* ಅಕ್ಟೋಬರ್‌ಗೂ ಮುನ್ನವೇ ರಾಜ್ಯಕ್ಕೆ 3ನೇ ಅಲೆ ಆತಂಕ* ಅನ್‌ಲಾಕ್‌ ಆರಂಭದಲ್ಲೇ ಜನಜಂಗುಳಿ* ಆಗಸ್ಟಲ್ಲೇ ವೈರಸ್‌ ದಾಳಿ ಭೀತಿ: ತಜ್ಞರು

ರಾಕೇಶ್‌ ಎಂ.ಎನ್‌.

ಬೆಂಗಳೂರು(ಜೂ.17): ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರು ಕೊರೋನಾ ಒಂದನೇ ಅಲೆ ಇಳಿಕೆ ಸಂದರ್ಭದಲ್ಲಿ ತೋರಿದ ಅದೇ ನಿರ್ಲಕ್ಷ್ಯವನ್ನು ಎರಡನೇ ಅಲೆ ತಗ್ಗುವಿಕೆಯ ಆರಂಭದಲ್ಲೇ ತೋರತೊಡಗಿದ್ದಾರೆ. ಪರಿಣಾಮ ಮೂರನೇ ಅಲೆ ನಿರೀಕ್ಷೆಗೂ ಮುನ್ನವೇ ತನ್ನ ಹಾಜರಾತಿಯನ್ನು ಹಾಕುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ ತೆರವಾಗುತ್ತಿದ್ದಂತೆಯೇ ಜನ ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದಾರೆ. ಮಾರುಕಟ್ಟೆಗಳಲ್ಲಿ ಜನಜಂಗುಳಿ ನಿರ್ಮಾಣವಾಗಿದೆ. ಮಾರುಕಟ್ಟೆಸೇರಿದಂತೆ ಎಲ್ಲಿಯೂ ಸಾಮಾಜಿಕ ಅಂತರ ಪಾಲನೆಯೇ ಆಗುತ್ತಿಲ್ಲ. ಜನರ ಈ ವರ್ತನೆ ತಡೆಯುವ ಪ್ರಯತ್ನದಲ್ಲಿ ಸರ್ಕಾರವು ವೈಫಲ್ಯ ಕಾಣುತ್ತಿದೆ. ಇದೆಲ್ಲದರ ಪರಿಣಾಮವಾಗಿ ಆಗಸ್ಟ್‌ ಅಥವಾ ಸೆಪ್ಟಂಬರ್‌ನಲ್ಲೇ ಮೂರನೇ ಅಲೆ ದಾಂಗುಡಿಯಿಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ನಿರೀಕ್ಷೆ ಏನಿತ್ತು?:

ಸಾಮಾನ್ಯವಾಗಿ ವೈರಾಣುಗಳ 2 ಅಲೆ ನಡುವೆ 90ರಿಂದ 120 ದಿನಗಳ ಅಂತರವಿರುತ್ತದೆ ಎಂಬ ವೈಜ್ಞಾನಿಕ ವಿಶ್ಲೇಷಣೆ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಮೂರನೇ ಅಲೆ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಕೊರೋನಾ ನಿಯಮಾವಳಿಗಳ ವ್ಯಾಪಕ ಉಲ್ಲಂಘನೆ ನಡೆದರೆ ಮತ್ತು ಈ ಅವಧಿಯಲ್ಲಿ ವೈರಾಣು ಮತ್ತೊಂದು ರೂಪಾಂತರಕ್ಕೆ ಒಳಗಾದರೆ 50-60 ದಿನದಲ್ಲೇ ಮತ್ತೊಂದು ಅಲೆ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಲಾಕ್‌ಡೌನ್‌ ಹಿಂಪಡೆದ ನಂತರ ಸರ್ಕಾರ ಹಾಗೂ ಜನತೆ ಮೈಮರೆÜತರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿಯೇ ಅನ್‌ಲಾಕ್‌ ಪಕ್ರಿಯೆ ಅತ್ಯಂತ ನಿಯಂತ್ರಿತವಾಗಿ, ಕ್ರಮಬದ್ಧವಾಗಿ ನಡೆಯಬೇಕು. ಇದಾದರೆ ಮೂರನೇ ಅಲೆಯ ಅಪಾಯ ಮುಂದೂಡಬಹುದು. ಆದರೆ, ಪ್ರಸ್ತುತ ಪರಿಸ್ಥಿತಿ ಅವಲೋಕಿಸಿದರೆ ಇನ್ನೆರಡೇ ತಿಂಗಳಲ್ಲಿ ಮತ್ತೊಂದು ಅಲೆ ರಾಜ್ಯವನ್ನು ಕಾಡಿದರೆ ಅಚ್ಚರಿಯಿಲ್ಲ ಎನ್ನುತ್ತಾರೆ ಕೊರೋನಾ ನಿಯಂತ್ರಣ ಸಲಹಾ ಸಮಿತಿಯ ಹೆಸರು ಹೇಳಬಯಸದ ಹಿರಿಯ ಸದಸ್ಯರೊಬ್ಬರು.

ಡೆಲ್ಟಾ ಪ್ಲಸ್‌ ಹಾವಳಿ ಭೀತಿ:

ಏಪ್ರಿಲ್‌ ತಿಂಗಳಿನಲ್ಲಿ ದೇಶದಲ್ಲಿ ಕಾಣಿಸಿಕೊಂಡಿದ್ದ ಕೊರೋನಾದ ರೂಪಾಂತರಿ ಡೆಲ್ಟಾವೈರಾಣು ದೇಶವ್ಯಾಪಿ 2ನೇ ಅಲೆಗೆ ಕಾರಣವಾಗಿ 2 ತಿಂಗಳು ಕಾಲ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ರಾಜ್ಯದಲ್ಲಿ ಮಾಚ್‌ರ್‍ ತಿಂಗಳಲ್ಲಿ ದಿನನಿತ್ಯ ಕಂಡುಬರುತ್ತಿದ್ದ 300-400 ಪ್ರಕರಣ ಕೊನೆಗೆ ದಿನಕ್ಕೆ 50 ಸಾವಿರಕ್ಕೇರಿತ್ತು. ಅದೇ ರೀತಿ ಮೂರ್ನಾಲ್ಕು ವಾರ ಪ್ರತಿದಿನ 400-500 ಜನರ ಸಾವಿಗೆ ಕಾರಣವಾಗಿತ್ತು. ಈ ಡೆಲ್ಟಾವೈರಾಣು ಅತಿ ವೇಗವಾಗಿ ಹಬ್ಬುವ ಸಾಮರ್ಥ್ಯ ಹೊಂದಿದ್ದು ಐದು ಸಾವಿರದಿಂದ ಮತ್ತೆ ಹತ್ತಾರು ಸಾವಿರಕ್ಕೆ ಏರಲು ಹೆಚ್ಚು ಸಮಯ ಬೇಕಾಗಿಲ್ಲ. ಇದೀಗ ಡೆಲ್ಟಾಪ್ಲಸ್‌ ಎಂಬ ಹೊಸ ರೂಪಾಂತರಿಯೂ ಪತ್ತೆಯಾಗಿದೆ. ಜನರು ಈ ರೀತಿ ಬೀದಿಯಲ್ಲಿ ಓಡಾಡುತ್ತಿದ್ದಾರೆ ಕೋವಿಡ್‌ ಮತ್ತೆ ಹೆಚ್ಚಾಗುವ ಸಂಭವ ಇದ್ದೇ ಇದೆ ಎಂದು ಅವರು ಎಚ್ಚರಿಸುತ್ತಾರೆ.

ಪರೀಕ್ಷೆ ಸರಿಯಾಗಿಲ್ಲ:

ಬೆಂಗಳೂರಿನಲ್ಲಿ ಕೋವಿಡ್‌ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಆರ್‌ಟಿಪಿಸಿಆರ್‌ ಪರೀಕ್ಷೆಗಿಂತ ಕಡಿಮೆ ನಿಖರತೆ ಹೊಂದಿರುವ ಆ್ಯಂಟಿಜೆನ್‌ ಪರೀಕ್ಷೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ. ಅನ್‌ಲಾಕ್‌ನಿಂದ ಸೋಂಕಿನ ಗುಣಲಕ್ಷಣಗಳಿಲ್ಲದವರು ಸೂಪರ್‌ ಸೆ್ೊ್ರಡರ್‌ಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡುವ ಪ್ರಕ್ರಿಯೆ ಚುರುಕಾಗಿ ನಡೆಯಬೇಕು. ಇದೆಲ್ಲದರ ಜೊತೆಗೆ ಜನರ ಅನಗತ್ಯ ಓಡಾಟ ಮತ್ತು ಜನಸಂದಣಿಗೆ ಸರ್ಕಾರ ಬ್ರೇಕ್‌ ಹಾಕಲೇ ಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ.

ಈ ರೀತಿ ಸಂದಣಿಯಿದ್ದಾಗ ರೂಪಾಂತರಿ ವೈರಸ್‌ ಸೃಷ್ಟಿ ಹಾಗೂ ಅದರ ಹಬ್ಬುವಿಕೆ ಹೆಚ್ಚು

ಲಾಕ್‌ಡೌನ್‌ ತೆರವಾದ ಕೂಡಲೇ ಜನರು ವರ್ತಿಸುತ್ತಿರುವ ರೀತಿಯು ಸಮೂಹದ ಸ್ಮರಣಾ ಶಕ್ತಿ ತಾತ್ಕಾಲಿಕ ಎಂಬ ಮಾತು ನೆನಪಿಸುತ್ತದೆ. ಈ ರೀತಿ ಸಂದಣಿಯಿದ್ದಾಗ ರೂಪಾಂತರಿ ವೈರಸ್‌ ಸೃಷ್ಟಿಹಾಗೂ ಅದರ ಹಬ್ಬುವಿಕೆ ಹೆಚ್ಚು. ಇದು ಸಹಜವಾಗಿ ಮೂರನೇ ಅಲೆಯ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ಹೀಗಾಗಿ ಕೋವಿಡ್‌ ಪರೀಕ್ಷೆಯ ಸಂಖ್ಯೆ ಮತ್ತಷ್ಟುಹೆಚ್ಚಿಸಬೇಕು.

- ಡಾ. ಗಿರಿಧರ್‌ ಬಾಬು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ