ಮೈಸೂರು[ಫೆ.04]: ರಾಜ್ಯದಲ್ಲಿ ಕೊರೋನಾ ವೈರಸ್‌ ಕಂಡುಬಂದಲ್ಲಿ ಅದು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ತಮ್ಮ ಪುತ್ರಿಯ ವಿವಾಹ ಮಹೋತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರನ್ನು ಆಹ್ವಾನಿಸಲು ಅರಮನೆಗೆ ಆಗಮಿಸಿದ್ದ ಅವರು ಸುದ್ದಿಗಾರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಈವರೆಗೂ ಕೊರೋನಾ ವೈರಸ್‌ ಪತ್ತೆಯಾಗಿಲ್ಲ. ವೈರಸ್‌ ಕಂಡುಬಂದರೆ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಚೀನಾದಿಂದ ಬರುವವರಿಗೆ ಔಷಧಿ ಸಿಂಪಡಿಸಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದ್ದು, ಹತ್ತು ಹಾಸಿಗೆಯುಳ್ಳ ವಾರ್ಡ್‌ಗಳನ್ನು ಕೊರೋನಾ ಪೀಡಿತರಿಗೆ ಮೀಸಲಿಡಲಾಗಿದೆ ಎಂದರು.

ವಿದೇಶದಿಂದ ರಾಜ್ಯಕ್ಕೆ ಬಂದಿದ್ದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗುತ್ತಿದ್ದು ಈ ಪೈಕಿ 29 ಮಂದಿಯ ರಕ್ತದಲ್ಲಿ ಕೊರೋನ ವೈರಸ್‌ ನೆಗೆಟಿವ್‌ ಎಂಬ ವರದಿ ಬಂದಿದೆ. ಉಳಿದವರ ರಕ್ತ ಪರೀಕ್ಷೆ ವರದಿ ಬರಬೇಕಷ್ಟೇ ಎಂದರು. ಒಂದು ವೇಳೆ ಕೊರೋನಾ ಕಂಡು ಬಂದಲ್ಲಿ ಔಷಧ ಹೊರ ದೇಶದಿಂದ ತರಿಸಲು ಸಿದ್ಧರಿದ್ದೇವೆ. ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲೂ ಸರ್ಕಾರ ಸಿದ್ಧವಿದೆ. ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದೆ ಎಂದು ತಿಳಿಸಿದರು.