ಉಳ್ಳಾಲ(ಏ.04): ದೆಹಲಿಯ ನಿಜಾಮುದ್ದೀನ್‌ ಜಮಾತ್‌ನಲ್ಲಿ ಭಾಗವಹಿಸಿದ್ದ ಕೊರೋನಾ ಸೋಂಕಿತರಲ್ಲಿ ಕೆಲವರು ವೈದ್ಯರು, ಪೊಲೀಸರ ಜತೆಗೆ ತೋರಿದ ಅನುಚಿತ ವರ್ತನೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದೇ ಜಮಾತ್‌ನಲ್ಲಿ ಭಾಗವಹಿಸಿ ಸೋಂಕಿಗೆ ತುತ್ತಾಗಿದ್ದ ಮಂಗಳೂರು ಹೊರವಲಯದ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ತಮ್ಮ ಜೀವ ಉಳಿಸಿದ ವೈದ್ಯರು, ದಾದಿಯರು ಹಾಗೂ ಪೊಲೀಸ್‌ ಸಿಬ್ಬಂದಿಗೆ ಭಾವನಾತ್ಮಕ ಧನ್ಯವಾದ ಹೇಳಿದ್ದಾರೆ. ತಮ್ಮನ್ನು ಆಪ್ಯಾಯಮಾನದಿಂದ ನೋಡಿಕೊಂಡವರನ್ನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಂಡ ಆ ವ್ಯಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೊರೋನಾ ವಾರಿಯರ್ಸ್‌ ಬಗೆಗಿನ ಅವರ ಗದ್ಗದಿತ ಮಾತುಗಳು ಪ್ರಶಂಸೆಗೆ ಪಾತ್ರವಾಗಿದೆ.

ಮಾ.22ರಂದು ದೆಹಲಿಯ ನಿಜಾಮುದ್ದೀನ್‌ನಿಂದ ಮಂಗಳೂರಿಗೆ ಆಗಮಿಸಿದ್ದ ತೊಕ್ಕೊಟ್ಟಿನ ಈ ವ್ಯಕ್ತಿಯನ್ನು ಏ.1ರಂದು ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾಕ್ಕೆ ಒಳಪಡಿಸಲಾಗಿತ್ತು. ಏ.4ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ ಅದೇ ದಿನ ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ಚಿಕಿತ್ಸೆ ನೀಡಲು ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿ ಸೋಂಕಿನ ಲಕ್ಷಣ ಕಡಿಮೆಯಾದ ಬಳಿಕ ಏ.15 ಮತ್ತು 16ರಂದು ಗಂಟಲು ದ್ರವ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಬಂದಿತ್ತು. ಬಳಿಕ ಏ. 17ರಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಮಾಡಲಾಗಿತ್ತು.

ರಾಜ್ಯದಲ್ಲಿ 400ರ ಗಡಿ ದಾಟಿದ ಕೊರೋನಾ ಕೇಸ್‌!

ಚಪ್ಪಾಳೆಯ ಸ್ವಾಗತ:

ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಅವರು ಏ.17ರಂದು ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಮನೆಗೆ ಹಿಂತಿರುಗಿದ್ದರು. ಈ ಸಂದರ್ಭ ದಾರಿಯುದ್ದಕ್ಕೂ ಅವರನ್ನು ಸ್ಥಳೀಯರು ಚಪ್ಪಾಳೆ ತಟ್ಟುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಆ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್‌ ಆಗಿದೆ. ಆ ಸಂದರ್ಭದಲ್ಲಿ ಅವರು ತಮಗೆ ಚಿಕಿತ್ಸೆ ನೀಡಿದ ಅವಧಿಯಲ್ಲಿ ವೈದ್ಯರು, ದಾದಿಯರು, ಪೊಲೀಸರು ನೋಡಿಕೊಂಡ ರೀತಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಹೇಳಿದ್ದೇನು?:

‘ಕೊರೋನಾ ವೈರಾಣು ಸೋಂಕು ಬರುವುದು ಚೀನಾ, ಇಂಡಿಯಾದಿಂದಲ್ಲ. ಅದು ಅಲ್ಲಾಹನ ಮುಖಾಂತರ ತಟ್ಟುತ್ತದೆ. ನನಗೆ ಸೋಂಕು ದೃಢಪಡುತ್ತಿದ್ದಂತೆ ಪೊಲೀಸ್‌ ಇಲಾಖೆಯವರು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಮಂಗಳೂರಿನ ವೆನ್‌ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲೂ ಒಳ್ಳೆಯ ಚಿಕಿತ್ಸೆ ನೀಡಿದ್ದಾರೆ. ಆಗಾಗ ಬಂದು ನೀರು ಬೇಕಾ, ಬಿಸಿ ನೀರು ಬೇಕಾ ಅಂತ ಕೇಳಿದ್ದಾರೆ. ಒಂದು ದಿನ ರಾತ್ರಿ ಶೌಚಾಲಯದ ನೀರು ಬಂದ್‌ ಆಗಿತ್ತು, ಆಗ ನಾನು ಫೋನ್‌ ಮಾಡಿದ ತಕ್ಷಣ ನೀರು ಬಂದಿದೆ. ಅಲ್ಲಿ ಅವರು ನಮಗೆ ಬೇಕಾದ ನೆರವು ನೀಡುತ್ತಾರೆ. ನಾವು ಕೊರೋನಾದಿಂದ ಸಾಯಬಾರದೆಂದು ಆ ದಾದಿಯರು, ವೈದ್ಯರು ತುಂಬಾ ಕಷ್ಟಪಟ್ಟಿದ್ದಾರೆ ಮತ್ತು ಈಗಲೂ ಪಡುತ್ತಿದ್ದಾರೆ’ ಎಂದು ಹೇಳಿ ವೈರಲ್‌ ಆದ ವಿಡಿಯೋದಲ್ಲಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.

ಕೊರೋನಾ ಬಿಸಿ: ರಾಷ್ಟಟ್ರಪತಿ ಭವನದ 500 ಮಂದಿಗೆ ಕ್ವಾರಂಟೈನ್!

ಪೊಲೀಸ್‌ ಅಧಿಕಾರಿಗಳು ಶೇರ್‌ ಮಾಡಿದರು:

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಮಂಗಳೂರು ನಗರ ಪೊಲೀಸ್‌ ಅಯುಕ್ತ ಡಾ.ಪಿ.ಎಸ್‌.ಹರ್ಷ ಅವರೇ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಳಿಕ ಕಮಿಷನರ್‌ ಪೋಸ್ಟ್‌ ಅನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ‘ಡಿಜಿಪಿ ಕರ್ನಾಟಕ’ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಲಾಗಿದೆ. ಇದರಲ್ಲಿ ಪೊಲೀಸ್‌, ಬಿಬಿಎಂಪಿ, ಆರೋಗ್ಯ ಅಧಿಕಾರಿಗಳು ತಮ್ಮ ಸ್ವಾಸ್ಥ್ಯಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ತಡೆಯುವ ಯಾರಾದರೂ ಮೊದಲು ಈ ವಿಡಿಯೋ ನೋಡಿ ಎಂದು ಉಲ್ಲೇಖಿಸಲಾಗಿದೆ.