ಸ್ಪೀಕರ್ ಕುರ್ಚಿ ವಾಸ್ತು ಬಗ್ಗೆ ಎಚ್.ಡಿ.ರೇವಣ್ಣರನ್ನು ಕೇಳಿ: ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ
ವಿಧಾನಸೌಧ ಪ್ರವೇಶದ್ವಾರ ಹಾಗೂ ಸ್ಪೀಕರ್ ಕುರ್ಚಿಯ ವಾಸ್ತು ಬಗ್ಗೆ ಮಂಗಳವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ಎದ್ದು ನಿಂತ ಸಚಿವ ಕೆ.ಜೆ. ಜಾರ್ಜ್, ‘ವಿಧಾನಸೌಧಕ್ಕೆ ಬರಲು ಒಂದು ಗೇಟ್ ಮಾತ್ರ ತೆರೆಯಲಾಗಿದೆ.
ವಿಧಾನಸಭೆ (ಜು.12): ವಿಧಾನಸೌಧ ಪ್ರವೇಶದ್ವಾರ ಹಾಗೂ ಸ್ಪೀಕರ್ ಕುರ್ಚಿಯ ವಾಸ್ತು ಬಗ್ಗೆ ಮಂಗಳವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಕಲಾಪ ಆರಂಭವಾಗುತ್ತಿದ್ದಂತೆ ಎದ್ದು ನಿಂತ ಸಚಿವ ಕೆ.ಜೆ. ಜಾರ್ಜ್, ‘ವಿಧಾನಸೌಧಕ್ಕೆ ಬರಲು ಒಂದು ಗೇಟ್ ಮಾತ್ರ ತೆರೆಯಲಾಗಿದೆ. ಮೆಟ್ರೋ ಕಾಮಗಾರಿ ಕಾರಣಕ್ಕಾಗಿ ಹಿಂದೆ ಪೂರ್ವದ್ವಾರದಿಂದ ಶಾಸಕರ ವಾಹನಗಳ ಪ್ರವೇಶ ನಿರ್ಬಂಧ ಮಾಡಲಾಗಿತ್ತು. ಅಲ್ಲಿ ಭದ್ರತೆ ಸೇರಿದಂತೆ ಎಲ್ಲಾ ಮೂಲಸೌಕರ್ಯ ಇದೆ. ಕೇವಲ ಪಶ್ಚಿಮ ದ್ವಾರದಿಂದ ಎಲ್ಲಾ ಶಾಸಕರು ಬರಬೇಕಿರುವುದರಿಂದ ಸಂಚಾರ ದಟ್ಟಣೆಯಾಗುತ್ತಿದೆ’ ಎಂದು ಹೇಳಿದರು.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್, ಈ ಬಗ್ಗೆ ಮಾತನಾಡಿ ಪೂರ್ವ ದ್ವಾರದಿಂದಲೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ತಿಳಿಸುತ್ತೇನೆ. ಅಲ್ಲಿಯವರೆಗೆ ಅರ್ಧ ಗಂಟೆ ಮೊದಲೇ ಹೊರಟರೆ ಸರಿಯಾದ ಸಮಯಕ್ಕೆ ತಲುಪಬಹುದು ಎಂದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ವಾಸ್ತು ಪ್ರಕಾರ ಮುಚ್ಚಿರಬಹುದು’ ಎಂದು ಹಾಸ್ಯ ಮಾಡಿದರು. ಯು.ಟಿ. ಖಾದರ್ ‘ನನ್ನ ಕುರ್ಚಿ ವಾಸ್ತು ಸರಿ ಇದೆಯಲ್ಲಾ’ ಎಂದು ಕೇಳಿದಾಗ, ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ‘ಗೊಂದಲ ಇದ್ದರೆ ಎಚ್.ಡಿ. ರೇವಣ್ಣ ಬಳಿ ಕೇಳಿ’ ಎಂದಾಗ ಸದಸ್ಯರು ನಗೆಗಡಲಲ್ಲಿ ತೇಲಿದರು.
ವಿಜಯನಗರ: ಹಂಪಿಯಲ್ಲಿ ಯೋಗ ಮಾಡಿ ಸಂಭ್ರಮಿಸಿದ ಜಿ-20 ಪ್ರತಿನಿಧಿಗಳು!
ಮಾಜಿ ಸಚಿವರ ಕ್ರಿಯಾಲೋಪಕ್ಕೆ ಖಾದರ್ ಕಿಡಿ: ಶೂನ್ಯ ವೇಳೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬೈರತಿ ಸುರೇಶ್ ನಡುವೆ ನಡೆಯುತ್ತಿದ್ದ ಗಲಾಟೆ ವೇಳೆ ಪದೇ ಪದೇ ಕ್ರಿಯಾಲೋಪದ ಹೆಸರಿನಲ್ಲಿ ಎದ್ದು ನಿಲ್ಲುತ್ತಿದ್ದ ಮಾಜಿ ಸಚಿವರು, ಕಾಂಗ್ರೆಸ್ ಸದಸ್ಯರಾದ ಬಸವರಾಜ ರಾಯರಡ್ಡಿ, ಟಿ.ಬಿ. ಜಯಚಂದ್ರ ಅವರ ಬಗ್ಗೆ ಸ್ಪೀಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ಕ್ರಿಯಾಲೋಪ ಎತ್ತಿ, ಕ್ರಿಯಾಲೋಪದ ಮೇಲೆಯೇ ಚರ್ಚೆಗೆ ಮುಂದಾಗುತ್ತಿದ್ದರಿಂದ ಸದಸ್ಯರ ನಡೆಗೆ ಬೇಸರ ವ್ಯಕ್ತಪಡಿಸಿದರು. ‘ಹಿರಿಯ ಸದಸ್ಯರಾದ ನೀವು ಸಮಸ್ಯೆ ಬಗೆಹರಿಸಬೇಕೆ ಹೊರತು ದೊಡ್ಡದು ಮಾಡಬಾರದು. ಮಾತೆತ್ತಿದರೆ ನಿಯಮ ಎನ್ನುತ್ತೀರಿ? ನೀವೇ ನಿಯಮ ಪಾಲಿಸಲ್ಲ. ಈ ರೀತಿ ಮಾಡುತ್ತಾ ಹೋದರೆ ಸದನ ಹೇಗೆ ನಡೆಸಲಿ?’ ಎಂದು ಕಿಡಿಕಾರಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್ ಕಳವಳ
ಎಪಿಎಂಸಿ ಕಾಯ್ದೆ ಶೀಘ್ರ ತಿದ್ದುಪಡಿ: ರೈತರು ಹಾಗೂ ವರ್ತಕರ ಹಿತ ಕಾಪಾಡಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದೆ. ತಿದ್ದುಪಡಿ ಅನ್ವಯ ಅಧಿಸೂಚಿತ ಕೃಷಿ ಉತ್ಪನ್ನಗಳ ಸಗಟು ವ್ಯಾಪಾರ ವಹಿವಾಟನ್ನು ಮಾರುಕಟ್ಟೆಪ್ರಾಂಗಣ, ಖಾಸಗಿ ಮಾರುಕಟ್ಟೆಪ್ರಾಂಗಣ ಅಥವಾ ರೈತ ಗ್ರಾಹಕ ಮಾರುಕಟ್ಟೆಪ್ರಾಂಗಣದಲ್ಲಿಯೇ ಕಡ್ಡಾಯವಾಗಿ ಮಾಡಬೇಕು. ಬೇರೆ ಸ್ಥಳಗಳಲ್ಲಿ ಮಾರಾಟ ಹಾಗೂ ಖರೀದಿ ಮಾಡಬಾರದೆಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೃಷಿ ಮಾರುಕಟ್ಟೆಸಚಿವ ಶಿವಾನಂದ ಎಸ್. ಪಾಟೀಲ್ ಹೇಳಿದರು. ಜೆಡಿಎಸ್ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಯ್ದೆಗೆ ತಿದ್ದುಪಡಿ ಮಾಡಲು ಈಗಾಗಲೇ ಸಚಿವ ಸಂಪುಟ ಅನುಮೋದನೆ ನೀಡಿದೆ. ಸದನದಲ್ಲಿ ಚರ್ಚಿಸಿ ಅನುಮೋದನೆ ಪಡೆದ ನಂತರ ಜಾರಿಗೊಳಿಸಲಾಗುವುದು ಎಂದರು. ಈ ಹಿಂದಿನ ಕಾಯ್ದೆಯಿಂದ ರೈತರು ಎಲ್ಲಿ, ಯಾರಿಗೆ ಬೇಕಾದರೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿತ್ತು. ಆದರೆ ಇದರಿಂದ ಬೇರೆಯವರಿಗೆ ಮಾರಾಟ ಮಾಡಿದ ಬಳಿಕ ಹಣ ಸಿಗದೆ ಕಂಗಾಲಾಗಿದ್ದರು ಎಂದರು.