ಆಗಸ್ಟ್‌ ಮೊದಲ ವಾರ ನಿಗಮ-ಮಂಡಳಿಗಳ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗೆ ರಾಜ್ಯ ಸರ್ಕಾರ ನೇಮಕ ಮಾಡುವ ಸಾಧ್ಯತೆಯಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು 70:30 ಅನುಪಾತದಲ್ಲಿ ನೀಡುವ ಚಿಂತನೆಯನ್ನು ಕಾಂಗ್ರೆಸ್‌ ನಾಯಕತ್ವ ಹೊಂದಿದೆ.

ಬೆಂಗಳೂರು (ಜು.15) : ಆಗಸ್ಟ್‌ ಮೊದಲ ವಾರ ನಿಗಮ-ಮಂಡಳಿಗಳ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗೆ ರಾಜ್ಯ ಸರ್ಕಾರ ನೇಮಕ ಮಾಡುವ ಸಾಧ್ಯತೆಯಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು 70:30 ಅನುಪಾತದಲ್ಲಿ ನೀಡುವ ಚಿಂತನೆಯನ್ನು ಕಾಂಗ್ರೆಸ್‌ ನಾಯಕತ್ವ ಹೊಂದಿದೆ.

ಬಜೆಟ್‌ ಅಧಿವೇಶನ ಮುಗಿದ ಕೂಡಲೇ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆ ವೇಗ ಪಡೆಯಲಿದ್ದು, ಆಗಸ್ಟ್‌ ಮೊದಲ ವಾರದೊಳಗೆ ನೇಮಕಾತಿ ಆದೇಶ ಹೊರಬೀಳಲಿದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಅಡಿ 80ರಿಂದ 90 ನಿಗಮ-ಮಂಡಳಿಗಳು ಬರಲಿವೆ. ಈ ಪೈಕಿ ಶೇ.30ರಷ್ಟುನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಶಾಸಕರಿಗೆ ಹಾಗೂ ಶೇ.70ರಷ್ಟುನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಚಿಂತನೆಯಿದೆ.

ಸ್ಪೀಕರ್‌ ಕುರ್ಚಿ ವಾಸ್ತು ಬಗ್ಗೆ ಎಚ್‌.ಡಿ.ರೇವಣ್ಣರನ್ನು ಕೇಳಿ: ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

ಈ ಬಾರಿಯ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಎರಡೂವರೆ ವರ್ಷಗಳ ಅವಧಿಗೆ ಮಾತ್ರ ನೇಮಕ ಮಾಡಲಿದ್ದು, ಮುಂದಿನ ಎರಡೂವರೆ ವರ್ಷ ಬೇರೆಯವರಿಗೆ ಅವಕಾಶ ನೀಡುವ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ನಿಗಮ-ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಆಯ್ಕೆ ನಡೆಯುವ ಸುಳಿವು ದೊರೆತ ಬೆನ್ನಲ್ಲೇ ರಾಜ್ಯಾದ್ಯಂತ ಆಕಾಂಕ್ಷಿಗಳಿಂದ ಲಾಬಿ ತೀವ್ರಗೊಂಡಿದೆ. ಪ್ರಮುಖ ಹುದ್ದೆಗಳಿಗೆ ತಮ್ಮ ಹೆಸರನ್ನು ಶಿಫಾರಸು ಮಾಡುವಂತೆ ಪ್ರಭಾವಿ ನಾಯಕರ ಬಳಿ ಲಾಬಿ ಆರಂಭಿಸಿದ್ದಾರೆ. ಇನ್ನು ಪ್ರಮುಖ ನಿಗಮ-ಮಂಡಳಿಗಳ ಚುಕ್ಕಾಣಿ ಹಿಡಿಯಲು ಸ್ವತಃ ಶಾಸಕರೇ ತೀವ್ರ ಪ್ರಯತ್ನ ನಡೆಸಿದ್ದಾರೆ.

ಈಗಾಗಲೇ ಪ್ರಮುಖ 20-22 ನಿಗಮ-ಮಂಡಳಿ ಹುದ್ದೆಗಳಿಗೆ ಶಾಸಕರು ಪೈಪೋಟಿ ನಡೆಸಿದ್ದು, ಆಯ್ಕೆ ಪ್ರಕ್ರಿಯೆಯೂ ಶುರುವಾಗಿದೆ. ಕಾರ್ಯಕರ್ತರಿಗೆ ಹುದ್ದೆ ನೀಡುವ ಪ್ರಕ್ರಿಯೆಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಒಟ್ಟಾರೆ ಆಗಸ್ಟ್‌ ಮೊದಲ ವಾರದಲ್ಲಿ ಪ್ರಕ್ರಿಯೆ ಅಂತಿಮಗೊಳ್ಳಲಿದ್ದು, ಸಚಿವ ಸ್ಥಾನದಿಂದ ವಂಚಿತರಾದ ಶಾಸಕರು ಹಾಗೂ ಅಸಮಾಧಾನಿತ ಶಾಸಕರಿಗೆ ಮೊದಲ ಆದ್ಯತೆ ನೀಡುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಜೆಟ್ ವೇಳೆ ಅಪರಿಚಿತ ವ್ಯಕ್ತಿ ಪ್ರವೇಶ: ವಿಧಾನಸೌಧ, ಶಾಸಕರ ಭವನಕ್ಕೆ ಹೈಟೆಕ್‌ ಭದ್ರತೆ