Asianet Suvarna News Asianet Suvarna News

ಮಹದೇವಪುರದಿಂದಲೇ ಕರ್ನಾಟಕಕ್ಕೆ 4ನೇ ಅಲೆ..?

*   ಈ ವಲಯದಲ್ಲೇ ನಗರದ ಹೆಚ್ಚು ಕೋವಿಡ್‌ ಪ್ರಕರಣ ಪತ್ತೆ
*  ಮುಂಬೈ, ಡೆಲ್ಲಿಯಿಂದ ಬಂದವರಲ್ಲೇ ಹೆಚ್ಚು ಸೋಂಕು ಪತ್ತೆ
*   ನಿತ್ಯ ಮಹದೇವಪುರದಲ್ಲಿ 25+ ಕೇಸ್‌ ಪತ್ತೆ
 

Covid 4th Wave from Mahadevapur to Karnataka grg
Author
Bengaluru, First Published Apr 29, 2022, 5:57 AM IST

ಬೆಂಗಳೂರು(ಏ.28):  ಮಹಾದೇವಪುರ ವಲಯ(Mahadevapura Zone) ನಗರದ ‘ಕೋವಿಡ್‌ ಕೇಂದ್ರ’ವಾಗಿ ಬದಲಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಕಳೆದ ಕೆಲ ದಿನಗಳಿಂದ ಈ ವಲಯದಲ್ಲಿ ಅತಿ ಹೆಚ್ಚು ಪ್ರಕರಣ ಪತ್ತೆಯಾಗುತ್ತಿದ್ದು, ರಾಜ್ಯದಲ್ಲಿ ನಾಲ್ಕನೇ ಅಲೆಯ(Covid 4th Wave in Karnataka) ಆರಂಭ ಇಲ್ಲಿಂದಲೇ ಆಗುವ ಆತಂಕ ಕಾಡುತ್ತಿದೆ.

ಈ ಮೊದಲ ಮೂರು ಅಲೆಗಳಲ್ಲಿಯೂ ಕ್ಲಸ್ಟರ್‌ಗಳಲ್ಲಿ ಪ್ರಕರಣ ಪತ್ತೆಯಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿತ್ತು. ಆದರೆ ಈ ಬಾರಿ ವೈಯಕ್ತಿಕ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿದೆ. ಇದೇ ವೇಳೆ ಮಹಾದೇವಪುರದಲ್ಲಿ ಪತ್ತೆಯಾದ ಹೆಚ್ಚಿನ ಪ್ರಕರಣಗಳಲ್ಲಿ ಬೇರೆ ಊರಿನಿಂದ ಬಂದವರಲ್ಲಿ ಸೋಂಕು ಕಂಡು ಬಂದಿದೆ. ವಿಶೇಷವಾಗಿ ಮುಂಬೈ, ದೆಹಲಿ, ಅಹಮದಾಬಾದ್‌ ಸೇರಿದಂತೆ ದೇಶದ ಇತರ ನಗರಗಳಿಂದ ಬಂದವರಲ್ಲಿ ಹೆಚ್ಚಿನ ಪ್ರಕರಣ ಪತ್ತೆಯಾಗುತ್ತಿವೆ.

Covid Crisis: 46 ದಿನದ ಬಳಿಕ 3000 ಗಡಿ ದಾಟಿದ ಕೋವಿಡ್‌, ಮತ್ತೆ ಹೆಚ್ಚಿದ ಆತಂತ..!

ಬೆಂಗಳೂರು(Bengaluru) ನಗರದಲ್ಲಿ 1,681 ಸಕ್ರಿಯ ಪ್ರಕರಣಗಳಿದ್ದರೂ ಒಂದೇ ಮನೆಯಲ್ಲಿ ಮೂರಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾಗಿರುವ ಏಕೈಕ ಕ್ಲಸ್ಟರ್‌ ಪ್ರಕರಣವಿದೆ. ಬನ್ನೇರುಘಟ್ಟದ ಅಪಾರ್ಚ್‌ಮೆಂಟ್‌ ಒಂದರ ಫ್ಲ್ಯಾಟ್‌ನಲ್ಲಿ ಐವರಲ್ಲಿ ಕೋವಿಡ್‌ ಪತ್ತೆಯಾಗಿರುವುದು ನಗರದಲ್ಲಿನ ಸದ್ಯದ ಏಕಮಾತ್ರ ಕ್ಲಸ್ಟರ್‌. ಉಳಿದಂತೆ ಮಹಾದೇವಪುರ ಮತ್ತು ಬೆಂಗಳೂರು ಪೂರ್ವ ವಲಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಕ್ಲಸ್ಟರ್‌ ರೂಪದಲ್ಲಿ ಪ್ರಕರಣ ಕಂಡು ಬಂದಿಲ್ಲ.

ಬೆಳ್ಳಂದೂರು, ವರ್ತೂರು, ಮಹಾದೇವಪುರ ವಾರ್ಡ್‌ನಲ್ಲಿ 25ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣವಿದೆ. ಇದೇ ವಲಯದ ದೊಡ್ಡನೆಕ್ಕುಂದಿ, ಕಾಡುಗೋಡಿ, ಹೂಡಿ, ಹೊರಮಾವು, ಬೆಂಗಳೂರು ಪೂರ್ವ ವಲಯದ ಎಚ್‌ಎಸ್‌ಆರ್‌ ಬಡಾವಣೆ, ದಕ್ಷಿಣ ವಲಯದ ಸುದ್ದಗುಂಟೆ ಪಾಳ್ಯ, ಕೋರಮಂಗಲ, ಬೊಮ್ಮನಹಳ್ಳಿ ವಲಯದ ಅರಕೆರೆ ಮತ್ತು ಬೆಂಗಳೂರು ಪಶ್ಚಿಮ ವಲಯದ ರಾಜಾಜಿ ನಗರದಲ್ಲಿ 10ರಿಂದ 25 ಪ್ರಕರಣಗಳಿವೆ. ಉಳಿದ ವಾರ್ಡ್‌ಗಳಲ್ಲಿ ಬೆರಳೆಣಿಕೆಯ ಪ್ರಕರಣಗಳಷ್ಟೆಇವೆ. ಆದರೆ ಬೇರೆ ವಾರ್ಡ್‌ಗಳಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಕರ್ನಾಟಕದಲ್ಲೂ ಕೋವಿಡ್‌ ಆತಂಕ?: ಸಚಿವ ಸುಧಾಕರ್‌ ಪ್ರತಿಕ್ರಿಯೆ

ಮಹಾದೇವಪುರ ಮತ್ತು ಬೆಂಗಳೂರು ಪೂರ್ವ ವಲಯದಲ್ಲಿ ಹೆಚ್ಚು ಪ್ರಕರಣ ಕಂಡು ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿಯ(BBMP) ಆರೋಗ್ಯ ಆಯುಕ್ತ ಡಾ. ತ್ರಿಲೋಕಚಂದ್ರ, ಮಹಾದೇವಪುರದಲ್ಲಿ ಹೆಚ್ಚು ಪ್ರಕರಣ ಕಂಡು ಬಂದಿದೆ. ಹೆಚ್ಚಿನ ಪ್ರಕರಣಗಳಲ್ಲಿ ಟ್ರಾವೆಲ್‌ ಹಿಸ್ಟರಿ ಇದೆ. ನಾವು ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದೇವೆ. ಅದೇ ರೀತಿ ನಗರಾದ್ಯಂತ ‘ಸಾರಿ’ ಮತ್ತು ಐಎಲ್‌ಐ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ(Covid Test) ನಡೆಸುವಂತೆ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ದಿನಾಂಕ ಮಹಾದೇವಪುರ ಬೆಂಗಳೂರು ಪೂರ್ವ ನಗರದ ಒಟ್ಟು ಪ್ರಕರಣ

ಏ.28 27 16 142
ಏ.27 24 10 114
ಏ.26 23 14 82
ಏ.25 22 12 63
ಏ.24 23 12 57
ಏ.23 23 10 132
ಏ.22 22 9 85

ಆತಂಕಕ್ಕೆ ಏನು ಕಾರಣ?

* ನಿತ್ಯ ಮಹದೇವಪುರದಲ್ಲಿ 25+ ಕೇಸ್‌ ಪತ್ತೆ
* ಬೇರೆ ವಲಯಗಳಲ್ಲಿ 20ಕ್ಕಿಂತ ಕಡಿಮೆ ಕೇಸ್‌
 

Follow Us:
Download App:
  • android
  • ios