗೆ ಮೊದಲ ಹಂತದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಹೇಳಿದ್ದಾರೆ. ಲಸಿಕೆ ವಿತರಣೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇಂದ್ರ ನೀಡಲಿದೆ. ಅದರಂತೆ ಕ್ರಮ ವಹಿಸಲಾಗುವುದು. ಲಸಿಕೆ ವಿತರಣೆಗೆ ಬೇಕಾದ ಹೆಚ್ಚುವರಿ ಮೂಲಸೌಕರ್ಯವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದು ಸುಧಾಕರ್‌ ಹೇಳಿದರು.

ಬ್ರಿಟನ್‌ ಸೋಂಕು ಅಪಾಯಕಾರಿಯಲ್ಲ!:

ಬ್ರಿಟನ್‌ನಿಂದ ಬಂದವರಲ್ಲಿ 42 ರಲ್ಲಿ 32 ಮಂದಿಗೆ ಕೊರೊನಾ ಪಾಸಿಟಿವ್‌ ಆಗಿತ್ತು. 10 ಜನರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢವಾಗಿದೆ. ಈ ಹತ್ತು ಮಂದಿಗೆ ತೀವ್ರವಾದ ಸಮಸ್ಯೆ ಇಲ್ಲ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಬೇಗನೆ ಗುಣಮುಖರಾಗುವ ವಿಶ್ವಾಸವನ್ನು ಸುಧಾಕರ್‌ ವ್ಯಕ್ತಪಡಿಸಿದರು.

‘ರೂಪಾಂತರಿ ಕೊರೋನಾ ಪ್ರಕರಣಗಳು ನಾಲ್ಕೈದು ಮನೆಗಳಿಗೆ ಸೀಮಿತವಾಗಿದೆ. ಒಂದೇ ಮನೆಯಲ್ಲಿ ಎರಡ್ಮೂರು ಪ್ರಕರಣಗಳಿವೆ. ಈ ಮನೆಗಳಲ್ಲಿ ಹಾಗೂ ಸುತ್ತಮುತ್ತ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸುಧಾಕರ್‌ ತಿಳಿಸಿದರು.