ಬೆಂಗಳೂರು(ಜೂ.26): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸಿದ್ದಾಪುರ ವಾರ್ಡ್‌(144) ಸದಸ್ಯ ಮುಜಾಯಿದ್‌ ಪಾಷಾ ಅವರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದೆ. ಇವರು ಇದುವರೆಗೆ ಸೋಂಕಿಗೆ ತುತ್ತಾದ ಎರಡನೇ ಕಾರ್ಪೊರೇಟರ್‌ ಎನಿಸಿದ್ದಾರೆ. 

ಈ ಮೊದಲು ಕೋವಿಡ್‌ ಹಾಟ್‌ಸ್ಟಾಟ್‌ ಆಗಿದ್ದ ಪಾದರಾಯನಪುರ ವಾರ್ಡ್‌ ಸದಸ್ಯ ಇಮ್ರಾನ್‌ ಪಾಷಾ ಅವರಿಗೆ ಸೋಂಕು ದೃಢಪಟ್ಟಿತ್ತು. ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ 9 ದಿನಗಳ ಬಳಿಕ ಬಿಡುಗಡೆಯಾಗಿದ್ದರು. ಇದೀಗ ಮತ್ತೊಬ್ಬ ಕಾರ್ಪೊರೇಟರ್‌ಗೆ ಸೋಂಕು ದೃಢಪಟ್ಟಿದ್ದು, ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿವರ್‌ ಕಸಿಗೆ ಬಂದಿದ್ದ ವೈದ್ಯ ಕೊರೋನಾ ಸೋಂಕಿಗೆ ಬಲಿ

ಜ್ವರ ಸೇರಿದಂತೆ ಕೆಲವು ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಮುಜಾಯಿದ್‌ ಪಾಷಾ ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ವೇಳೆ ಆಸ್ಪತ್ರೆಯವರು ಕೊರೋನಾ ಪರೀಕ್ಷೆ ನಡೆಸಿದ್ದಾರೆ. ಗುರುವಾರ ಪಾಸಿಟಿವ್‌ ವರದಿ ಬಂದಿದೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.