ಬೆಂಗಳೂರು (ಸೆ.25): ಕೊರೋನಾ ಸೋಂಕಿಗೆ ಪ್ರಸಕ್ತ ವರ್ಷದಲ್ಲಿ ವ್ಯಾಕ್ಸಿನ್‌ ಬರುವುದು ಬಹುತೇಕ ಅನುಮಾನ. ಜತೆಗೆ, ಈ ಹಂತದಲ್ಲಿ ಲಾಕ್ಡೌನ್‌ ಮಾಡುವುದು ಸಹ ಪ್ರಯೋಜನಕಾರಿಯಲ್ಲ. ಹೀಗಾಗಿ ಸಾರ್ವಜನಿಕರೇ ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ರಾಜ್ಯ ಕೊರೋನಾ ಟಾಸ್ಕ್‌ಫೋರ್ಸ್‌ ಸದಸ್ಯರಾದ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

"

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರೂ ಆದ ಮಂಜುನಾಥ್‌ ಅವರ ಪ್ರಕಾರ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಈಗಾಗಲೇ ಸೋಂಕು ಹರಡಿರುವುದರಿಂದ ಈ ಹಂತದಲ್ಲಿ ಒಂದು ಅಥವಾ ಎರಡು ದಿನದ ಲಾಕ್‌ಡೌನ್‌ನಿಂದಾಗಿ ಯಾವುದೇ ಪ್ರಯೋಜನವಾಗಲ್ಲ ಎಂದು ಅಭಿ​ಪ್ರಾ​ಯಿ​ಸಿ​ದ್ದಾರೆ.

PFIನಿಂದ 1269 ಕೋವಿಡ್‌ ಬಾಧಿತ ಮೃತದೇಹಗಳ ಅಂತ್ಯಸಂಸ್ಕಾರ ..

ಸೋಂಕು ನಿಯಂತ್ರಿಸಲು ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳಲ್ಲಿ ಕೆಲ ವಾಣಿಜ್ಯ ವಹಿವಾಟುಗಳಿಗೆ ಸೂಕ್ತ ಸಮಯ ನಿಗದಿ ಮಾಡುವ ಮೂಲಕ ನಿಯಂತ್ರಣ ಕ್ರಮ ಪಾಲಿಸಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ಸಾವಿನ ದರ ಕಡಿಮೆ ಮಾಡುವುದು ಒಂದೇ ನಮ್ಮ ಮುಂದಿರುವ ಗುರಿ. ಇದಕ್ಕಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಜತೆಗೆ ಸೂಕ್ತವಾಗಿ ಮಾಸ್ಕ್‌ ಧರಿಸಬೇಕು. ಮಾತನಾಡುವಾಗ ಮಾಸ್ಕ್‌ ತೆಗೆಯುವವರಿಗೂ ದಂಡ ವಿಧಿಸಬೇಕು ಎಂದು ಅಭಿಪ್ರಾಯಪಟ್ಟರು.

ಯಾವಾಗ ಕಡಿಮೆಯಾಗುತ್ತೆ ಗೊತ್ತಿಲ್ಲ:

ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಯಾವುದೇ ವೈರಸ್‌ ಹರಡಿದರೂ ಆರು ತಿಂಗಳ ಬಳಿಕ ಒಂದು ಹಂತಕ್ಕೆ ಬರಬೇಕು. ನಮ್ಮಲ್ಲಿ ಆರು ತಿಂಗಳು ಕಳೆದರೂ ಸೋಂಕು ಕಡಿಮೆಯಾಗಿಲ್ಲ. ಸೆಪ್ಟೆಂಬರ್‌ ಅಂತ್ಯಕ್ಕೆ 6 ಲಕ್ಷ ಗಡಿ ದಾಟಲಿದ್ದು, ಯಾವಾಗ ಕಡಿಮೆಯಾಗುತ್ತದೆ ಎಂಬುದನ್ನು ಊಹೆ ಮಾಡುವುದೂ ಕಷ್ಟವಾಗಿದೆ. ಸೋಂಕು ನಿಯಂತ್ರಣಕ್ಕೆ ಬಾರದೆ ಇದೇ ರೀತಿ ಮುಂದುವರೆದರೆ ಏನು ಮಾಡಬೇಕು ಎಂಬುದನ್ನು ಇನ್ನಷ್ಟೇ ಯೋಚಿಸಬೇಕು ಎಂದು ಹೇಳಿದರು.

ಮತ್ತೆ ಲಾಕ್‌ಡೌನ್‌ ಬಗ್ಗೆ ಸುಳಿವು ಕೊಟ್ಟ ಸಚಿವ ...

ಸಾವಿನ ದರ ಕಡಿಮೆ ಮಾಡಲು ಆದಷ್ಟೂವೃದ್ಧರು, ಚಿಕ್ಕ ಮಕ್ಕಳ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಹೋಂ ಐಸೊಲೇಷನ್‌ನಲ್ಲಿರುವವರು ಸಹ ಎಚ್ಚರ ವಹಿಸಬೇಕು. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಕೂಡಲೇ ಆಸ್ಪತ್ರೆಗಳಿಗೆ ದಾಖಲಾಗಬೇಕು ಎಂದರು.