ಬೆಂಗಳೂರು(ಮೇ.23): ರಾಮನಗರದ ಮೂಲದ ಕ್ಯಾನ್ಸರ್‌ ಪೀಡಿತ ಮಹಿಳೆಗೆ (36 ವರ್ಷ) ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಮಹಿಳೆ ವಾಸ ಇರುವ ಲಕ್ಕಸಂದ್ರ ವಾರ್ಡ್‌ನ ಲಾಲ್‌ ಜಿ ನಗರವನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ.

ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಮನಗರ ಮೂಲದ ಮಹಿಳೆ ಬೆಂಗಳೂರಿನ ಎಚ್‌ಜಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಮನಗರದಿಂದ ಬೆಂಗಳೂರಿಗೆ ಚಿಕಿತ್ಸೆಗೆ ಬರಲು ತೊಂದರೆ ಉಂಟಾಗಲಿದೆ ಎಂಬ ಕಾರಣಕ್ಕೆ ನಗರದ ಲಕ್ಕಸಂದ್ರದಲ್ಲಿ ತನ್ನ ಸಹೋದರಿ ಮನೆಯಲ್ಲಿ ವಾಸವಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಹೋದರಿ ಹಾಗೂ ಕುಟುಂಬ ಸದಸ್ಯರು ತಮ್ಮ ಸ್ವಂತ ಊರುಗಳಿಗೆ ತೆರಳಿದ್ದರು. ಕಳೆದೊಂದು ತಿಂಗಳಿನಿಂದ ಕ್ಯಾನ್ಸರ್‌ ಪೀಡಿತ ಮಹಿಳೆ ಹಾಗೂ ಆಕೆಯ ಪತಿ ಮಾತ್ರ ಲಕ್ಕಸಂದ್ರದಲ್ಲಿ ಇದ್ದರು.

ಕಳ್ಳ ದಾರೀಲಿ ರಾಜ್ಯಕ್ಕೆ ಬರುತ್ತಿರುವ ಜನರು: ಕೊರೋನಾ ಸೋಂಕು ಹರಡುವ ಆತಂಕ..!

ಇತ್ತೀಚೆಗೆ ಮಹಿಳೆಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಪರೀಕ್ಷೆ ಮಾಡಲಾಗಿದೆ. ಆಗ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.

ಮಹಿಳೆಯೊಂದಿಗೆ ಆಕೆಯ ಗಂಡ ಹೊರತು ಪಡಿಸಿ ಬೇರೆ ಯಾರೂ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಆಕೆಯ ಪತಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಮಹಿಳೆ ವಾಸ ಇರುವ ಮನೆಯ ಸುತ್ತ ಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಲಾಲ್‌ಜಿ ನಗರ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಶಿವಕುಮಾರ್‌ ಮಾಹಿತಿ ನೀಡಿದ್ದಾರೆ.