ಬೆಂಗಳೂರಿನಿಂದ ಜನರ ಗುಳೆ: ಮನೆ ಖಾಲಿ ಮಾಡಿ ತಮ್ಮ ಊರಿಗೆ ಪ್ರಯಾಣ!
ಬೆಂಗ್ಳೂರಲ್ಲಿ ಕೊರೋನಾ ಅಬ್ಬರ: ಊರಿನತ್ತ ಜನ| ವೈರಸ್, ಲಾಕ್‌ಡೌನ್ ಭೀತಿಯಿಂದ ಸರಕು ಸಮೇತ ತವರಿಗೆ ಗುಳೆ| ರಾಜಧಾನಿಯಿಂದ ಅನ್ಯ ಊರುಗಳನ್ನು ಸಂಪರ್ಕಿಸುವ ರಸ್ತೆ ಜಾಮ್
ಬೆಂಗಳೂರು(ಜು.05): ಕೊರೋನಾ ವೈರಸ್ ಸೋಂಕು ತಣ್ಣಗಾಗಬಹುದೆಂಬ ಆಶಾಭಾವನೆ ಹೊಂದಿದ್ದ ರಾಜಧಾನಿಯಲ್ಲಿದ್ದ ಜನರಿಗೆ ಈಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕು, ಸಾವಿನ ಪ್ರಕರಣದಿಂದಾಗಿ ಆತಂಕಗೊಂಡ ಭಾರೀ ಸಂಖ್ಯೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ತಮ್ಮೂರಿಗೆ ವಾಪಸ್ ಹೊರಟಿದ್ದಾರೆ.
ಒಂದು ಕಡೆ ಬಿಗಡಾಯಿಸುತ್ತಿರುವ ಕೊರೋನಾ ಪರಿಸ್ಥಿತಿ, ಮತ್ತೊಂದೆಡೆ ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೊಳಿಸುವ ಭೀತಿಯಿಂದಾಗಿ ಬೆಂಗಳೂರು ಸುತ್ತ ಇರುವ ಜಿಲ್ಲೆಗಳ ಜನರು ಸೇರಿದಂತೆ ಉತ್ತರ ಕರ್ನಾಟಕದ ನೂರಾರು ಕುಟುಂಬಗಳ ಸಾವಿರಾರು ಸಂಖ್ಯೆಯ ಜನರು ಟ್ರಕ್, ಟ್ರಾಕ್ಟರ್, ಟೆಂಪೋ, ಗೂಡ್ಸ್ ವಾಹನಗಳಲ್ಲಿ ಪೀಠೋಪಕರಣ, ಪಾತ್ರೆಪಗಡೆ ಸೇರಿದಂತೆ ಸರಕು ಸರಂಜಾಮು ಸಹಿತ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದರು.
ಸೋಂಕು-ಸಾವಲ್ಲಿ ಕೊರೋನಾ ದಾಖಲೆ: ಒಂದೇ ದಿನ 42 ಮಂದಿ ಸಾವು, 1839 ಕೇಸ್!
ಒಂದು ಕಡೆ ಉದ್ಯೋಗ ನಷ್ಟ, ಸಣ್ಣ ಪುಟ್ಟವ್ಯಾಪಾರ ಇತ್ಯಾದಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದ ಜನರಿಗೆ ಪುನಃ ಬದುಕು ಕಟ್ಟಿಕೊಳ್ಳಬಹುದೆಂಬ ನಿರೀಕ್ಷೆ ಹುಸಿಯಾಗುವ ಲಕ್ಷಣಗಳು ಕಾಣೆಯಾಗುತ್ತಿದ್ದಂತೆ ಮುಂಜಾನೆಯಿಂದಲೇ ನಗರದ ತೊರೆಯತೊಡಗಿದರು.
ತುಮಕೂರು ಹೆದ್ದಾರಿ, ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಹೊಸೂರ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಟೋಲ್ ಶುಲ್ಕ ಕೇಂದ್ರಗಳ ಬಳಿ ಸುಮಾರು ಎರಡು ಕಿಲೋ ಮೀಟರ್‌ನಷ್ಟುಉದ್ದಕ್ಕೆ ವಾಹನಗಳು ಸಾಲು ಗಟ್ಟಿನಿಂತಿದ್ದವು. ವಾಹನ ಸಂಚಾರ ಮಂದಗತಿಯಲ್ಲಿ ಸಾಗಿದ ಪರಿಣಾಮ ಸವಾರರು ಕಿರಿಕಿರಿ ಅನುಭವಿಸಿದರು. ಕೆಲವರು ಕೋಪಗೊಂಡು ಟೋಲ್ ಸಿಬ್ಬಂದಿ ವಿರುದ್ಧ ರೇಗಾಡಿದ ಪ್ರಸಂಗಗಳು ನಡೆದೆವು. ಸದಾ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಇಂದು ಪ್ರಯಾಣಿಕರ ಸಂಖ್ಯೆ ಕೊಂಚ ಹೆಚ್ಚಿತ್ತು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ದೌಡು:
ಸರ್ಕಾರ ಲಾಕ್‌ಡೌನ್ ಸಡಿಲಿಸಿದ ಬಳಿಕ ನಗರದಲ್ಲಿ ನೆಲೆಸಿದ್ದ ರಾಜ್ಯ ಹಾಗೂ ಹೊರರಾಜ್ಯದ ಕಾರ್ಮಿಕರ ವಲಸೆ ಆರಂಭವಾಗಿತ್ತು. ಸುಮಾರು ಆರು ಲಕ್ಷ ಕಾರ್ಮಿಕರು ನಗರ ತೊರೆದಿದ್ದರು. ಇನ್ನು ಗಾರ್ಮೆಂಟ್, ಹೋಟೆಲ್, ಮನೆಗೆಲಸ ಸೇರಿದಂತೆ ಇತರೆ ಕೆಲಸ ಮಾಡುತ್ತಿದ್ದ ಕುಟುಂಬಗಳು, ತಮ್ಮ ಮಕ್ಕಳ ಎಸ್ಸೆಸ್ಸೆಎಲ್ಸಿ ಪರೀಕ್ಷೆ ಮುಗಿಯುವುದನ್ನೇ ಕಾಯುತ್ತಿದ್ದವು. ಇದೀಗ ಪರೀಕ್ಷೆ ಮುಗಿದ ಬೆನ್ನಲ್ಲೇ ಮಕ್ಕಳೊಂದಿಗೆ ಊರುಗಳತ್ತ ದೌಡಾಯಿಸಿದರು.
ಕೊರೋನಾ ಎಫೆಕ್ಟ್: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ರದ್ದು!
ಒಂದೆಡೆ ಕೊರೋನಾ ಭಯ. ಮತ್ತೊಂದೆಡೆ ಲಾಕ್‌ಡೌನ್ ಜಾರಿಯಾಗುವ ಆತಂಕ. ಈಗಾಗಲೇ ದುಡಿಮೆ ಇಲ್ಲದೆ ತೀವ್ರ ಸಂಕಷ್ಟದಲ್ಲಿದ್ದೇವೆ. ಮತ್ತೆ ಲಾಕ್‌ಡೌನ್ ಮಾಡಿದರೆ ಮೂರು ಹೊತ್ತು ಊಟಕ್ಕೆ ಹೊಂದಿಸುವುದೂ ಕಷ್ಟವಾಗುತ್ತದೆ. ಊರಲ್ಲಿ ಏನಾದರೂ ಕೆಲಸ ಮಾಡಿಕೊಂಡು ಜೀವನ ಸಾಗಿಸಬಹುದು. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಮ್ಮೂರಿಗೆ ಹೋಗುತ್ತಿದ್ದೇನೆ ಎಂದು ಚಾಮರಾಜನಗರ ಮೂಲದ ಕೃಷ್ಣಪ್ಪ ಹೇಳಿದರು.
ಲಾಕ್‌ಡೌನ್ ಗುಮ್ಮ
ನಗರದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರಿಗೆ ಸೀಮಿತವಾಗಿ ಮುಂದಿನ ವಾರದಿಂದ 15 ದಿನ ಲಾಕ್‌ಡೌನ್ ಜಾರಿ ಮಾಡಲಿದೆ ಎಂಬ ಗಾಳಿಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಸುದ್ದಿಯೂ ಸಹ ಜನ ಭಾರೀ ಸಂಖೆಯಲ್ಲಿ ನಗರ ತೊರೆಯಲು ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.
ಮೃತರಾದ 3 ದಿನಗಳ ಬಳಿಕ ಸ್ವಾಬ್ ಸಂಗ್ರಹ: ಆಸ್ಪತ್ರೆ ಸಿಬ್ಬಂದಿ ಭಾರೀ ಎಡವಟ್ಟು!
ಹಳ್ಳಿಗಳಿಗೆ ಕೊರೋನಾ ಹೆಚ್ಚುವ ಆತಂಕ
ಕೊರೋನಾ ಸೋಂಕು ಹರುಡುವ ಭೀತಿಯಿಂದ ರಾಜಧಾನಿಯಿಂದ ಜನರು ಕುಟುಂಬ ಸಮೇತ ಹಳ್ಳಿಗೆಗಳಿಗೆ ತೆರಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು, ನಿಯಂತ್ರಿಸಲು ಸರ್ಕಾರ ಹರಸಾಹಸಪಡುತ್ತಿದೆ. ಇನ್ನು ಹಳ್ಳಿಗಳಲ್ಲಿ ಪ್ರಕರಣಗಳು ಹೆಚ್ಚಾದರೆ ಪರಿಸ್ಥಿತಿ ಕೈ ಮೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.