ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಹತಾಶರಾದ ಕುಟುಂಬ ಆಟೋದಲ್ಲಿ ಬಂದು ಸಿಎಂ ಮನೆ ಮುಂದೆ ಧರಣಿ ನಡೆಸಿದೆ. 

 ಬೆಂಗಳೂರು (ಮೇ.09): ಕೊರೋನಾ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಹತಾಶರಾದ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧಿಕೃತ ಸರ್ಕಾರಿ ನಿವಾಸ ‘ಕಾವೇರಿ’ ಮುಂದೆ ಪ್ರತಿಭಟಿಸಿರುವ ಮತ್ತೊಂದು ಘಟನೆ ಶನಿವಾರ ನಡೆದಿದೆ.

ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳ ನಿವಾಸ ಹಾಗೂ ವಿಧಾನಸೌಧ ಮುಂದೆ ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಹಾಸಿಗೆಗಾಗಿ ಧರಣಿ ನಡೆಸಿದ ಘಟನೆ ಮಾಸುವ ಮುನ್ನವೇ ಶನಿವಾರ ಮತ್ತೊಂದು ಕುಟುಂಬ ಆಟೋ ರಿಕ್ಷಾದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ನಡೆಸಿತು. ನಂತರ ಪೊಲೀಸರು ಶಿವಾಜಿನಗರ ಬೌರಿಂಗ್‌ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದ್ದು ಚಿಕಿತ್ಸೆ ಪಡೆದುಕೊಳ್ಳಲು ನೆರವಾಗಿದ್ದಾರೆ.

ಕೊರೋನಾ ವಾರಿಯರ್ಸ್ ಆಗಿ ಫೀಲ್ಡಿಗಿಳಿದ ಉಡುಪಿ ಆಟೋ ಚಾಲಕರು

ಕೆ.ಜೆ.ಹಳ್ಳಿಯ ನಿವಾಸಿ ಪ್ರಭಾಕರ್‌ ಅವರಿಗೆ ನಗರದ ಹತ್ತಾರು ಆಸ್ಪತ್ರೆಗಳಲ್ಲಿ ಹುಡುಕಾಡಿದರೂ ಹಾಸಿಗೆ ಲಭ್ಯವಾಗಿರಲಿಲ್ಲ. ಶನಿವಾರ ಬೆಳಗ್ಗೆ 5 ಆಸ್ಪತ್ರೆಗಳಿಗೆ ಹೋಗಿ ವಾಪಸ್‌ ಬಂದಿದ್ದರು. ಇದರಿಂದ ಹತಾಶೆಗೊಂಡಿದ್ದ ಕುಟುಂಬಸ್ಥರು ಆಟೋ ರಿಕ್ಷಾದಲ್ಲಿ ಮುಖ್ಯಮಂತ್ರಿಗಳ ಮನೆ ಮುಂದೆ ಬಂದು ಧರಣಿ ನಡೆಸಿದರು. ರಿಕ್ಷಾ ತೆರವುಗೊಳಿಸುವಂತೆ ಪೊಲೀಸರು ಎಷ್ಟುಹೇಳಿದರೂ ಅವರು ಕೇಳಲಿಲ್ಲ. ನಂತರ ಪೊಲೀಸರು ಬೆಡ್‌ಗೆ ವ್ಯವಸ್ಥೆ ಮಾಡಿ ಸೋಂಕಿತರನ್ನು ಸ್ಥಳಾಂತರಿಸಿದರು.

ಕೊರೋನಾ ಕಾಟ: ಬೆಡ್‌ಗಳ ಕೊರತೆಯಾಗುತ್ತಿದೆ, ಹುಷಾರಾಗಿ ಮನೆಯಲ್ಲೇ ಇರಿ! ...

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಂಕಿತರ ಪುತ್ರಿ, ಏಪ್ರಿಲ್‌ 24ಕ್ಕೆ ಕೊರೋನಾ ಪಾಸಿಟಿವ್‌ ಎಂದು ಫಲಿತಾಂಶ ಬಂದಿದೆ. ಈವರೆಗೂ ಬೆಡ್‌ ಸಿಕ್ಕಿಲ್ಲ. ಯಾವುದೇ ಆಸ್ಪತ್ರೆಗೆ ಹೋದರೂ ಹಾಸಿಗೆ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಮನೆಗೆ ಬಂದಿದ್ದೇವೆ ಎಂದು ಹೇಳಿದರು. ಅಲ್ಲದೆ, ನಮ್ಮ ತಾಯಿಗೆ ಕೊರೋನಾ ಲಕ್ಷಣಗಳಿದ್ದು ಪರೀಕ್ಷೆಗೊಳಪಡಿಸಿ ನಾಲ್ಕು ದಿನಗಳು ಕಳೆದಿದೆ. ಈವರೆಗೂ ಫಲಿತಾಂಶ ಬಂದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.