ಬೆಂಗಳೂರು(ಏ.24): ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಡ್‌, ಆಕ್ಸಿಜನ್‌, ಔಷಧ, ಮೂಲಭೂತ ಸೌಲಭ್ಯ ಇಲ್ಲದೇ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುತ್ತಿರುವ ಕರುಣಾಜನಕ ಸನ್ನಿವೇಶ ನೋಡಿದ್ದೇವೆ. ಇದೀಗ ಅದೇ ರೀತಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿಯೂ ಬೆಡ್‌, ಚಿಕಿತ್ಸೆ ಸಿಗದೆ, ಮೂಲಭೂತ ಸೌಲಭ್ಯವೂ ಇಲ್ಲದೆ ರೋಗಿಗಳು ಪರದಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಒಟ್ಟಾರೆ ಕೊರೋನಾ ಅಬ್ಬರದಿಂದ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಶೌಚಾಲಯಗಳು ಗಬ್ಬು ನಾರುತ್ತಿವೆ, ವಾರ್ಡ್‌ನಲ್ಲಿ ಸ್ವಚ್ಛತೆ ಇಲ್ಲ, ಯಾವ ರೋಗಿಗೂ ಸರಿ​ಯಾದ ಆರೋಗ್ಯ ಸೇವೆ, ಗುಣಮಟ್ಟದ ಆಹಾರ ಸಿಗು​ತ್ತಿಲ್ಲ. ವೈದ್ಯರು ಬಂದು ತಪಾ​ಸಣೆ ಮಾಡು​ತ್ತಿಲ್ಲ, ಬೆಡ್‌ ಇಲ್ಲ, ಆಕ್ಸಿಜನ್‌ ಇಲ್ಲ, ವೆಂಟಿಲೇಟರ್‌ ಇಲ್ಲ ಎಂದು ರಾಮನಗರ, ಗದಗ, ರಾಯಚೂರು, ತುಮಕೂರು ಸೇರಿದಂತೆ ವಿವಿಧೆಡೆ ಸೋಂಕಿತರು ಮತ್ತು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಈ ಹಿಂದೆ ಕೂಡ ಕಲಬುರಗಿ, ವಿಜಯಪುರದಲ್ಲಿ ಬೆಡ್‌ ಸಿಗದೆ ರೋಗಿಗಳು ಸಾವನ್ನಪ್ಪಿರುವ ನಿರ್ದಶನ ಇದೆ. ಹೀಗಾಗಿ ಸರ್ಕಾರ ಸಮರೋಪಾದಿಯಲ್ಲಿ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಾಗಿದೆ ಎಂದು ರೋಗಿಗಳ ಸಂಬಂಧಿಕರು ಒತ್ತಾಯಿಸಿದ್ದಾರೆ.

ರಾಮನಗರದಲ್ಲಿ ಸೋಂಕಿತರಿಂದ ಪ್ರತಿಭಟನೆ:

ರಾಮ​ನ​ಗ​ರ​ದ​ ಕಂದಾಯ ಭವ​ನದ ಕೋವಿಡ್‌ ರೆಫ​ರಲ್‌ ಆಸ್ಪ​ತ್ರೆ​ಯಲ್ಲಿ ಮೂಲ ಸೌಕರ್ಯ ಕಲ್ಪಿ​ಸು​ವಂತೆ ಒತ್ತಾ​ಯಿಸಿ ಕೊರೋನಾ ಸೋಂಕಿ​ತರು ಗುರು​ವಾರ ರಾತ್ರಿ ಆಸ್ಪ​ತ್ರೆ​ಯಿಂದ ಹೊರ ಬಂದು ಪ್ರತಿ​ಭ​ಟನೆ ನಡೆ​ಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್‌ ಅಧಿ​ಕಾ​ರಿ​ಗಳು ನೀರು ಹಾಗೂ ಶೌಚಾ​ಲಯ ಸ್ವಚ್ಛ​ತೆಗೆ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಅಧಿ​ಕಾ​ರಿ​ಗ​ಳು ಆಸ್ಪ​ತ್ರೆ​ಯ​ಲ್ಲಿ​ನ ಸಮ​ಸ್ಯೆ​ಗ​ಳನ್ನು ಕೂಡಲೇ ಬಗೆ​ಹ​ರಿ​ಸ​ಲಾ​ಗು​ವುದು ಎಂದು ಭರ​ವಸೆ ನೀಡಿದ ನಂತರ ರೋಗಿ​ಗಳು ಪ್ರತಿಭಟನೆ ಕೈಬಿಟ್ಟು ಆಸ್ಪ​ತ್ರೆ​ಯೊ​ಳಗೆ ತೆರ​ಳಿದ್ದಾರೆ.

ರೋಗಿಗಳು ಹೊರಗೆ ಓಡಾಡ್ತಾರೆ:

ರಾಯಚೂರು ನಗರದ ಒಪೆಕ್‌ ಕೋವಿಡ್‌ ಆಸ್ಪತ್ರೆಯ ಆವರಣದಲ್ಲಿ ಹಾಗೂ ಹೊರಗೆ ಕೊರೋನಾ ಸೋಂಕಿತರು ಜನಸಾಮಾನ್ಯರಂತೆ ಓಡಾಡುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕೊರೋನಾ ಸೋಂಕಿತರು ಕುಡಿವ ನೀರು, ಬಹಿರ್ದೆಸೆಗೆ ಹೊರಗಡೆ ಬರುತ್ತಿದ್ದಾರೆ. ಇದರ ಜೊತೆಗೆ ಆಸ್ಪತ್ರೆ ಆವರಣದಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿ, ಸುತ್ತಲಿನ ಜನರಲ್ಲಿ ಆತಂಕ ಉಂಟಾಗಿದೆ ಎಂದು ದೂರಿದ್ದಾರೆ.

ಆಕ್ಸಿಜನ್‌, ವೆಂಟಿಲೇಟರ್‌, ಬೆಡ್‌ ಇಲ್ಲ:

ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ಸಿಗುತ್ತಿಲ್ಲ, ಆಕ್ಸಿಜನ್‌ ಇಲ್ಲ, ವೆಂಟಿಲೇಟರ್‌ ಇಲ್ಲ ಎಂದು ಸೋಂಕಿತರ ಸಂಬಂಧಿಕರು ಆರೋಪಿಸಿದ್ದಾರೆ. ಬೆಂಗಳೂರು, ರಾಮನಗರ, ಮದ್ದೂರು, ಚನ್ನರಾಯಪಟ್ಟಣ, ಚಿತ್ರದುರ್ಗ, ಗೌರಿಬಿದನೂರು ತಾಲೂಕುಗಳಿಂದ ಸೋಂಕಿತರು ಬರುತ್ತಿರುವುದರಿಂದ ಸೂಕ್ತ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗದಗದಲ್ಲಿ ಸರಿಯಾದ ಸಮಯಕ್ಕೆ ಬೆಡ್‌ ಸಿಗದ ಪರಿಣಾಮ ಕೊರೋನಾ ಸೋಂಕಿತ ವೃದ್ಧೆಯೋರ್ವಳು ತೀವ್ರ ಪರದಾಡಿದ ಘಟನೆ ಕೂಡ ಜಿಮ್ಸ್‌ನಲ್ಲಿ ನಡೆದಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆ ಎರಡು ಗಂಟೆಗಳ ಕಾಲ ಅಲೆದಾಡಿದ್ದಾಳೆ. ಆನಂತರ ಬೆಡ್‌ ವ್ಯವಸ್ಥೆ ಮಾಡಲಾಗಿದೆ.