Omicron Less Severe: ಒಮಿಕ್ರೋನ್ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ!
* ಹೀಗಾಗಿ ಗಂಭೀರ ಹಾನಿ ಇಲ್ಲ: ತಜ್ಞರ ಹೇಳಿಕೆ
* ಒಮಿಕ್ರೋನ್ ಗಂಟಲಿಗಷ್ಟೇ ಇಳಿಯುತ್ತೆ, ಶ್ವಾಸಕೋಶಕ್ಕಲ್ಲ
ಬೆಂಗಳೂರು(ಜ.04): ಕೊರೋನಾ ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮಿಕ್ರೋನ್ ರೂಪಾಂತರಿಯು ಶ್ವಾಸಕೋಶಕ್ಕೆ ಹೆಚ್ಚು ಹಾನಿ ಮಾಡುವುದಿಲ್ಲ. ಹೀಗಾಗಿ ಆಸ್ಪತ್ರೆ ದಾಖಲಾತಿಗಳು ಕಡಿಮೆ ಇರಲಿವೆ ಎಂದು ವಂಶವಾಹಿ ಪರೀಕ್ಷೆಗಳ ಸರ್ವೇಕ್ಷಣಾ ಸಮಿತಿ ಸದಸ್ಯ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹಾಂಕಾಂಗ್ ವಿಶ್ವವಿದ್ಯಾಲಯವು ಒಮಿಕ್ರೋನ್ ಹರಡುವ ಮತ್ತು ದೇಹದ ಮೇಲೆ ಪ್ರಭಾವ ಬೀರುವ ಕುರಿತು ಅಧ್ಯಯನ ನಡೆಸಿದೆ. ಡೆಲ್ಟಾಗೆ ಹೋಲಿಸಿದರೆ ಒಮಿಕ್ರೋನ್ ಹರಡುವಿಕೆ ಪ್ರಮಾಣ 70 ಪಟ್ಟು ಹೆಚ್ಚಿದೆ. ಆದರೆ, ಶಾಸಕೋಶ ಹಾನಿ ಪ್ರಮಾಣ ಸಾಕಷ್ಟುಕಡಿಮೆ ಇದೆ. ಡೆಲ್ಟಾದಲ್ಲಿ ಶೇ. 17 ರಷ್ಟುಮಂದಿಗೆ ಶ್ವಾಸಕೋಶಕ್ಕೆ ಹಾನಿಯಾಗಿ, ಆಕ್ಸಿಜನ್ ಹಾಸಿಗೆ ಅಗತ್ಯವಿದ್ದರೆ, ಒಮಿಕ್ರೋನ್‌ನಲ್ಲಿ ಶೇ.5ರಷ್ಟುಮಂದಿಗೆ ಮಾತ್ರ ಆಕ್ಸಿಜನ್ ಹಾಸಿಗೆ ಅಗತ್ಯವಿರುತ್ತದೆ. ಹೀಗಾಗಿ, ಸಾವು- ನೋವಿನ ಪ್ರಮಾಣ ಕಡಿಮೆ ಇರಲಿದೆ ಎಂದು ತಿಳಿಸಿದರು.
ನೆಗಡಿ, ಕೆಮ್ಮು ಮಾತ್ರ:
ಒಮಿಕ್ರೋನ್ ಸೋಂಕು ಕೇವಲ ನೆಗಡಿ, ಕೆಮ್ಮು ಮಾತ್ರ ಉಂಟು ಮಾಡಿದೆ. ರಾಜ್ಯದಲ್ಲಿ ಈವರೆಗೂ ಒಮಿಕ್ರೋನ್ ದೃಢಪಟ್ಟವರಲ್ಲಿ ಯಾರಿಗೂ ಗಂಭೀರವಾಗಿಲ್ಲ, ಬಹುತೇಕರಿಗೆ ಲಕ್ಷಣಗಳೇ ಇಲ್ಲ. ಒಮಿಕ್ರೋನ್ ಗಂಟಲಿನಿಂದ ಕೆಳಕ್ಕಿಳಿದು ಶ್ವಾಸಕೋಶಕ್ಕೆ ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಮುಂಜಾಗ್ರತಾ ಕ್ರಮ ಕೈಗೊಂಡು ಮಾಸ್ಕ್ ಬಳಸಿದರೆ ಹರಡುವಿಕೆ ಕಡಿಮೆ ಮಾಡಬಹುದು ಎಂದು ತಾಂತ್ರಿಕ ಸಲಹೆ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ತಿಳಿಸಿದ್ದಾರೆ.
"