ಕೊರೊನಾ ಆತಂಕ, ಹೊಸ ವರ್ಷ ಸಂಭ್ರಮಾಚರಣೆ ಕೌಂಟ್ ಡೌನ್ ನಡುವೆ ಜನರಲ್ಲಿ ಲಾಕ್‌ಡೌನ್ ಭೀತಿ
ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್ ಪ್ರಾರಂಭಗೊಂಡಿದೆ. ಈ ನಡುವೆ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರೂ ಜನರೇ ಜನರು. ಈ ಪ್ರವಾಸಿಗಳನ್ನೇ ನಂಬಿಕೊಂಡು ಸಾಕಷ್ಟು ಅಂಗಡಿಗಳು, ಹೋಟೆಲ್‌ಗಳು ಆದಾಯ ಗಳಿಸುತ್ತಿವೆ. ಆದರೆ, ಈಗ ಲಾಕ್ ಡೌನ್ ಭೀತಿ ಎದುರಾಗಿದೆ.
ವರದಿ: ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್
ಕಾರವಾರ (ಡಿ.26): ಹೊಸ ವರ್ಷಾಚರಣೆಗೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಬಾಕಿಯಿವೆ. ಈ ನಡುವೆ ಸರಕಾರ ಜನರಲ್ಲಿ ಕೊರೊನಾ ಭಯ ಹುಟ್ಟಿಸಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ. ಆದರೆ, ಜನರಲ್ಲಿ ಮಾತ್ರ ಮತ್ತೆ ಲಾಕ್ ಡೌನ್ ಮಾಡಲಾಗುತ್ತಾ ಅನ್ನೋ ಭೀತಿ ಕಾಣಲಾರಂಭಿಸಿದೆ. ಸರಕಾರ ಮಾಸ್ಕ್, ಸಾಮಾಜಿಕ ಅಂತರದ ನಿಯಮ ಜಾರಿಗೆ ತಂದರೂ ಪರವಾಗಿಲ್ಲ, ಮತ್ತೊಮ್ಮೆ ಲಾಕ್‌ಡೌನ್ ಮಾತ್ರ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್ ಪ್ರಾರಂಭಗೊಂಡಿದೆ. ಈ ಹಿನ್ನೆಲೆ ರಾಜ್ಯ- ಹೊರರಾಜ್ಯದಿಂದ ಪ್ರವಾಸಿಗರು ಜಿಲ್ಲೆಯ ರೆಸಾರ್ಟ್, ಹೋಟೆಲ್ ಹಾಗೂ ಹೋಂ ಸ್ಟೇಗಳಲ್ಲಿ ಒಂದು ವಾರದ ಮೊದಲೇ ಬಂದು ತಂಗಿದ್ದಾರೆ. ಈ ಕಾರಣದಿಂದ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರೂ ಜನರೇ ಜನರು. ಈ ಪ್ರವಾಸಿಗಳನ್ನೇ ನಂಬಿಕೊಂಡು ಸಾಕಷ್ಟು ಅಂಗಡಿಗಳು, ಹೋಟೆಲ್‌ಗಳು ಆದಾಯ ಗಳಿಸುತ್ತಿವೆ. ಆದರೆ, ಪ್ರಸ್ತುತ ಕೊರೊನಾ ಭೀತಿ ಕಾಣಿಸಿಕೊಂಡಿರುವುದರಿಂದ ಸರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರವನ್ನು ಪಾಲಿಸಲು ಸೂಚಿಸಿದೆ. ಇದರಿಂದ ಜನರಲ್ಲಿ ಮತ್ತೆ ಲಾಕ್‌ಡೌನ್ ಘೋಷಣೆಯಾಗಬಹುದೇ ? ಎಂಬ ಆತಂಕ ಕಾಣಿಸಿಕೊಂಡಿದೆ.
ಪ್ರವಾಸೋದ್ಯಮ ಇಲಾಖೆಯ ಅಂದಾಜಿನ ಪ್ರಕಾರ ನವೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ 50 ಲಕ್ಷ ಪ್ರವಾಸಿಗರು ಭೇಟಿ ನೀಡುವ ಸಾಧ್ಯತೆಗಳಿವೆ. ಇದರಿಂದಾಗಿ ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಿಗೂ ಫುಲ್ ಸುಗ್ಗಿಯಾಗಿದೆ. ಆದರೆ, ಕೊರೊನಾ ಸಂಬಂಧಿಸಿ ಸರಕಾರದ ಹೆಜ್ಜೆ ಜನರನ್ನು ಆತಂಕಕ್ಕೆ ಈಡು ಮಾಡುತ್ತಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲೇ ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ತಂದು ಜನಸಾಮಾನ್ಯರಿಗೆ ವ್ಯಾಪಾರವೂ ಇಲ್ಲದಂತೆ ಮಾಡುತ್ತಿದೆ. ಪ್ರವಾಸಿಗರು ಸಾಕಷ್ಟು ಬರುತ್ತಿದ್ದಾರಾದ್ರೂ ಸರಕಾರ ಮಾಡೋ ನಿಯಮಗಳಿಂದ ನಮ್ಮ ಹೊಟ್ಟೆಗೆ ಏಟು ಬೀಳುತ್ತಿದೆ.
ಈ ಹಿಂದೆ ಕೈಗೊಂಡ ಲಾಕ್‌ಡೌನ್‌ನ ನಷ್ಟದಿಂದ ಈಗಷ್ಟೇ ಕೊಂಚ ಏಳುತ್ತಿದ್ದೇವೆ. ಸರಕಾರ ಈ ಹಿಂದೆಯೇ ಕಟ್ಟುನಿಟ್ಟಿನ ನಿಯಮ ಮಾಡಬೇಕಿತ್ತು. ಹೊಸ ವರ್ಷಾಚರಣೆ ಹತ್ತಿರ ಬರುತ್ತಿದ್ದಂತೇ ಈ ನಿಯಮಗಳನ್ನು ಮಾಡೋದಲ್ಲ. ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ ಪಾಲಿಸಲು ನಾವು ತಯಾರಿದ್ದೇವೆ. ಆದ್ರೆ, ಮತ್ತೊಮ್ಮೆ ಲಾಕ್‌ಡೌನ್ ಎದುರಿಸಲು ತಯಾರಿಲ್ಲ ಅಂತಾರೆ ವ್ಯಾಪಾರಸ್ಥರು.
ಅಂದಹಾಗೆ, ಕೊರೊನಾ ಕಾಣಿಸಿಕೊಂಡಾಗಿನಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನರು ಸೋಂಕಿಗೊಳಗಾಗಿದ್ರೆ, ಹಲವರು ಸಾವಿಗೀಡಾಗಿದ್ರು. ಜಿಲ್ಲೆಯಲ್ಲಿ 2020ರಲ್ಲಿ ಸುಮಾರು 16 ಸಾವಿರ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 186 ರೋಗಿಗಳು ಕೋವಿಡ್ ನಿಂದಾಗಿ ಮರಣ ಹೊಂದಿದ್ದರು. ಹಾಗೆಯೇ 2021ರಲ್ಲಿ ಒಟ್ಟು 42 ಸಾವಿರ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 606 ರೋಗಿಗಳು ಮರಣ ಹೊಂದಿದ್ದರು. ಇನ್ನು 2022 ರಲ್ಲಿ ಒಟ್ಟು 15 ಸಾವಿರ ಪ್ರಕರಣಗಳಿದ್ದು, ಅದರಲ್ಲಿ 48 ಮರಣ ಹೊಂದಿದ್ದರು. ಅಲ್ಲದೇ, ಈವರೆಗೆ 11 ಲಕ್ಷ ಮೊದಲನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಶೇ. 99.64 ಸಾಧನೆ ಹಾಗೂ ಎರಡನೇ ಡೋಸ್ ನಲ್ಲಿ ಶೇ.100 ರಷ್ಟು ಸಾಧನೆ ಮಾಡಲಾಗಿದೆ. ಬೂಸ್ಟರ್ ಡೋಸ್ ಕೂಡಾ ಈವರೆಗೆ 3 ಲಕ್ಷದಷ್ಟು ನೀಡಲಾಗಿದೆ.
5 ದೇಶಗಳಲ್ಲಿ ಕೋವಿಡ್ ಏರಿಕೆ: ಅಮೆರಿಕದಲ್ಲಿ 10 ಕೋಟಿ ದಾಟಿದ ಸೋಂಕಿತರು
ಆರೋಗ್ಯ ಇಲಾಖೆಯಿಂದ ಈಗಾಗಲೇ ಸ್ಲಾಬ್ಸ್ ಕಲೆಕ್ಷನ್ ಕೂಡಾ ಮಾಡಲಾಗುತ್ತಿದ್ದು, ಈವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೂ, 5 ಟಿ ಟೆಸ್ಟ್, ರೋಗಿಗಳಿಗೆ ಚಿಕಿತ್ಸೆ ಹಾಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಜಿಲ್ಲೆಗಳಿಗೆ ವಿದೇಶಿ ಪ್ರವಾಸಿಗರು ಕೂಡಾ ಜಿಲ್ಲೆಗೆ ಬರುತ್ತಿರುವುದಿಂದ ಇಲ್ಲಿ ಯಾವುದೇ ಸೋಂಕು ಹರಡದಂತೆ ಕೊಂಚ ಕಟ್ಟುನಿಟ್ಟಿನ ನಿಯಮಗಳು ಬೇಕಾಗಿದೆ. ಆದರೆ, ಲಾಕ್‌ಡೌನ್ ಬೇಡ ಅಂತಾರೆ ಸ್ಥಳೀಯರು.
Omicron BF.7: ಮತ್ತೆ ಹರಡ್ತಿದೆ ಕೋವಿಡ್, ರೂಪಾಂತರಿ ವೈರಸ್‌ನ ರೋಗಲಕ್ಷಣಳು ಹೀಗಿವೆ
ಒಟ್ಟಿನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲೇ ಕೊರೊನಾ ಆತಂಕ ಕಾಣಿಸಿಕೊಂಡಿರುವುದರಿಂದ ಜನರಲ್ಲಿ ಸೋಂಕಿಗಿಂತಲೂ ಹೆಚ್ಚಾಗಿ ಲಾಕ್‌ಡೌನ್‌ನ ಭೀತಿ ಕಾಣಿಸಿಕೊಂಡಿದೆ. ಆದರೆ, ಸರಕಾರದ ಸೂಚನೆಯಂತೆ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರದೊಂದಿಗೆ ಜೀವನ ಸಾಗಿಸಲು ಜನರು ತಯಾರಿರೋದು ಉತ್ತಮ ಬೆಳವಣಿಗೆಯೇ ಸರಿ.