ಬೆಂಗಳೂರು (ಮಾ.07):  ಕೊರೋನಾ ಸೋಂಕು ಪತ್ತೆಗೆ ಸದ್ಯ ಹೆಚ್ಚು ಪ್ರಚಲಿತದಲ್ಲಿರುವ ಆರ್‌ಟಿಪಿಸಿಆರ್‌ ಪರೀಕ್ಷೆಗಿಂತಲೂ ಪ್ರೊಟೀನ್‌ ಆಧಾರಿತ (ಮಾಸ್‌ ಸ್ಪೆಕ್ಟ್ರೋಮೀಟ್ರಿ) ಪರೀಕ್ಷೆ ನಡೆಸುವುದು ಹೆಚ್ಚು ಸೂಕ್ತ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಟಿಪಿಸಿಆರ್‌ ಪರೀಕ್ಷೆಯು ಆರ್‌ಎನ್‌ಎ (ರಿಬೊನ್ಯೂಕ್ಲಿಯಿಕ್‌ ಆಮ್ಲ) ಆಧಾರಿತ ಪರೀಕ್ಷೆಯಾಗಿದೆ. ಆದರೆ ಕೊರೋನಾ ವೈರಾಣುವು ಸೋಂಕಿತರ ಪ್ರೊಟೀನ್‌ನಲ್ಲಿ ಬದಲಾವಣೆ ಮಾಡುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಪ್ರೊಟೀನ್‌ ಅನ್ನು ವಿಶ್ಲೇಷಣೆಗೆ ಒಳಪಡಿಸುವ ಸ್ಪೆಕ್ಟ್ರೋಮೀಟ್ರಿ ಪರೀಕ್ಷೆ ನಡೆಸುವುದರಿಂದ ಹೆಚ್ಚು ಅನುಕೂಲವಿದೆ ಎಂದು ಐಐಎಸ್‌ಸಿಯ ಜೀವ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಉತ್ಪಲ್‌ ತಾತು ನೇತೃತ್ವದ ತಂಡ ಅಭಿಪ್ರಾಯಪಟ್ಟಿದೆ.

ಕೋವಿಡ್‌ ಸೋಂಕು ಪತ್ತೆ ಹಚ್ಚುವಲ್ಲಿ ಪ್ರೊಟೀನ್‌ಗಳು ಪ್ರಮುಖ ಪಾತ್ರ ವಹಿಸಬಲ್ಲವು. ಏಕೆಂದರೆ ಆರ್‌ಎನ್‌ಎಗಿಂತ ಪ್ರೊಟೀನ್‌ಗಳು ಹೆಚ್ಚು ಸ್ಥಿರ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಲಭ್ಯ ಇರುತ್ತದೆ. ಆದ್ದರಿಂದ ಪ್ರೊಟೀನ್‌ ಅನ್ನು ವಿಶ್ಲೇಷಣೆಗೆ ಒಳಪಡಿಸುವ ಸ್ಪೆಕ್ಟ್ರೋಮೀಟ್ರಿಯೇ ಭವಿಷ್ಯದಲ್ಲಿ ಸೋಂಕು ಪತ್ತೆ ಹಚ್ಚುವ ಅತ್ಯುತ್ತಮ ವಿಧಾನವಾಗುವ ಸಾಧ್ಯತೆಯಿದೆ ಎಂದು ತಾತು ಹೇಳುತ್ತಾರೆ.

ಕೆಲಸಗಾರರ ಮತ್ತು ಕುಟುಂಬಗಳ ವ್ಯಾಕ್ಸೀನ್ ಖರ್ಚು ವಹಿಸಿಕೊಂಡ ರಿಲಯನ್ಸ್ ..

ಕೋವಿಡ್‌ ಪೀಡಿತರಲ್ಲಿ 441 ಭಿನ್ನ ಬಗೆಯ ಪ್ರೊಟೀನ್‌ ಕಂಡುಬಂದಿದ್ದು, ಇದು ದೇಹದ ರೋಗ ನಿರೋಧಕ ಶಕ್ತಿಯ ಸ್ಪಂದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಪ್ರೊಟೋಮಿಕ್‌ ವಿಶ್ಲೇಷಣೆಯಲ್ಲಿ ಕೋವಿಡ್‌ ಪೀಡಿತರಲ್ಲಿ 13 ಪ್ರೊಟೀನ್‌ಗಳನ್ನು ಹೊಸದಾಗಿ ಗುರುತಿಸಲಾಗಿದೆ. ಇದರಲ್ಲಿ ಓಆರ್‌ಎಫ್‌9ಬಿ ಎಂಬ ಪ್ರೊಟೀನ್‌ ಮಾನವನ ಜೀವ ನಿರೋಧಕ ಪ್ರತಿಕ್ರಿಯೆಯನ್ನು ಹತ್ತಿಕ್ಕುತ್ತದೆ ಎಂಬುದನ್ನು ಪತ್ತೆಹಚ್ಚಲಾಗಿದೆ.

ಕೊರೋನಾ ವೈರಾಣು ತಾನು ಬದುಕುಳಿಯಲು ಮಾನವನ ಪ್ರೊಟೀನ್‌ ಅನ್ನು ಜೈವಿಕವಾಗಿ, ಆಣ್ವಿಕ (ಮಾಲಿಕ್ಯುಲರ್ಲಿ) ಮತ್ತು ಕೋಶಮಟ್ಟದಲ್ಲಿ ಪ್ರಭಾವಿಸುತ್ತದೆ. ಕೋವಿಡ್‌ ಪಾಸಿಟಿವ್‌ ಮತ್ತು ಕೋವಿಡ್‌ ನೆಗೆಟಿವ್‌ ಬಂದವರ ಜೀವಕೋಶಗಳನ್ನು ಪ್ರೊಟೀನ್‌ ವಿಶ್ಲೇಷಣೆಗೆ ಒಳಪಡಿಸಿದಾಗ ಕೊರೋನಾ ವೈರಾಣು ತನ್ನ ಉಳಿವು ಮತ್ತು ಅಭಿವೃದ್ಧಿಗಾಗಿ ಮಾನವ ಜೀವಕೋಶದ ಜೈವಿಕ ಮಾರ್ಗಗಳನ್ನೇ ಹೈಜಾಕ್‌ ಮಾಡುವ ವಿದ್ಯಮಾನ ಸಂಶೋಧನೆಯಲ್ಲಿ ಪತ್ತೆಯಾಗಿದೆ. ಫೆಬ್ರವರಿಯ ‘ಪ್ರೊಟಿಯೋಮ್‌ ರೀಸಚ್‌ರ್‍’ ನಿಯತಕಾಲಿಕದಲ್ಲಿ ಸಂಶೋಧನಾ ವರದಿ ಪ್ರಕಟವಾಗಿದೆ.

ಏನಿದು ಸ್ಪೆಕ್ಟ್ರೋಮೀಟ್ರಿ ಪರೀಕ್ಷೆ?

ಸ್ಪೆಕ್ಟ್ರೋಮೀಟ್ರಿ ಪರೀಕ್ಷೆಯಲ್ಲಿ ಪ್ರೊಟೀನ್‌ ರಚನೆಯ ಭಿನ್ನತೆಯನ್ನು ಆಧರಿಸಿ ಸೋಂಕು ಪತ್ತೆಹಚ್ಚಲಾಗುತ್ತದೆ. ಇದು ಆರ್‌ಟಿಪಿಸಿಆರ್‌ಗಿಂತ ಕಡಿಮೆ ಸಮಯದಲ್ಲಿ ಹೆಚ್ಚು ನಿಖರ ಫಲಿತಾಂಶವನ್ನು ನೀಡುತ್ತದೆ. ಸ್ಪೆಕ್ಟ್ರೋಮೀಟ್ರಿ ಪರೀಕ್ಷೆಯಲ್ಲಿ ಮೂರು ನಿಮಿಷದಲ್ಲಿಯೇ ಫಲಿತಾಂಶ ಬರುತ್ತದೆ. ಪರೀಕ್ಷೆಗೆ ಆರ್‌ಟಿಪಿಸಿಆರ್‌ಗಿಂತಲೂ ಕಡಿಮೆ ವೆಚ್ಚವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.