ಕೊರೋನಾ ಕಾಟ: ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್
* ಹೊಸ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
* ರಾಜ್ಯದಲ್ಲಿ ಸತತ 15 ದಿನ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳ
* ಪ್ರತಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಿ
ಬೆಂಗಳೂರು(ಜೂ.17): ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾರಣ ಕಂಡುಕೊಳ್ಳಲು ವಿಮಾನ ನಿಲ್ದಾಣಗಳಲ್ಲಿ ಸೋಂಕು ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
ರಾಜ್ಯದಲ್ಲಿ ಸತತ 15 ದಿನ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಕೊರೋನಾ ಮೂರನೇ ಅಲೆ ನಂತರ (ಒಮಿಕ್ರೋನ್ ಬಳಿಕ) ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ. ಆದರೆ ಈ ಏರಿಕೆ ಏಕೆ ಎಂಬುದರ ಪತ್ತೆಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.2 ಲಕ್ಷಣ ರಹಿತರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ವರದಿಯಲ್ಲಿ ಸೋಂಕು ದೃಢಪಟ್ಟರೆ ಆ ಮಾದರಿಯನ್ನು ಜಿನೋಮಿಕ್ ಸೀಕ್ಷೆನ್ಸಿಂಗ್ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ.
ಭಾರತದಲ್ಲಿ ಕೋವಿಡ್ ಸ್ಫೋಟ, ಮತ್ತೊಂದು ರಾಜ್ಯದಲ್ಲಿ ಕಠಿಣ ಮಾರ್ಗಸೂಚಿ ಪ್ರಕಟ!
ಪ್ರತಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟವರಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಬೇಕು. ಉಸಿರಾಟದ ತೊಂದರೆ (ಸಾರಿ) ಹಾಗೂ ವಿಷಮ ಶೀತಜ್ವರ (ಐಎಲ್‌ಐ) ಪ್ರಕರಣಗಳ ಮಾಹಿತಿಯನ್ನು ದಾಖಲಿಸಿ ಈ ಲಕ್ಷಣಗಳನ್ನು ಹೊಂದಿರುವ ಪ್ರತಿ 20 ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಆ ರೋಗಿಗಳ ಮೇಲೆ ನಿಗಾವಹಿಸಬೇಕು. ಪ್ರಯೋಗಾಲಯಗಳು ಪ್ರತಿನಿತ್ಯದ ಕೊರೋನಾ ಪರೀಕ್ಷೆಯ ವರದಿ ಮತ್ತು ಸಿಟಿ ವ್ಯಾಲ್ಯೂ ವಿಶ್ಲೇಷಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪೋರ್ಚ್‌ಲ್ ನಲ್ಲಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.