ಸಿಲಿಕಾನ್ ಸಿಟಿ  ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ನಿರೀಕ್ಷೆಗೂ ಮೀರಿ  ಗಣನೀಯವಾಗಿ ಮಾಹಾಮಾರಿ ವ್ಯಾಪಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಗಳೂರು, (ಜುಲೈ.09): ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕಾಡ್ಗಿಚ್ಚಿನಂತೆ ಹರುತ್ತಿದ್ದು, ಕೆಲವರು ಬೆಂಗಳೂರು ತೊರೆಯುತ್ತಿದ್ರೆ, ಇನ್ನು ಕೆಲವರು ಅನಿವಾರ್ಯವಾಗಿ ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಕೊರೋನಾ ಮಾಹಾಮಾರಿಯನ್ನು ನಿಯಂತ್ರಿಸಲು ಇಂದು (ಗುರುವಾರ) ನಡೆದ ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನವಾಗಿದ್ದು, ಈ ಬಗ್ಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಹಿತಿ ನೀಡಿದ್ದು, ಅದು ಈ ಕೆಳಗಿನಂತಿದೆ ನೋಡಿ.

ಜುಲೈನಲ್ಲಿ ಕೋವಿಡ್ ಮಹಾಸ್ಫೋಟ; ಹೆದರೋ ಅಗತ್ಯವಿಲ್ಲ..!

ವಲಯವಾರು ವಿಂಗಡಿಸಿ ಮಂತ್ರಿಗಳಿಗೆ ಜವಾಬ್ದಾರಿ

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಬೆಂಗಳೂರಿನಲ್ಲಿ ಸಚಿವ ನೇಮಕ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದರಲ್ಲೂ ಕಂಟೈನ್ಮೆಂಟ್ ಝೋನ್‌ಗೆ ಓರ್ವ ಸಚಿವರನ್ನ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿ ಹೆಚ್ಚಿರುವ ಕೊರೋನಾ ಕೇಸ್ ಪ್ರದೇಶಗಳನ್ನ ಗುರುತಿಸಿ 8 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಈ ಎಂಟೂ ವಲಯಗಳ ಜವಾಬ್ದಾರಿಯನ್ನು 8 ಜನ ಸಚಿವರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು. ಆದ್ರೆ, ಯಾವೆಲ್ಲಾ ಸಚಿವರಿಗೆ ಯಾವ ವಲಯಗಳ ಜವಾಬ್ದಾರಿ ಎನ್ನುವುದನ್ನು ತಿಳಿಸಿಲ್ಲ. ಇನ್ನು ಸುವರ್ಣನ್ಯೂಸ್‌ಗೆ ಸಿಕ್ಕ ಮಾಹಿತಿ ಪ್ರಕಾರ ಈ ಎಂಟು ಸಚಿವರ ತಂಡದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್‌.ಆರ್.ವಿಶ್ವನಾಥ್ ಕೂಡ ಇದ್ದಾರೆ. 

ಆದ್ರೆ, ಯಾರಿಗೆ ಯಾವ ವಲಯ ಎನ್ನುವುದನ್ನು ನಾಳೆ (ಶುಕ್ರವಾರ) ನಡೆಯಲಿರುವ ಬೆಂಗಳೂರು ಸಚಿವರು, ಶಾಸಕರು , ವಿಧಾನಪರಿಷತ್ ಸದಸ್ಯರು ಹಾಗೂ ಬೆಂಗಳೂರಿನ ಎಲ್ಲಾ ವಾರ್ಡ್ ನ ಪಾಲಿಕೆ ಸದಸ್ಯರ ಸಭೆ ಬಳಿಕ ತಿಳಿಯಲಿದೆ. 

ಇವರಿಗೆ ಜವಾಬ್ದಾರಿ ಪಕ್ಕಾ
ಬೆಂಗಳೂರಿನವರೇ ಆದ ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಎಸ್ ಆರ್ ವಿಶ್ವನಾಥ್, ವಿ ಸೋಮಣ್ಣ, ಗೋಪಾಲಯ್ಯ, ಸುರೇಶ್ ಕುಮಾರ್, ಭೈರತಿ ಬಸವರಾಜ್ ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಇವರಿಗೆಲ್ಲಾ ವಲಯಗಳ ಜವಾಬ್ದಾರಿ ನೀಡುವ ಸಾಧ್ಯತೆಗಳು ಹೆಚ್ಚಿವೆ. ಆದ್ರೆ, ಯಾರಿಗೆ ಯಾವ ವಲಯ ಎನ್ನುವುದು ಮಾತ್ರ ಗೊತ್ತಾಗಬೇಕಿದೆ.

ಸಂಭವನೀಯ ಪಟ್ಟಿ.

ಬಿಬಿಎಂಪಿ ಪೂರ್ವ ವಲಯ - 44 ವಾರ್ಡ್- ಡಾ.ಅಶ್ವಥ್ ನಾರಾಯಣ್....

ಬಿಬಿಎಂಪಿ ಪಶ್ಚಿಮ ವಲಯ- 44 ವಾರ್ಡ್ - ವಿ .ಸೋಮಣ್ಣ

ಬಿಬಿಎಂಪಿ ದಕ್ಷಿಣ ವಲಯ - 44 ವಾರ್ಡ್ - ಆರ್ ಅಶೋಕ್...

ಬಿಬಿಎಂಪಿ ಮಹಾದೇವ ಪುರ ವಲಯ - 17- ಬೈರತಿ ಬಸವರಾಜು

ಬಿಬಿಎಂಪಿ ಯಲಹಂಕ- 11ವಾರ್ಡ್- ಎಸ್.ಆರ್.ವಿಶ್ವನಾಥ್

ಬಿಬಿಎಂಪಿ ಆರ್ ಆರ್ ನಗರ ವಲಯ- 14 -ಎಸ್.ಟಿ.ಸೋಮಶೇಖರ್

ಬಿಬಿಎಂಪಿ ದಾಸರಹಳ್ಳಿ ವಲಯ- 08 ವಾರ್ಡ್ -ಗೋಪಾಲಯ್ಯ 

ಬಿಬಿಎಂಪಿ ಬೊಮ್ಮನಹಳ್ಳಿ ವಲಯ- 16 - ಸುರೇಶ್ ಕುಮಾರ್...