ಬೆಂಗಳೂರು [ಜ.25]: ಮತದಾರರ ನಕಲಿ ಗುರುತಿನ ಚೀಟಿ ತಯಾರಿಕೆಯಲ್ಲಿ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಕೈವಾಡ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪದ ಮಾಡಿದ ಪ್ರಕರಣದ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಿಗೆ ಬರುವ ಫೆ.24 ರಂದು ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿಗೆ ಮಾಡಿದೆ. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಫೆ.24ರಂದು ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚನೆ ನೀಡಿದೆ. 

2019ರ ಲೋಕಸಭಾ ಚುನಾವಣೆ ವೇಳೆ ಕರ್ನಾಟಕ ಬಿಜೆಪಿ ಟ್ವಿಟರ್‌ ಅಕೌಂಟ್‌ನಲ್ಲಿ ಮತದಾರರ ನಕಲಿ ಗುರುತಿನ ಚೀಟಿ ತಯಾರಿಕೆಯಲ್ಲಿ ರಿಜ್ವಾನ್‌ ಅರ್ಷದ್‌ ಕೈವಾಡ ಇದೆ ಎಂದು ಆರೋಪಿಸಲಾಗಿತ್ತು.

ಶಿವಾಜಿನಗರ ಶಾಸಕ ರಿಜ್ವಾನ್‌ ಸೇರಿ 43 ಮಂದಿ ವಿರುದ್ಧ ಕೇಸ್‌.

ಇದನ್ನು ಬಿಜೆಪಿಯ ಹಲವು ನಾಯಕರು ರಿ-ಟ್ವೀಟ್‌ ಮಾಡಿದ್ದರು. ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುವ ವೇಳೆ ಯುವ ಕಾಂಗ್ರೆಸ್‌ ನಾಯಕ ಕಲೀಲುಲ್ಲಾ ಇಬ್ರಾಹಿಂ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ. ಇದರ ಹಿಂದೆ ಬೆಂಗಳೂರು ಕೇಂದ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಇದ್ದಾರೆ ಎಂದು ಟ್ವಿಟರ್‌ನಲ್ಲಿ ಗಂಭೀರವಾಗಿ ಆರೋಪಿಸಲಾಗಿತ್ತು.

ಡಿಸಿಎಂಗೆ ಡೆಡ್‍ಲೈನ್: ಲಕ್ಷ್ಮಣ ಸವದಿಗೆ ಶುರುವಾಯ್ತು ಅವಧಿ ಸಂಕಟ..

ಬಿಜೆಪಿ ಆರೋಪಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಿಜ್ವಾನ್‌ ಅರ್ಷದ್‌, ನ್ಯಾಯಾಲಯದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಮತ್ತು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಪ್ರಾರಂಭಿಸಿರುವ ನ್ಯಾಯಾಲಯವು ಫೆ.24ರಂದು ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.