ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹಿನ್ನೆಲೆ ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ.  ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರ ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ಮಾರ್ಗಸೂಚಿಯ ಅವಧಿಯಾದ ಎರಡು ವಾರಗಳ ಕಾಲ ಬಂದ್‌ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು (ಏ.23):  ಕೋವಿಡ್‌ ಹರಡುವುದನ್ನು ತಡೆಗಟ್ಟುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಹಲವು ಕಠಿಣ ನಿಯಮಗಳನ್ನು ಒಳಗೊಂಡ ಮಾರ್ಗಸೂಚಿ ಜಾರಿಯ ಮೊದಲ ದಿನವಾದ ಗುರುವಾರ ಬೆಳಗ್ಗೆಯಿಂದ ತುಸು ಗೊಂದಲ ಉಂಟಾಗಿ ಬಳಿಕ ಸಂಜೆ ವೇಳೆಗೆ ನಿವಾರಣೆಯಾಯಿತು.

ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರ ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಬೇಕು ಎಂಬ ಸೂಚನೆ ಮಾರ್ಗಸೂಚಿಯಲ್ಲಿದ್ದರೂ ಸಾರ್ವಜನಿಕರು ಇದು ಕೇವಲ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ವೇಳೆ ಮಾತ್ರ ಅನ್ವಯವಾಗಲಿದೆ ಎಂದು ಭಾವಿಸಿದ್ದು ಗೊಂದಲಕ್ಕೆ ಮೂಲ ಕಾರಣವಾಯಿತು. ಹೀಗಾಗಿ, ಗುರುವಾರ ಬೆಳಗ್ಗೆಯಿಂದ ಎಲ್ಲ ವಾಣಿಜ್ಯ ಚಟುವಟಿಕೆಗಳೂ ಎಂದಿನಂತೆ ಆರಂಭಗೊಂಡವು.

ಆದರೆ, ಹಲವು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸರು ಅನುಮತಿ ನೀಡಿದ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಏಕಾಏಕಿ ಮುಂದಾದಾಗ ಜನರು ಆತಂಕಕ್ಕೊಳಗಾದರು, ಆಕ್ರೋಶಗೊಂಡರು. ಈ ವೇಳೆ ಹಲವೆಡೆ ಮಾತಿನ ಚಕಮಕಿ, ವಾದ-ಪ್ರತಿವಾದ ಕೂಡ ನಡೆಯಿತು. ರಾಜಧಾನಿ ಬೆಂಗಳೂರಿನಲ್ಲೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ನಿವಾಸಕ್ಕೆ ವಾಪಸಾಗುವಾಗ ಎಲ್ಲ ವಾಣಿಜ್ಯ ಚಟುವಟಿಕೆಗಳು ಆರಂಭಗೊಂಡಿರುವುದನ್ನು ನೋಡಿ ನಗರ ಪೊಲೀಸ್‌ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪೊಲೀಸರು ಕಾರ್ಯಾಚರಣೆಗಿಳಿದರು.

ಆಸ್ಪತ್ರೆಯಿಂದ ಬಂದ ಸಿಎಂ ಫುಲ್ ಗರಂ, ಆಯುಕ್ತರಿಗೆ ಕೊಟ್ಟ ಕಟ್ಟುನಿಟ್ಟಿನ ಆದೇಶ

ಸಂಜೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ಈ ಗೊಂದಲದ ಬಗ್ಗೆ ಪ್ರಸ್ತಾಪವಾಯಿತು. ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ರಾತ್ರಿ ವೇಳೆ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಒಳಗೊಂಡ ಆದೇಶವನ್ನೂ ಹೊರಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು. ಅದರಲ್ಲಿ ಅಗತ್ಯ ವಸ್ತುಗಳಿಗೆ ಸಂಬಂಧಿಸಿದ ವ್ಯವಹಾರ ಹೊರತುಪಡಿಸಿ ಇತರ ಅಂಗಡಿ ಮುಂಗಟ್ಟುಗಳನ್ನು ಮಾರ್ಗಸೂಚಿಯ ಅವಧಿಯಾದ ಎರಡು ವಾರಗಳ ಕಾಲ ಬಂದ್‌ ಮಾಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

ಇದೇ ವೇಳೆ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಸಂಘಟನೆಗಳು ಕೋವಿಡ್‌ ನಿಯಮ ಪಾಲಿಸುವ ಮೂಲಕ ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನೂ ಸರ್ಕಾರದ ಮುಂದಿಟ್ಟಿವೆ. ಶುಕ್ರವಾರ ರಾತ್ರಿಯಿಂದ ವಾರಾಂತ್ಯದ ಕರ್ಫ್ಯೂ ಜಾರಿಗೆ ಬರಲಿದೆ. ಹೀಗಾಗಿ, ಸೋಮವಾರದ ಬಳಿಕ ಈ ಮಾರ್ಗಸೂಚಿ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದಾರೆ ಎನ್ನಲಾಗಿದೆ.