ರಾಜ್ಯದಲ್ಲಿ ಈಗಾಗಲೇ ಶೇ.50 ಮಂದಿಗೆ ಕೊರೋನಾ?
ಈ ತಿಂಗಳು 30 ಜಿಲ್ಲೆಗಳಲ್ಲಿ ಸೆರೋ ಸಮೀಕ್ಷೆ | ಸೋಂಕಿತರು ಮಾಹಿತಿಗೆ ಅಧ್ಯಯನ | ಸೆಪ್ಟೆಂಬರ್‌ನಲ್ಲಿ ಶೇ.27 ಜನರಿಗೆ ಸೋಂಕು ಎಂದು ತಿಳಿದಿತ್ತು
ಬೆಂಗಳೂರು(ಜ.03): ರಾಜ್ಯದಲ್ಲಿ ಈಗಾಗಲೇ ಎಷ್ಟುಮಂದಿ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ಅರಿಯಲು ಆರೋಗ್ಯ ಇಲಾಖೆಯು ಎರಡನೇ ಹಂತದ ಸೆರೊ ಸಮೀಕ್ಷೆಗೆ ಮುಂದಾಗಿದ್ದು, ಜನವರಿ ಎರಡನೇ ವಾರದಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ್ದ ಮೊದಲ ಹಂತದ ಸೆರೊ ಸರ್ವೆಯಲ್ಲಿ ರಾಜ್ಯದ ಶೇ.27.3 ರಷ್ಟುಮಂದಿ ಸೋಂಕಿತರಾಗಿದ್ದಾರೆ ಎಂದು ತಿಳಿದು ಬಂದಿತ್ತು. ಇದೀಗ ತಜ್ಞರ ಅಭಿಪ್ರಾಯದಂತೆ ರಾಜ್ಯದ ಶೇ.50 ರಷ್ಟುಮಂದಿಗೆ ಈಗಾಗಲೇ ಸೋಂಕು ಉಂಟಾಗಿರಬಹುದು. ಜನವರಿ ಅಂತಿಮ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಎರಡನೇ ಅಲೆ ಉಂಟಾಗುವ ಭೀತಿಯೂ ಇದೆ. ಇದಕ್ಕೆ ಮೊದಲೇ ಸೆರೊ ಸರ್ವೆ ನಡೆಸಬೇಕು.
ಇದರಿಂದ ಈಗಾಗಲೇ ಎಷ್ಟುಮಂದಿ ಸೋಂಕಿತರಾಗಿ ಸೋಂಕು ವಿರುದ್ಧ ಪ್ರತಿಕಾಯ (ಆ್ಯಂಟಿಬಾಡೀಸ್) ವೃದ್ಧಿಸಿಕೊಂಡಿದ್ದಾರೆ. ಎಷ್ಟುಮಂದಿಯಲ್ಲಿ ಸಕ್ರಿಯ ಆ್ಯಂಡಿಬಾಡೀಸ್ ಹಾಗೂ ಸೋಂಕಿದೆ ಎಂಬುದನ್ನು ಪತ್ತೆ ಹಚ್ಚುವ ಮೂಲಕ ಮುಂದೆ ಎಷ್ಟರ ಮಟ್ಟಿಗೆ ಪ್ರಕರಣಗಳು ವರದಿಯಾಗಬಹುದು ಎಂಬುದರ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಹೀಗಾಗಿ ಸೆರೊ ಸರ್ವೆಗೆ ಮುಂದಾಗಿದ್ದೇವೆ ಎಂದು ಮಾರ್ಗಸೂಚಿ ಸಿದ್ಧಪಡಿಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
(ಬಾಕ್ಸ್)
ಅಧ್ಯಯನ ಹೇಗೆ?:
ಎರಡನೇ ಹಂತದ ಸೆರೊ ಸರ್ವೆಯಲ್ಲಿ 35 ಸಾವಿರ ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಬೆಂಗಳೂರಿನ ಎಂಟು ವಲಯ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲೂ ಪ್ರತಿ ಜಿಲ್ಲೆಯಲ್ಲಿ 1 ಸಾವಿರದಿಂದ 1,500 ಮಂದಿಯನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಪರೀಕ್ಷೆಯಿಂದ ವ್ಯಕ್ತಿಯು ಈ ಹಿಂದೆ ಕೋವಿಡ್-19 ವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಹಾಗೂ ಇಮ್ಯುನೋಗ್ಲೋಬಿನ್ ಜಿ (ಐಜಿಜಿ) ಪ್ರತಿಕಾಯ ವೃದ್ಧಿಸಿದೆಯೇ ಎಂದು ತಿಳಿಯಲಿದೆ.
ಸೆಪ್ಟೆಂಬರ್ ಅಧ್ಯಯನ ಹೇಗೆ ನಡೆದಿತ್ತು?:
ಇನ್ನು ಕಳೆದ ಸೆಪ್ಟೆಂಬರ್ 3 ರಿಂದ 16ರವರೆಗೆ ನಡೆದ ಮೊದಲ ಹಂತದ ಸೆರೊ ಸರ್ವೆಯಲ್ಲಿ 16,585 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಶೇ.16.4 ರಷ್ಟುಮಂದಿಗೆ ಕೊರೋನಾ ಸೋಂಕು ಬಂದು ಹೋಗಿದ್ದು ರಕ್ತದಲ್ಲಿ ಸೋಂಕಿನ ವಿರುದ್ಧದ ಆ್ಯಂಟಿಬಾಡೀಸ್ (ಪ್ರತಿಕಾಯ) ಪತ್ತೆಯಾಗಿತ್ತು. ಉಳಿದ ಶೇ.12.7 ರಷ್ಟುಮಂದಿಗೆ ಸಕ್ರಿಯ ಸೋಂಕು ಪತ್ತೆಯಾಗಿತ್ತು. ಈ ಮೂಲಕ ಒಟ್ಟು ಶೇ.27.3 ರಷ್ಟುಮಂದಿ ಸೋಂಕಿತರಾಗಿರುವುದಾಗಿ ದೃಢಪಟ್ಟಿತ್ತು. ಇದರಿಂದ ರಾಜ್ಯದ ಶೇ.27 ರಷ್ಟುಮಂದಿ ಅಂದರೆ 1.93 ಕೋಟಿ ಮಂದಿ ಈಗಾಗಲೇ ಸೋಂಕಿತರಾಗಿದ್ದಾರೆ ಎಂಬ ಅಂದಾಜಿಗೆ ಬರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.