Asianet Suvarna News Asianet Suvarna News

Covid 19: 15 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು 10 ಪಟ್ಟು ಹೆಚ್ಚಳ

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ನ ಅಬ್ಬರ ತುಸು ಇಳಿಕೆ ಕಾಣುತ್ತಿದ್ದರೂ ರಾಜ್ಯದ ಅನ್ಯ ಭಾಗದಲ್ಲಿ ಕೊರೋನಾ ಅತಿ ವೇಗವಾಗಿ ಹರಡುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸೋಕು ಇಪ್ಪತ್ತು ಮೂವತ್ತು ಪಟ್ಟು ವೇಗವಾಗಿ ಹಬ್ಬುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೋಂಕು ಶರವೇಗದಲ್ಲಿ ಹರಡುತ್ತಿದೆ. 

Covid 19 Infection Increases 10 fold in 15 Districts gvd
Author
Bangalore, First Published Jan 18, 2022, 3:55 AM IST

ರಾಕೇಶ್‌ ಎನ್‌.ಎಸ್‌.

ಬೆಂಗಳೂರು (ಜ.18): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕೋವಿಡ್‌ನ (Covid19) ಅಬ್ಬರ ತುಸು ಇಳಿಕೆ ಕಾಣುತ್ತಿದ್ದರೂ ರಾಜ್ಯದ ಅನ್ಯ ಭಾಗದಲ್ಲಿ ಕೊರೋನಾ (Coronavirus) ಅತಿ ವೇಗವಾಗಿ ಹರಡುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸೋಕು ಇಪ್ಪತ್ತು ಮೂವತ್ತು ಪಟ್ಟು ವೇಗವಾಗಿ ಹಬ್ಬುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸೋಂಕು ಶರವೇಗದಲ್ಲಿ ಹರಡುತ್ತಿದೆ. ಕಳೆದ ಒಂದು ವಾರದಲ್ಲಿ 15 ಜಿಲ್ಲೆಯಲ್ಲಿ ಹತ್ತು ಪಟ್ಟಿಗಿಂತ ಹೆಚ್ಚು ಸೋಂಕಿನ ಪ್ರಕರಣ ದಾಖಲಾಗಿವೆ.

ಮೂರನೇ ಅಲೆಯಲ್ಲಿ ಬೆಂಗಳೂರಿನಲ್ಲಿ ಸರ್ಕಾರ ಸಂಪೂರ್ಣ ಲಾಕ್‌ಡೌನ್‌ನಂತಹ (Lockdown) ಕಠಿಣ ಕ್ರಮ ಕೈಗೊಂಡಿಲ್ಲದಿದ್ದರೂ ಜನ ಭಯದಿಂದ ಈಗಾಗಲೇ ತಮ್ಮ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಂಕು ರಾಜ್ಯವ್ಯಾಪಿ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಕಳೆದ ಎರಡ್ಮೂರು ತಿಂಗಳಿನಿಂದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೂನ್ಯ ಅಥವಾ ಒಂದಂಕಿಯಲ್ಲಿ ಪ್ರಕರಣ ವರದಿಯಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಈ ಪ್ರವೃತ್ತಿ ಸಂಪೂರ್ಣ ಬದಲಾಗಿದೆ. ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕು ರಾಜ್ಯದ ಹಳ್ಳಿ, ಹಳ್ಳಿ, ಗಲ್ಲಿಗಲ್ಲಿಗೆ ವಿಸ್ತರಿಸುವ ಆತಂಕ ತಂದೊಡ್ಡಿದೆ.

Covid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ

ಜನವರಿ 8 ರಿಂದ ಜ. 15ರ ಮಧ್ಯೆ ರಾಜ್ಯದಲ್ಲಿ 1.45 ಲಕ್ಷ ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬೆಂಗಳೂರು ನಗರದಿಂದಲೇ ಒಂದು ಲಕ್ಷ ಪ್ರಕರಣ ಪತ್ತೆಯಾಗಿವೆ. ಆದರೆ ಬೆಂಗಳೂರು ನಗರದಲ್ಲಿ ಹಿಂದಿನ ವಾರಕ್ಕಿಂತ ಕೇವಲ ಮೂರ್ನಾಲ್ಕು ಪಟ್ಟು ಪ್ರಕರಣ ಏರಿಕೆ ಕಂಡು ಬಂದಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ 39 ಪಟ್ಟು, ಹಾವೇರಿ ಜಿಲ್ಲೆಯಲ್ಲಿ 31 ಪಟ್ಟು ಏರಿಕೆ ಕಂಡಿದೆ. ರಾಯಚೂರಿನಲ್ಲಿ ಶೂನ್ಯವಿದ್ದ ಪ್ರಕರಣ, ಕಳೆದ ವಾರ 14ಕ್ಕೆ ಏರಿದ್ದರೆ ಈ ವಾರ 555ಕ್ಕೆ ತಲುಪಿದೆ. ಹಾವೇರಿಯಲ್ಲಿಯೂ ಶೂನ್ಯವಿದ್ದ ಪ್ರಕರಣ, ಕಳೆದ ವಾರ 3ಕ್ಕೆ ತಲುಪಿದ್ದರೆ ಈ ವಾರ 95 ಪ್ರಕರಣ ಪತ್ತೆಯಾಗಿವೆ. 

ಉಳಿದಂತೆ ಕೊಪ್ಪಳದಲ್ಲಿ ಪ್ರಕರಣಗಳು 29 ಪಟ್ಟು, ಚಾಮರಾಜನಗರದಲ್ಲಿ 23 ಪಟ್ಟು ಏರಿಕೆ ಕಂಡಿವೆ. ತುಮಕೂರು (16 ಪಟ್ಟು), ಚಿತ್ರದುರ್ಗ (15 ಪಟ್ಟು), ಯಾದಗಿರಿ (14 ಪಟ್ಟು), ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಉತ್ತರ ಕನ್ನಡ (13 ಪಟ್ಟು), ಬಾಗಲಕೋಟೆ (11 ಪಟ್ಟು), ರಾಮನಗರ, ಧಾರವಾಡ, ಬೀದರ್‌, ಹಾಸನ ಜಿಲ್ಲೆಯಲ್ಲಿ ಹಿಂದಿನ ವಾರಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಕರಣ ವರದಿಯಾಗಿವೆ.

ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ದಾಖಲಾಗುತ್ತಿದೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.80ರಿಂದ ಶೇ.60ಕ್ಕೆ ಕುಸಿದಿದೆ. ಇದೇ ವೇಳೆ ರಾಜ್ಯದ ಇತರ ಭಾಗಗಳ ಪ್ರಕರಣ ಶೇ. 20 ರಿಂದ ಶೇ. 40ಕ್ಕೆ ಏರಿಕೆ ಕಂಡಿದೆ. ಕಡಿಮೆ ಏರಿಕೆ ಕಂಡುಬಂದಿರುವುದು ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ. ಈ ಜಿಲ್ಲೆಗಳಲ್ಲಿ ಹಿಂದಿನ ವಾರಕ್ಕಿಂತ ಮೂರು ಪಟ್ಟು ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ.

Covid Vaccination: 12​-14 ವರ್ಷದ ಮಕ್ಕಳಿಗೆ ಮಾರ್ಚ್‌ನಿಂದ ಲಸಿಕೆ ಸಾಧ್ಯತೆ!

ರಾಜ್ಯದಲ್ಲಿ ಡಿಸೆಂಬರ್‌ ಮೂರನೇ ವಾರದಲ್ಲಿ ಕೇವಲ 1,933 ಪ್ರಕರಣ ವರದಿಯಾಗಿದ್ದವು. ಡಿಸೆಂಬರ್‌ ಕೊನೆಯ ವಾರದಲ್ಲಿ 3,955 ಪ್ರಕರಣ ಪತ್ತೆಯಾಗಿದ್ದವು. ಆದರೆ ಜನವರಿ ಮೊದಲ ವಾರಲ್ಲಿ 30,644 ಪ್ರಕರಣ ದಾಖಲಾಗಿದ್ದವು. ಜನವರಿ ಎರಡನೇ ವಾರದಲ್ಲಿ 1.45 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಎಲ್ಲಿ ಎಷ್ಟುಪಟ್ಟು ಹೆಚ್ಚಳ?
ರಾಯಚೂರು 39
ಹಾವೇರಿ 31
ಕೊಪ್ಪಳ 29
ಚಾ.ನಗರ 23
ತುಮಕೂರು 16
ಚಿತ್ರದುರ್ಗ 15
ಯಾದಗಿರಿ 14

Follow Us:
Download App:
  • android
  • ios