ಬೆಂಗಳೂರು, (ಜುಲೈ.09): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೆಲ ಜಿಲ್ಲೆಗಳಲ್ಲಂತೂ ಕೊರೋನಾ ಕೈಮೀರಿದೆ ಎಂದು ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಒಪ್ಪಿಕೊಂಡಿದ್ದಾರೆ.

ಸಿಎಂ ಅವರ ಈ ಹೇಳಿಕೆ ಹಿನ್ನೆಲೆಯಲ್ಲಿ ಕಂಟ್ರೋಲ್ ತಪ್ಪಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಜಿಲ್ಲೆಗಳಾವುವು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಕೊರೋನಾ ಕೇಸ್ ಸಾವಿರ ಗಡಿದಾಟಿದ ಜಿಲ್ಲೆಗಳೇ ಎಂದು ಭಾವಿಸಲಾಗಿದೆ. ಈ ಜಿಲ್ಲೆಗಳ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. 

ಕೊರೋನಾ ನಿಯಂತ್ರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ..!

ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿ  ಗಣನೀಯವಾಗಿ ಮಾಹಾಮಾರಿ ಕೊರೋನಾ ವ್ಯಾಪಿಸುತ್ತಿದ್ದು, ಅಂತಹ ಜಿಲ್ಲೆಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಟ್ಟಿ ಮಾಡಿದ್ದಾರೆ.

ಹಾಗಾದ್ರೆ, ಸಿಎಂ ಹೇಳುದಂತೆ ಯಾವ್ಯಾವ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕೈ ಮೀರಿದೆ? ಎನ್ನುವುದನ್ನ ಸೂಕ್ಷ್ಮವಾಗಿ ಲೆಕ್ಕಾಚಾರ ಹಾಕಿ ನೋಡಿದ್ರೆ 6 ಜಿಲ್ಲೆಗಳು ಸಿಕ್ಕಿವೆ. ಅವು ಈ ಕೆಳಗಿನಂತಿವೆ. 

ಬೆಂಗಳೂರು ನಗರ, ದಕ್ಷಿಣ ಕನ್ನಡ, ಬಳ್ಳಾರಿ, ಕಲಬುರಗಿ, ಉಡುಪಿ ಹಾಗೂ ಯಾದಗಿರಿ. ಈ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿವೆ.

ಬೆಂಗಳೂರು ನಗರ ಜಿಲ್ಲೆ - 12509.
ದಕ್ಷಿಣ ಕನ್ನಡ - 1534.
ಬಳ್ಳಾರಿ - 1447.
ಕಲ್ಬುರ್ಗಿ - 1816.
ಉಡುಪಿ - 1420.
ಯಾದಗಿರಿ - 1027.

ಈ ಮೇಲಿರುವ 6 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಲ ನಿಯಮಗಳನ್ನು ಹೊಸದಾಗಿ ರಚಿಸಿ, ಸೋಂಕಿನ ನಿಯಂತ್ರಣಕ್ಕೆ ಸಿಎಂ ಯಡಿಯೂರಪ್ಪ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.