ಬೆಂಗಳೂರು (ಮಾ.08): ಸೋಮವಾರದಿಂದ ರಾಜ್ಯದ ಮೂಲೆ ಮೂಲೆಗೂ ಕೋವಿಡ್‌ ಲಸಿಕೆ ತಲುಪಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಅತ್ಯಾಧುನಿಕ ಮೆಡಿಕಲ್‌ ಕಾಲೇಜುಗಳವರೆಗೆ ಸುಮಾರು 3,000 ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಅಭಿಯಾನ ನಡೆಯಲಿದೆ.

ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕಾ ಅಭಿಯಾನ ನಡೆಯಲಿದ್ದು ಉಳಿದಂತೆ ತಾಲೂಕು, ಜಿಲ್ಲಾ ಆಸ್ಪತ್ರೆ, ಮೆಡಿಕಲ್‌ ಕಾಲೇಜು ಗಳಲ್ಲಿ ವಾರದ ಎಲ್ಲ ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ.

ಈ ಮಧ್ಯೆ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳ ಒಂದು ಆರೋಗ್ಯ ಕೇಂದ್ರದಲ್ಲಿ ಪಿಂಕ್‌ (ಗುಲಾಬಿ) ಬೂತ್‌ ಇರಲಿದೆ. ಇಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಮಹಿಳಾ ಸಿಬ್ಬಂದಿಗಳೇ ಸೈಟ್‌ ನಿರ್ವಹಣೆ, ಪರಿಶೀಲನೆ, ಲಸಿಕಾಕರಣ, ವೀಕ್ಷಣೆ ಮತ್ತು ಭದ್ರತೆಯ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಶುರುವಾಯ್ತು ಕೊರೋನಾ ಅಬ್ಬರ, ಇರಲಿ ಎಚ್ಚರ ..

ಬೆಂಗಳೂರಿನ ಸಿ.ವಿ. ರಾಮನ್‌ ಆಸ್ಪತ್ರೆಯಲ್ಲಿನ ಪಿಂಕ್‌ ಬೂತ್‌ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಭಾಗವಹಿಸಲಿದ್ದಾರೆ.

ಭಾನುವಾರ 428 ಮಂದಿಗೆ ಲಸಿಕೆ: ಭಾನುವಾರ 21 ಲಸಿಕಾ ಕೇಂದ್ರದಲ್ಲಿ ಒಟ್ಟು 428 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಗಂಭೀರ ಅಡ್ಡ ಪರಿಣಾಮದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. 25 ಆರೋಗ್ಯ ಕಾರ್ಯಕರ್ತರು, 23 ಮುಂಚೂಣಿ ಕಾರ್ಯಕರ್ತರು, 241 ಹಿರಿಯ ನಾಗರಿಕರು, 69 ಮಂದಿ 45 ವರ್ಷ ದಾಟಿದ ವಿವಿಧ ಕಾಯಿಲೆಗಳನ್ನು ಹೊಂದಿರುವವರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದಾರೆ. 70 ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಮುಂಚೂಣಿ ಕಾರ್ಯಕರ್ತರು ಎರಡನೇ ಡೋಸ್‌ ಲಸಿಕೆ ಪಡೆದಿಲ್ಲ. ಈವರೆಗೆ ರಾಜ್ಯದಲ್ಲಿ ಒಟ್ಟು 9.41 ಲಕ್ಷ ಮಂದಿ ಕೋವಿಡ್‌ ಲಸಿಕೆ ಸ್ವೀಕರಿಸಿದ್ದಾರೆ.