ಜೂನ್ ಅಂತ್ಯಕ್ಕೆ 2ನೇ ಅಲೆ ಅಂತ್ಯ? 3ನೇ ಅಲೆ ಯಾವಾಗ.?
- ಕೊರೋನಾ 2ನೇ ಅಲೆಯ ಅಬ್ಬರ ಜೂನ್ ಅಂತ್ಯದ ವೇಳೆಗೆ ಬಹುತೇಕ ತಗ್ಗಲಿದೆ
- ದೇಶದಲ್ಲಿ ದಿನಕ್ಕೆ 15ರಿಂದ 25 ಸಾವಿರದಷ್ಟುಕೇಸ್‌ಗಳು ದಾಖಲಾಗಲಿವೆ
- ಮುಂದಿನ 6ರಿಂದ 8 ತಿಂಗಳಿನಲ್ಲಿ ಕೊರೋನಾ 3ನೇ ಅಲೆಯ ತೀವ್ರತೆ
ನವದೆಹಲಿ (ಮೇ.21): ಕೊರೋನಾ 2ನೇ ಅಲೆಯ ಅಬ್ಬರ ಜೂನ್ ಅಂತ್ಯದ ವೇಳೆಗೆ ಬಹುತೇಕ ತಗ್ಗಲಿದ್ದು, ಆ ವೇಳೆಗೆ ದೇಶದಲ್ಲಿ ದಿನಕ್ಕೆ 15ರಿಂದ 25 ಸಾವಿರದಷ್ಟುಕೇಸ್‌ಗಳು ದಾಖಲಾಗಲಿವೆ. ಒಂದು ವೇಳೆ ಕೊರೋನಾ 2ನೇ ಅಲೆ ಇಳಿಕೆ ಆಗಿದ್ದಕ್ಕೆ ಮೈಮರೆತು ಲಸಿಕೆ ಅಭಿಯಾನವನ್ನು ವೇಗವಾಗಿ ನಡೆಸದೇ ಹೋದರೆ ಹಾಗೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರೆ ಮುಂದಿನ 6ರಿಂದ 8 ತಿಂಗಳಿನಲ್ಲಿ ಕೊರೋನಾ 3ನೇ ಅಲೆಯ ತೀವ್ರತೆ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕೋವಿಡ್ ಮುನ್ಸೂಚನೆಗೆ ರಚಿಸಲಾದ ಸಮಿತಿಯಲ್ಲಿರುವ ಐಐಟಿ ಹೈದರಾಬಾದ್‌ನ ಸದಸ್ಯ ಡಾ.ಎಂ.ವಿದ್ಯಾಸಾಗರ್ ಈ ಎಚ್ಚರಿಕೆ ರೂಪದ ಸಲಹೆಗಳನ್ನು ನೀಡಿದ್ದಾರೆ.
‘ಕೊರೋನಾ 2ನೇ ಅಲೆ ಕಾಣಿಸಿಕೊಳ್ಳುವುದಕ್ಕೆ ಜನರು ಮಾರ್ಗಸೂಚಿಯನ್ನು ಪಾಲಿಸದೇ ಇರುವುದೇ ಕಾರಣ. ಅಲ್ಲದೇ ಮೊದಲ ಅಲೆಯ ವೇಳೆ ಜನರ ದೇಹದಲ್ಲಿ ಉಂಟಾದ ರೋಗ ನಿರೋಧಕ ಶಕ್ತಿ ನಶಿಸಿದ್ದು ಕೂಡ ಸೋಂಕು ಉಲ್ಬಣಿಸಲು ಕಾರಣವಾಗಿದೆ. ಹೀಗಾಗಿ ಲಸಿಕೆ ನೀಡಿಕೆಯನ್ನು ಚುರುಕುಗೊಳಿಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ.
ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!
ನಶಿಸಲಿರುವ ರೋಗನಿರೋಧಕ ಶಕ್ತಿ:
‘ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಜನರ ದೇಹದಲ್ಲಿ ಸೃಷ್ಟಿಯಾದ ರೋಗನಿರೋಧಕ ಶಕ್ತಿ 6ರಿಂದ 8 ತಿಂಗಳ ಅಂತರದಲ್ಲಿ ನಶಿಸುತ್ತದೆ. ಪ್ರಸಕ್ತ 2ನೇ ಅಲೆಯಲ್ಲಿ ಮೊದಲ ಅಲೆಗಿಂತ ಶೇ.30ರಷ್ಟುಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅವರ ರೋಗನಿರೋಧಕ ಶಕ್ತಿ 6ರಿಂದ 8 ತಿಂಗಳಿನಲ್ಲಿ ನಶಿಸಲಿದೆ. ಇದಕ್ಕೆ ಇರುವ ಏಕೈಕ ಪರಿಹಾರವೆಂದರೆ ಲಸಿಕೆಯ ಮೂಲಕ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಶೀಘ್ರವಾಗಿ ಎಷ್ಟುಸಾಧ್ಯವೋ ಅಷ್ಟುಜನರಿಗೆ ಲಸಿಕೆಯನ್ನು ನೀಡುವಲ್ಲಿ ನಾವು ಯಶಸ್ವಿಯಾದರೆ 6 ತಿಂಗಳ ಬಳಿಕ ಸೋಂಕು ಏಕಾಏಕಿ ಏರಿಕೆ ಆಗುವುದನ್ನು ತಡೆಯಬಹುದಾಗಿದೆ’ ಎಂದು ವಿದ್ಯಾಸಾಗರ್ ಹೇಳಿದ್ದಾರೆ.
ಜೂನ್‌ಗೆ ಪ್ರಕರಣಗಳು ಇಳಿಕೆ:
ಜೂನ್- ಜುಲೈ ವೇಳೆಗೆ ಕೊರೋನಾ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಆಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಜೂನ್ ಅಂತ್ಯದ ವೇಳೆಗೆ ಕೇಸ್‌ಗಳು 15ರಿಂದ 25 ಸಾವಿರಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಅದನ್ನು 2ನೇ ಅಲೆಯ ಅಂತ್ಯ ಎಂದು ನಾವು ವಿಶ್ಲೇಷಿಸಬಹುದು. ಮೂರನೇ ಅಲೆಯನ್ನು ತಡೆಯಬೇಕಾದರೆ ಶೇ.50ರಿಂದ 60ರಷ್ಟುವಯಸ್ಕರಿಗೆ ಅಂದರೆ ಅಂದಾಜು 55 ಕೋಟಿ ಜನರಿಗೆ ಲಸಿಕೆ ನೀಡಬೇಕಿದೆ. 3ನೇ ಅಲೆ ತಡೆಯಲು ಮೊದಲ ಡೋಸ್ ಸಾಕಾಗಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ವೇಳೆ ಮುಂದಿನ ವರ್ಷದ ಜನವರಿಯ ವೇಳೆಗೆ 100 ಕೋಟಿ ಡೋಸ್ ಲಸಿಕೆ ನೀಡಿದರೆ ಸಾಕಾಗಬಹುದು. ಇನ್ನೂ ಹೆಚ್ಚು ಆದರೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಸರ್ಕಾರಕ್ಕೆ ಸಲಹೆಗಳೇನು?
1. ಈಗ ಸೋಂಕಿತರಾದವರ ರೋಗನಿರೋಧಕ ಶಕ್ತಿ 8 ತಿಂಗಳಲ್ಲಿ ನಶಿಸಲಿದೆ
2. ಜನರಿಗೆ ಲಸಿಕೆ ನೀಡಿ ಕೃತಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು
3. ಲಸಿಕೆ ಆಂದೋಲನಕ್ಕೆ ವೇಗ ನೀಡುವುದೇ ಈಗಿರುವ ಏಕೈಕ ಮಾರ್ಗ
4. 3ನೇ ಅಲೆ ತಡೆಯಲು ಕನಿಷ್ಠ 55 ಕೋಟಿ ವಯಸ್ಕರಿಗೆ ಲಸಿಕೆ ನೀಡಬೇಕು
5. 2ನೇ ಅಲೆಗೆ ಜನರ ನಿರ್ಲಕ್ಷ್ಯ ಕಾರಣ, ಹೀಗಾಗಿ ಜನ ಎಚ್ಚೆತ್ತುಕೊಳ್ಳಬೇಕು