18+ ವಾರಿಯರ್ಗಳಿಗೆ ನಾಳೆಯಿಂದ ಲಸಿಕೆ
* ಮುಂಚೂಣಿ ಕಾರ್ಯಕರ್ತರ ಪಟ್ಟಿಗೆ ಕೈದಿಗಳೂ ಸೇರ್ಪಡೆ
* ಲಸಿಕೆ ದಾಸ್ತಾನು ಪರಿಶೀಲಿಸಿ ಸೂಕ್ತವಾಗಿ ಲಸಿಕೆ ಹಾಕುವಂತೆ ಆದೇಶದಲ್ಲಿ ನಿರ್ದೇಶನ
* ಮೇ 22 ರಿಂದ ಲಸಿಕೆ ಅಭಿಯಾನ ಪ್ರಾರಂಭ
ಬೆಂಗಳೂರು(ಮೇ.21): ರಾಜ್ಯಕ್ಕೆ ಎರಡು ಲಕ್ಷ ಡೋಸ್ ಲಸಿಕೆ ಆಗಮಿಸಿದ ಬೆನ್ನಲ್ಲೇ 18ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇರೆಗೆ ಮೇ 22 ರಿಂದ ಲಸಿಕೆ ಅಭಿಯಾನ ಪ್ರಾರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಲ್ಲದೆ, ಕಟ್ಟಡ ಕಾರ್ಮಿಕರು ಮತ್ತಿತರ ಆದ್ಯತಾ ಗುಂಪುಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಲಸಿಕೆ ನೀಡಲು ಸಹ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಆದೇಶ ಮಾಡಿದ್ದಾರೆ.
ಮೊದಲಿಗೆ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುವುದು. ಬಳಿಕ ಮುಂದಿನ ದಿನಗಳಲ್ಲಿ ಆದ್ಯತಾ ಗುಂಪುಗಳನ್ನು ಗುರುತಿಸಿ ಅವರಿಗೆ ಲಸಿಕೆ ಲಭ್ಯತೆ ಅನುಸಾರವಾಗಿ ಲಸಿಕೆ ಹಾಕಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಮೇ 15ರಂದು ನಡೆದ ರಾಜ್ಯಮಟ್ಟದ ಕಾರ್ಯಪಡೆ ಸಭೆ ಹಾಗೂ ಮೇ 20ರಂದು ನಡೆದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯ ನಿರ್ದೇಶನದಂತೆ ಮೇ 22 ರಿಂದ 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
"
ಆದ್ಯತಾ ವಲಯದ ಫಲಾನುಭವಿಗಳನ್ನು ಗುರುತಿಸಲು, ಲಸಿಕೆ ದಾಸ್ತಾನು ಪರಿಶೀಲಿಸಿ ಸೂಕ್ತವಾಗಿ ಲಸಿಕೆ ಹಾಕುವಂತೆ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ. ವಿಶೇಷವೆಂದರೆ ಆದೇಶದಲ್ಲಿ ಕೈದಿಗಳನ್ನೂ ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾಗಿದೆ.
ಜೂನ್ ಅಂತ್ಯಕ್ಕೆ 2ನೇ ಅಲೆ ಅಂತ್ಯ? 3ನೇ ಅಲೆ ಯಾವಾಗ.?
ಮುಂಚೂಣಿ ಕಾರ್ಯಕರ್ತರು ಯಾರು?
ಮಾಧ್ಯಮ ಸಿಬ್ಬಂದಿ, ಅಂಗವಿಕಲರು, ಚಿತಾಗಾರ/ರುದ್ರಭೂಮಿ ಸಿಬ್ಬಂದಿ, ಕೈದಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಕುಟುಂಬ ಸದಸ್ಯರು, ಕೊರೋನಾ ಸೇವೆಗೆ ನಿಯೋಜಿಸಿರುವ ಶಿಕ್ಷಕರು, ಸರ್ಕಾರಿ ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರು, ವಿದ್ಯುತ್ ಮತ್ತು ನೀರು ಸರಬರಾಜು ಮಾಡುವವರು, ಅಂಚೆ ಇಲಾಖೆ ಸಿಬ್ಬಂದಿ, ಬೀದಿ ಬದಿ ವ್ಯಾಪಾರಿಗಳು, ಭದ್ರತೆ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು, ವಯೋವೃದ್ಧರು/ತೀವ್ರ, ಅನಾರೋಗ್ಯವುಳ್ಳವರು, ಮಕ್ಕಳ ಸಂರಕ್ಷಣಾಧಿಕಾರಿಗಳು, ಆಸ್ಪತ್ರೆಗಳಲ್ಲಿ ಸರಕು ಸರಬರಾಜು ಮಾಡುವವರು, ಆಯಿಲ್ ಇಂಡಸ್ಟ್ರಿ ಮತ್ತು ಗ್ಯಾಸ್ ಸರಬರಾಜು ಮಾಡುವವರು, ಔಷಧ ತಯಾರಕರು, ವೃದ್ಧಾಶ್ರಮ ವಾಸಿಗಳು ಹಾಗೂ ನಿರ್ಗತಿಕರು, ಆಹಾರ ನಿಗಮ ಸಿಬ್ಬಂದಿ, ಎಪಿಎಂಸಿ ಕೆಲಸಗಾರರು.
ಆದ್ಯತಾ ಗುಂಪು
ಕಟ್ಟಡ ಕಾರ್ಮಿಕರು, ಟೆಲಿಕಾಂ ಮತ್ತು ಇಂಟರ್‌ನೆಟ್ ಸೇವಾದಾರರು, ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಪೆಟ್ರೋಲ್ ಬಂಕ್ ಕೆಲಸಗಾರರು, ಚಿತ್ರೋದ್ಯಮದ ಉದ್ಯಮದ ಸಿಬ್ಬಂದಿ, ವಕೀಲರು, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಕೆಎಂಎಫ್ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಗಾರ್ಮೆಂಟ್ ಕಾರ್ಖಾನೆ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ, ಜಿಎಐಎಲ್ ಸಿಬ್ಬಂದಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಸಿಬ್ಬಂದಿ.