Karnataka Fights Corona: ಸೋಂಕು ನಿಯಂತ್ರಣಕ್ಕೆ 3 ಸೂತ್ರ, ಸಿಎಂ ಮಹತ್ವದ ಸಭೆ!
* ಸೋಂಕು ನಿಯಂತ್ರಣಕ್ಕೆ 3 ಸೂತ್ರ
* ಇಂದು ಕೋವಿಡ್ ತಜ್ಞರ ಜತೆ ಸಿಎಂ ಮಹತ್ವದ ಸಭೆ
* ಪಾಸಿಟಿವಿಟಿ 3% ದಾಟಿದರೆ ಲಾಕ್ಡೌನ್ ಜಾರಿ ಸಾಧ್ಯತೆ

ಬೆಂಗಳೂರು(ಜ.04): ರಾಜ್ಯದಲ್ಲಿ ಒಮಿಕ್ರೋನ್ (Omicron) ಕೊರೋನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು ಮಂಗಳವಾರ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸದಸ್ಯರು ಹಾಗೂ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಲಿದ್ದು, ಸೋಂಕು ತಡೆಗೆ ಕಠಿಣ ನಿರ್ಬಂಧಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ, ಸೋಂಕಿನ ಪಾಸಿಟಿವಿಟಿ ದರದ ಆಧಾರದ ಮೇಲೆ ವಲಯಗಳನ್ನು ವಿಂಗಡಿಸುವ ಮತ್ತು ಶೇ.3ರಷ್ಟುಸರಾಸರಿ ಪಾಸಿಟಿವಿಟಿ ದರ ಹೊಂದಿರುವ ಪ್ರದೇಶಗಳಲ್ಲಿ ಲಾಕ್‌ಡೌನ್ ಅಥವಾ ಸೆಮಿ ಲಾಕ್‌ಡೌನ್ ಘೋಷಿಸುವ ದಿಸೆಯಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
Omicron Less Severe: ಒಮಿಕ್ರೋನ್ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!
ಈ ಮೊದಲಿನ ಎರಡು ಅಲೆಗಳ ಅವಧಿಯಲ್ಲಿ ಶೇ.5ರಷ್ಟು ಪಾಸಿಟಿವಿಟಿ ದರ ಹಾಗೂ ಆಸ್ಪತ್ರೆಗಳಲ್ಲಿ ಶೇ. 40ರಷ್ಟುಹಾಸಿಗೆ ಭರ್ತಿಯಾದಾಗ ಲಾಕ್‌ಡೌನ್ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಈ ಬಾರಿ ಶೇ. 3ರಷ್ಟುಪಾಸಿಟಿವಿಟಿ ದರ ಮುಟ್ಟಿದ ಕೂಡಲೇ ಲಾಕ್‌ಡೌನ್ ಅಥವಾ ಸೆಮಿ ಲಾಕ್‌ಡೌನ್ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಏಕೆಂದರೆ, ಒಮಿಕ್ರೋನ್ ಸೋಂಕಿನ ತೀವ್ರತೆ ಕಡಿಮೆಯಾದರೂ ವೇಗವಾಗಿ ಹರಡುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲೇ ಸೋಂಕಿನ ಹರಡುವಿಕೆಯನ್ನು ತಡೆಯಲು ಈ ತ್ವರಿತ ನಿರ್ಧಾರದ ಅಗತ್ಯವಿದೆ ಎಂಬುದು ಸರ್ಕಾರ ಚಿಂತನೆ ಎನ್ನಲಾಗಿದೆ.
"
3ನೇ ವಾರ 3% ಪಾಸಿಟಿವಿಟಿ?:
ಇದಕ್ಕೆ ಪೂರಕವಾಗಿಯೇ ಗುರುವಾರದ ಸಭೆಯಲ್ಲಿ ಟಿಎಸಿ ಸಹ ತನ್ನ ವರದಿ ನೀಡಲಿದೆ ಎನ್ನುತ್ತವೆ ಮೂಲಗಳು. ಈ ಮೂಲಗಳ ಪ್ರಕಾರ, ಸೋಂಕು ಹಾಲಿ ಸ್ಥಿತಿಯಲ್ಲಿ ಮುಂದುವರೆದರೆ ಮುಂದಿನ ಎರಡು ದಿನದಲ್ಲಿ ಪಾಸಿಟಿವಿಟಿ ದರ ಶೇ.1 ದಾಟಲಿದ್ದು, ಮುಂದಿನ ವಾರದ ವೇಳೆಗೆ ಶೇ.2ಕ್ಕಿಂತ ಹೆಚ್ಚಾಗಲಿದೆ. ಎರಡನೇ ವಾರದ ಅಂತ್ಯ ಅಥವಾ ಮೂರನೇ ವಾರದ ಆರಂಭದಲ್ಲಿ ಪಾಸಿಟಿವಿಟಿ ದರ ಶೇ.3ರಷ್ಟುತಲುಪಲಿದೆ. ಈ ಹಂತ ಮುಟ್ಟಿದಾಗ ಲಾಕ್‌ಡೌನ್ ಮಾಡುವುದು ಸೂಕ್ತ ಎಂಬ ಸಲಹೆ ಈ ವರದಿಯಲ್ಲಿದೆ ಎನ್ನಲಾಗಿದೆ.
Covid Threat: '1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ: ಲಾಕ್ಡೌನ್ ಮಾಡದಿದ್ದರೆ ನಿತ್ಯ 50,000 ಕೇಸ್'
ಏನೇನು ಕ್ರಮ?:
2ನೇ ಅಲೆಯಲ್ಲಿ ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾದ ತಕ್ಷಣ ಕರ್ನಾಟಕದಲ್ಲೂ ಏರಿಕೆಯಾಗಿತ್ತು. ಹೀಗಾಗಿ 2ನೇ ಅಲೆಗಿಂತ ವೇಗವಾಗಿ ಕಠಿಣ ನಿರ್ಬಂಧಗಳನ್ನು ತೆಗೆದುಕೊಳ್ಳಬೇಕು. ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇದ್ದರೆ ಹಳದಿ, ಶೇ.1ರಿಂದ 2 ರಷ್ಟಿದ್ದರೆ ಕಿತ್ತಳೆ, ಶೇ.2 ಕ್ಕಿಂತ ಹೆಚ್ಚಿದ್ದರೆ ಕೆಂಪು ವಲಯವಾಗಿ ಗುರುತಿಸಿ ನಿರ್ಬಂಧಗಳನ್ನು ವಿಧಿಸಬೇಕು. ವಾರದ ಸರಾಸರಿ ಪಾಸಿಟಿವಿಟಿ ದರ ಶೇ.1ಕ್ಕಿಂತ ಹೆಚ್ಚಾದರೆ ಸಿನಿಮಾ ಹಾಲ್, ಸಭಾಂಗಣ, ಶಾಲಾ-ಕಾಲೇಜು, ಪಬ್ -ಬಾರ್, ಹೋಟೆಲ್, ಸಾರ್ವಜನಿಕ ಸಾರಿಗೆಯಲ್ಲಿ ಶೇ. 50 ರಷ್ಟುಮಾತ್ರ ಅವಕಾಶ ಕಲ್ಪಿಸುವುದು. ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳು ನಿರ್ದಿಷ್ಟಸಮಯದಲ್ಲಿ ಮಾತ್ರ ತೆಗೆದಿರಬೇಕು ಎಂದು ಸಲಹೆ ನೀಡಲಾಗಿದೆ.
ಪಾಸಿಟಿವಿಟಿ ಶೇ.2 ಕ್ಕಿಂತ ಹೆಚ್ಚಾದರೆ ಶಾಲಾ-ಕಾಲೇಜುಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಿನಿಮಾ ಹಾಲ್ ಸೇರಿದಂತೆ ಜನ ಸೇರುವ ಎಲ್ಲಾ ರೀತಿಯ ಮನೋರಂಜನಾ ಚಟುವಟಿಕೆ ಸ್ಥಗಿತಗೊಳಿಸಬೇಕು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ವ್ಯವಸ್ಥೆ ಕಲ್ಪಿಸಬೇಕು. ಈಜುಕೊಳ, ಪಾರ್ಕ್, ಜಿಮ್, ಸಲೂನ್‌ಗಳನ್ನು ಸ್ಥಗಿತಗೊಳಿಸಬೇಕು. ಶೇ.3ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾದರೆ ಸಂಪೂರ್ಣ ಲಾಕ್ಡೌನ್ ಹೇರಬೇಕು ಎಂದು ಸಲಹೆಗಳು ವರದಿಯಲ್ಲಿ ಅಡಕವಾಗಿದೆ ಎಂದು ಮೂಲಗಳು ಹೇಳಿವೆ.
ಇಂದು ತಜ್ಞರ ಸಭೆ, ನಾಡಿದ್ದು ಸಂಪುಟದಲ್ಲಿ ತೀರ್ಮಾನ: ಸಿಎಂ
ಒಮಿಕ್ರೋನ್ ವೈರಸ್ ವೇಗವಾಗಿ ಹರಡುತ್ತಿದೆ. ಹೀಗಾಗಿ ಮಂಗಳವಾರ ತಜ್ಞರ ಜತೆ ಸಮಾಲೋಚನೆ ನಡೆಸಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ದೀರ್ಘಾವಧಿ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆದಷ್ಟೂಜನಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಕೊರೋನಾ ನಿಯಂತ್ರಣಕ್ಕೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡುವಂತೆ ತಜ್ಞರಿಗೆ ಸೂಚಿಸಲಾಗಿದೆ ಎಂದರು.
ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ನಡೆಯನ್ನು ಗಮನಿಸುತ್ತಿದ್ದೇವೆ. ನಾವು ಸಾರ್ವತ್ರಿಕ ನಡವಳಿಕೆಯ ಬಗ್ಗೆ ತೀರ್ಮಾನ ಮಾಡುತ್ತೇವೆ. ಎಲ್ಲರೂ ಅದಕ್ಕೆ ಬದ್ಧವಾಗಿರಬೇಕು’ ಎಂದರು. ತನ್ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಾದಯಾತ್ರೆಗೆ ಅಡ್ಡಿ ಉಂಟಾಗುವ ಮುನ್ಸೂಚನೆ ನೀಡಿದರು.