Asianet Suvarna News Asianet Suvarna News

‘ವೈರಲ್‌ ಲೋಡ್‌’ನಿಂದಾಗಿ ಸೋಂಕು ಹೆಚ್ಚುವ ಭೀತಿ!

‘ವೈರಲ್‌ ಲೋಡ್‌’ನಿಂದಾಗಿ ಸೋಂಕು ಹೆಚ್ಚುವ ಭೀತಿ| ರೋಗಲಕ್ಷಣವಿರುವ ಸೋಂಕಿತರು ತೀವ್ರ ಹೆಚ್ಚಳ| ತಿಂಗಳ ಹಿಂದೆ ಶೇ.3 ಇದ್ದದ್ದು ಈಗ ಶೇ.40ಕ್ಕೇರಿಕೆ| ಇದರಿಂದ ಸೋಂಕು ವೇಗವಾಗಿ ಹರಡುವ ಆತಂಕ

Covid 19 Infection may gradually Increase Due To Viral Load
Author
Bangalore, First Published Jul 19, 2020, 4:50 PM IST

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಜು.19): ರಾಜ್ಯದಲ್ಲಿ ಕೊರೋನಾ ಸೋಂಕು ಲಕ್ಷಣವುಳ್ಳ (ಸಿಮ್ಟಮ್ಯಾಟಿಕ್‌) ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ 100 ಮಂದಿ ಸಕ್ರಿಯ ಸೋಂಕಿತರಲ್ಲಿ ಕೇವಲ 3 ಮಂದಿ ಲಕ್ಷಣವುಳ್ಳವರಾಗಿದ್ದರೆ ಪ್ರಸ್ತುತ ಈ ಸಂಖ್ಯೆ 40 ಮಂದಿಗೆ ಹೆಚ್ಚಿದೆ.

ಇದಕ್ಕೆ ಮುಖ್ಯ ಕಾರಣ ವೈರಲ್‌ ಲೋಡ್‌ (ಸೋಂಕಿತರಲ್ಲಿ ಇರುವ ವೈರಾಣುವಿನ ಪ್ರಮಾಣ) ಹೆಚ್ಚಾಗುತ್ತಿರುವುದು. ಸೋಂಕಿತರಲ್ಲಿ ವೈರಲ್‌ ಲೋಡ್‌ ಹೆಚ್ಚಾಗಿರುವ ಪರಿಣಾಮ ಲಕ್ಷಣವುಳ್ಳ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಸೋಂಕು ಲಕ್ಷಣಗಳುಳ್ಳ ಸೋಂಕಿತರಿಂದಲೇ ಹೆಚ್ಚು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ ಇನ್ನು ಮುಂದೆ ಇನ್ನೂ ವೇಗವಾಗಿ ಸೋಂಕು ಹರಡಬಹುದು. ಚೇತರಿಕೆ ವಿಳಂಬ ಆಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಜೂ.17ರವರೆಗೂ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಸೋಂಕಿತರಲ್ಲಿ ಕೇವಲ ಶೇ.3 ಮಂದಿಗೆ ಮಾತ್ರ ಸೋಂಕು ಲಕ್ಷಣಗಳಿತ್ತು. ಆದರೆ, ಈಗ ಈ ಸಂಖ್ಯೆ ಬದಲಾಗಿದ್ದು, ಪ್ರಸ್ತುತ ಸಕ್ರಿಯ ಸೋಂಕಿತರಲ್ಲಿ ಬರೋಬ್ಬರಿ ಶೇ.40ರಷ್ಟುಮಂದಿಗೆ ರೋಗ ಲಕ್ಷಣ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸೋಂಕು ಹೆಚ್ಚಳ ಬೆಂಗಳೂರು ನಂ.1: ರಾಜ್ಯ ರಾಜಧಾನಿ ಈಗ ದೇಶದ ಕೊರೋನಾ ಹಾಟ್‌ಸ್ಪಾಟ್‌!

ಇನ್ನು ರಾಜ್ಯದ ಅರ್ಧಭಾಗದ ಸೋಂಕು ಪ್ರಕರಣ ಮಡಿಲಲ್ಲಿಟ್ಟುಕೊಂಡಿರುವ ಬೆಂಗಳೂರು ನಗರದಲ್ಲಿ ಶೇ.3ರಷ್ಟಿದ್ದ ಸೋಂಕು ಲಕ್ಷಣಗಳುಳ್ಳ (ಸಿಮ್ಟಮ್ಯಾಟಿಕ್‌) ಸಕ್ರಿಯ ಸೋಂಕಿತರ ಪ್ರಮಾಣ ಇದೀಗ ಶೇ.48ಕ್ಕೆ ಏರಿಕೆಯಾಗಿದೆ.

ಸೋಂಕು ಲಕ್ಷಣ ಎಲ್ಲೆಡೆ ಹೆಚ್ಚಳ:

ಲಕ್ಷಣವುಳ್ಳ ಸೋಂಕಿತರ ಸಂಖ್ಯೆ ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೆಚ್ಚಾಗತೊಡಗಿದೆ. ಜೂ.17 ರವರೆಗೆ ವರದಿಯಾಗಿದ್ದ ಒಟ್ಟಾರೆ (ಸಕ್ರಿಯ-ಗುಣಮುಖ-ಸಾವು ಸೇರಿ) ಪ್ರಕರಣಗಳಲ್ಲಿ ಉಡುಪಿಯಲ್ಲಿ ಶೇ.3.9, ಬಾಗಲಕೋಟೆಯಲ್ಲಿ ಶೇ.8, ಬೆಳಗಾವಿ ಶೇ.3, ಬೆಂಗಳೂರು ಗ್ರಾಮಾಂತರ ಶೇ.9, ಚಿಕ್ಕಬಳ್ಳಾಪುರ ಶೇ.6, ಬೆಂಗಳೂರು ನಗರ ಶೇ.28.8 ರಷ್ಟುಇತ್ತು. ಒಟ್ಟಾರೆ ಸೋಂಕಿತರಲ್ಲಿ ಶೇ.15.5 ಮಂದಿ ಸೋಂಕು ಲಕ್ಷಣ ಹೊಂದಿದ್ದರೆ ಅಂದಿನ ಸಕ್ರಿಯ ಸೋಂಕಿತರಲ್ಲಿ ಶೇ.3 ಮಂದಿಗೆ ಮಾತ್ರ ಸೋಂಕು ಲಕ್ಷಣ ಗೋಚರಿಸಿತ್ತು.

ಇದೀಗ ಬಾಗಲಕೋಟೆಯಲ್ಲಿ ಒಟ್ಟು ಸೋಂಕಿತರಲ್ಲಿ ಬರೋಬ್ಬರಿ ಶೇ.76.3 ಮಂದಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿವೆ. ಬಳ್ಳಾರಿ ಶೇ.65.2, ಬೆಳಗಾವಿ ಶೇ.63.2, ಬೆಂಗಳೂರು ಗ್ರಾಮಾಂತರ ಶೇ.51.5, ಬೆಂಗಳೂರು ನಗರ ಶೇ.45.8, ಬೀದರ್‌ನಲ್ಲಿ ಶೇ.43 ರಷ್ಟುಮಂದಿಗೆ ಲಕ್ಷಣಗಳು ಕಾಣಿಸಿಕೊಂಡಿವೆ. ಸಕ್ರಿಯ ಸೋಂಕಿತರಲ್ಲಿ ಈ ಪ್ರಮಾಣ ಇನ್ನೂ ಅಪಾಯಕಾರಿ ಮಟ್ಟದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

ಪಿಪಿಇ ಕಿಟ್‌ ಧರಿಸಿದರೂ ಸೋಂಕು:

ವೈರಲ್‌ ಲೋಡ್‌ ಕಡಿಮೆಯಿದ್ದರೆ ಸೋಂಕು ಲಕ್ಷಣಗಳು ಕಾಣುವುದಿಲ್ಲ. ಲೋಡ್‌ ಹೆಚ್ಚಾದಂತೆಲ್ಲ ಸೋಂಕಿನ ಲಕ್ಷಣಗಳು ಕಾಣತೊಡಗುತ್ತವೆ. ಅಷ್ಟೇ ಅಲ್ಲ ಇಂತಹ ಸೋಂಕಿತರಿಂದ ಬೇಗ ಬೇರೆಯವರಿಗೆ ಸೋಂಕು ಹಬ್ಬುತ್ತದೆ.

ಇದಕ್ಕೆ ಸ್ಪಷ್ಟನಿದರ್ಶನವೆಂದರೆ, ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡುತ್ತಿರುವ ವೈದ್ಯ ಸಿಬ್ಬಂದಿಗೂ ವ್ಯಾಪಕವಾಗಿ ಸೋಂಕು ತಗುಲುತ್ತಿರುವುದು. ಬೆಂಗಳೂರು ನಗರ ಒಂದರಲ್ಲೇ ಪಿಪಿಇ ಕಿಟ್‌ ಧರಿಸಿ ಕೆಲಸ ಮಾಡಿದರೂ 410 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ವೈರಲ್‌ ಲೋಡ್‌ ಹೆಚ್ಚಾಗಿರುವುದರಿಂದಲೇ ಇಂತಹ ಬೆಳವಣಿಗೆ ನಡೆಯುತ್ತಿದೆ ಎಂದು ಹೆಸರು ಹೇಳಬಯಸದ ಸ್ವತಃ ಸೋಂಕಿತ ವೈದ್ಯರೇ ಅಭಿಪ್ರಾಯಪಟ್ಟಿದ್ದಾರೆ.

ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರ ಗಮನಕ್ಕೂ ತಂದಿರುವ ವೈದ್ಯರು, ‘ವೈರಲ್‌ ಲೋಡ್‌ ಹೆಚ್ಚಾಗುತ್ತಿದೆ. ಹೀಗಾಗಿ ನಾವು ಪಿಪಿಇ ಕಿಟ್‌ ಸೇರಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೋಂಕಿತರಾಗುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ವೈದ್ಯಕೀಯ ಸಿಬ್ಬಂದಿಯಲ್ಲಿ ಸೋಂಕು ತಗುಲಿಸಿಕೊಂಡ ಬಹುತೇಕರಿಗೆ ಆಸ್ಪತ್ರೆಯಿಂದ ಹೊರಗೂ ಹೋಗುವುದರಿಂದ ಅಲ್ಲಿಯೂ ಅವರು ಸೋಂಕಿತರಾಗುವ ಸಾಧ್ಯತೆಯಿದೆ’ ಎಂಬ ಸಬೂಬು ಹೇಳುತ್ತಾರೆ.

ವೈರಲ್‌ ಲೋಡ್‌ ಹೆಚ್ಚಳ, ಚೇತರಿಕೆ ವಿಳಂಬ

ಸೋಂಕಿತರಲ್ಲಿ ವೈರಲ್‌ ಲೋಡ್‌ ಹೆಚ್ಚಾಗಿರುವುದರ ಪರಿಣಾಮವೇನೆಂದರೆ ಲಕ್ಷಣವುಳ್ಳ ಸೋಂಕಿತರ ಚಿಕಿತ್ಸಾ ಅವಧಿ ಹೆಚ್ಚಾಗುತ್ತಿದೆ. ಈ ಹಿಂದೆ ಲಕ್ಷಣವುಳ್ಳ ಸೋಂಕಿತರು 10 ದಿನದಲ್ಲಿ ಗುಣಮುಖರಾಗುತ್ತಿದ್ದು, ಈ ಅವಧಿಯಲ್ಲಿ ನಡೆಸುವ ಅವರ ಸೋಂಕು ಪರೀಕ್ಷೆ ನೆಗೆಟಿವ್‌ ಬರುತ್ತಿತ್ತು. ಆದರೆ, ಈಗ 12 ದಿನವಾದರೂ ನೆಗೆಟಿವ್‌ ಬರುತ್ತಿಲ್ಲ!

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಕಳೆದ 15 ದಿನಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸೋಂಕು ಲಕ್ಷಣಗಳನ್ನು ಹೊಂದಿದ್ದ ಸೋಂಕಿತರಿಗೆ 12 ದಿನಗಳ ಬಳಿಕವೂ ಕೊರೋನಾ ಸೋಂಕು ಪಾಸಿಟಿವ್‌ ಬಂದಿದೆ. ಅದಾದ ಕೆಲ ದಿನಗಳ ನಂತರ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದಾರೆ. ಇಂತಹ ಬೆಳವಣಿಗೆಗೆ ‘ವೈರಲ್‌ ಲೋಡ್‌’ ಹೆಚ್ಚಾಗಿರುವುದೇ ಇದಕ್ಕೆ ಕಾರಣವಿರಬಹುದು’ ಎಂದು ರಾಜ್ಯ ಸರ್ಕಾರದ ತಜ್ಞರ ಸಮಿತಿಯ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಬೆಂಗಳೂರಲ್ಲಿ 410 ವೈದ್ಯ ಸಿಬ್ಬಂದಿಗೆ ಸೋಂಕು

ಕೆ.ಸಿ. ಜನರಲ್‌ ಆಸ್ಪತ್ರೆಯ 69 ಮಂದಿ, ವಿಕ್ಟೋರಿಯಾ ಆಸ್ಪತ್ರೆಯ 80 ಮಂದಿ, ಕಿದ್ವಾಯಿ ಆಸ್ಪತ್ರೆ ಆಸ್ಪತ್ರೆಯ 40, ನಿಮ್ಹಾನ್ಸ್‌ ಆಸ್ಪತ್ರೆ ಹಾಗೂ ಪ್ರಯೋಗಾಲಯದ 100, ಸಂಜಯ್‌ಗಾಂಧಿ ಆಸ್ಪತ್ರೆಯ 7, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ 15, ರಾಜಾಜಿನಗರರ ಇಎಸ್‌ಐ ಆಸ್ಪತ್ರೆ 15, ಸಿ.ವಿ. ರಾಮನ್‌ ಆಸ್ಪತ್ರೆಯ 5, ಕಮಾಂಡ್‌ ಹಾಗೂ ಎಚ್‌ಎಎಲ್‌ ಆಸ್ಪತ್ರೆಯ 10, ಇಂದಿರಾನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ 1, ಜಯದೇವ ಆಸ್ಪತ್ರೆಯ ಪ್ರಯೋಗಾಲಯದ 4 ಮಂದಿ ಸೇರಿದಂತೆ ಬೌರಿಂಗ್‌ ಆಸ್ಪತ್ರೆ, ಜಯನಗರ ಜನರಲ್‌ ಆಸ್ಪತ್ರೆ ಸೇರಿ ಒಟ್ಟು 410 ಮಂದಿ ವೈದ್ಯರು, ಶುಶ್ರೂಷಕರು, ಸಹಾಯಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಸೋಂಕಿತರಾಗಿದ್ದಾರೆ.

Follow Us:
Download App:
  • android
  • ios