ಬೆಂಗಳೂರು(ಏ.25): ‘ಬೆಂಗಳೂರಲ್ಲಿ ಮಿತಿ ಮೀರುತ್ತಿರುವ ಕೋವಿಡ್‌ ಸೋಂಕು ನಿಯಂತ್ರಣಕ್ಕೆ 14 ದಿನ ಲಾಕ್‌ಡೌನ್‌ ಮಾಡಿ. ಸೋಂಕಿತರಿಗೆ ಹಾಸಿಗೆ ಕೊರತೆ ನಿಭಾಯಿಸಲು ಸ್ವಯಂ ಪ್ರೇರಿತವಾಗಿ ತಮ್ಮಲ್ಲಿನ ಹಾಸಿಗೆಗಳನ್ನು ಪೂರ್ಣ ನೀಡಲು ಮುಂದೆ ಬರುವ ಆಸ್ಪತ್ರೆಗಳನ್ನು ಸರ್ಕಾರವೇ ನಿರ್ವಹಿಸಬೇಕು, ಅಗತ್ಯ ಬಿದ್ದರೆ ಎಲ್ಲಾ ಆಸ್ಪತ್ರೆಗಳ ಹಾಸಿಗೆಗಳನ್ನೂ ಸರ್ಕಾರದ ವಶಕ್ಕೆ ಪಡೆಯಬೇಕು.’

ಹೀಗಂತ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಪಬ್ಲಿಕ್‌ ಹೆಲ್ತ್‌ ಫೌಂಡೇಷನ್‌ ಆಫ್‌ ಇಂಡಿಯಾ (ಪಿಎಚ್‌ಎಫ್‌ಐ) ಪ್ರಾಧ್ಯಾಪಕ ಹಾಗೂ ಲೈಫ್‌ಕೋರ್ಸ್‌ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಗಿರಿಧರ್‌ ಬಾಬು ಸರ್ಕಾರಕ್ಕೆ ಸಲಹಾತ್ಮಕ ಶಿಫಾರಸು ಮಾಡಿದ್ದಾರೆ.

ಶನಿವಾರ ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ಇದೊಂದೇ ನಗರದಲ್ಲಿ 1.5 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇದೇ ರೀತಿ ಸೋಂಕು ತೀವ್ರವಾಗಿ ಉಲ್ಬಣಿಸುತ್ತಾ ಹೋದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ನಿಭಾಯಿಸುವುದು ಬಹಳ ಕಷ್ಟವಾಗಲಿದೆ. ಹಾಗಾಗಿ ಸೋಂಕಿನ ಸರಪಳಿ ಕತ್ತರಿಸಲು ನಗರದಲ್ಲಿ 14 ದಿನಗಳ ಲಾಕ್‌ಡೌನ್‌ ಅತ್ಯಂತ ಅವಶ್ಯಕ. ಹಾಗಾಗಿ ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಯಲ್ಲಿ ನನ್ನ ವೈಯಕ್ತಿಕ ಶಿಫಾರಸನ್ನು ಸರ್ಕಾರಕ್ಕೆ ನೀಡಿರುವುದು ನಿಜ’ ಎಂದು ತಿಳಿಸಿದರು.

ಅಲ್ಲದೆ, ‘ಸೋಂಕು ಪ್ರಮಾಣ ಹೆಚ್ಚಾದಂತೆ ಹಾಸಿಗೆ ಸಮಸ್ಯೆಯೂ ಹೆಚ್ಚಾಗುತ್ತಿದೆ. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಶೇ.50ರಷ್ಟುಹಾಸಿಗೆ ನೀಡಲು ಹೇಳಿದೆ. ಇವು ಸಾಲದೆ ಹೋದಾಗ ಇನ್ನಷ್ಟುಹಾಸಿಗೆ ಕೊಡಿ ಎಂದು ಕೇಳುತ್ತಾ ಹೋಗುವುದಕ್ಕಿಂತ ಅನ್ಯ ಕ್ರಮ ಜರುಗಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಯಾವ ಆಸ್ಪತ್ರೆಗಳು ಸಂಪೂರ್ಣ ತಮ್ಮಲ್ಲಿನ ಸಂಪೂರ್ಣ ಹಾಸಿಗೆಗಳನ್ನು ಸರ್ಕಾರಕ್ಕೇ ನೀಡಲು ಮುಂದೆ ಬರುತ್ತವೋ ಅವುಗಳನ್ನು ಸರ್ಕಾರವೇ ನಿರ್ವಹಿಸಬೇಕು. ಅಗತ್ಯ ಬಿದ್ದರೆ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ತನ್ನ ವಶಕ್ಕೆ ಪಡೆದು ತಾನೇ ನಿರ್ವಹಿಸುವುದು ಒಳಿತು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೇನೆ’ ಎಂದು ಅವರು ಹೇಳಿದರು.

‘ಈಗಾಗಲೇ ನಗರದಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಸರ್ಕಾರ ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಗಂಭೀರ ಸ್ಥಿತಿಯ ಸೋಂಕಿತರಿಗೆ ತಕ್ಷಣ ಹಾಸಿಗೆ, ಔಷಧ, ಚಿಕಿತ್ಸೆ ದೊರಕಿಸಿಕೊಡಲು ಸರ್ಕಾರ ಹೆಚ್ಚಿನ ಗಮನ ವಹಿಸಬೇಕು. ಇಲ್ಲದಿದ್ದರೆ ಸಾವಿನ ಪ್ರಮಾಣ ಇನ್ನಷ್ಟುಹೆಚ್ಚಾಗುವುದರಲ್ಲಿ ಸಂಶಯವಿಲ್ಲ’ ಎಂದು ಡಾ| ಬಾಬು ಎಚ್ಚರಿಸಿದರು.

ಶಿಫಾರಸುಗಳೇನು?

- ಬೆಂಗಳೂರಿನಲ್ಲಿ ನಿತ್ಯ 15000ಕ್ಕೂ ಹೆಚ್ಚು ಕೇಸ್‌ ಪತ್ತೆಯಾಗುತ್ತಿವೆ

- ಇದು ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸುತ್ತೆ, ನಿರ್ವಹಣೆ ಕಷ್ಟ

- ಸೋಂಕಿನ ಸರಪಳಿ ಕತ್ತರಿಸಲು 14 ದಿನ ಲಾಕ್‌ಡೌನ್‌ ಮಾಡಬೇಕು

- ಖಾಸಗಿ ಆಸ್ಪತ್ರೆಗಳಲ್ಲಿ 50% ಹಾಸಿಗೆ ಕೇಳಿದರೆ ಮುಂದೆ ಸಾಕಾಗಲ್ಲ

- ಪೂರ್ಣ ಹಾಸಿಗೆ ನೀಡುವ ಆಸ್ಪತ್ರೆಗಳನ್ನು ಸರ್ಕಾರವೇ ನಿರ್ವಹಿಸಬೇಕು

- ಅಗತ್ಯ ಬಿದ್ದರೆ ಎಲ್ಲ ಖಾಸಗಿ ಆಸ್ಪತ್ರೆ ವಶಕ್ಕೆ ಪಡೆಯಿರಿ: ಡಾ| ಗಿರಿಧರ ಬಾಬು