ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಆಗಬೇಕು ಎಂದರೆ ಕೊರೋನಾ ಟೆಸ್ಟ್ ಕಡ್ಡಾಯವಾಗಿದೆ.
ಬೆಂಗಳೂರು (ಅ.09): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೃಷ್ಣಾಗೆ ಬರುವ ಸಾರ್ವಜನಿಕರನ್ನು ಆ್ಯಂಟಿಜನ್ ಪರೀಕ್ಷೆಗೊಳಪಡಿಸಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಬರುವ ಪ್ರತಿಯೊಬ್ಬರಿಗೂ ಈ ಪರೀಕ್ಷೆ ಮಾಡಿ ಫಲಿತಾಂಶವನ್ನು ಗಮನಿಸಿದ ಬಳಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಕೊರೋನಾ ಮರಣ ಪ್ರಮಾಣ ತಗ್ಗಿಸಿ; ಡಿಸಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ...
ಇತ್ತೀಚೆಗೆ ಪರೀಕ್ಷೆ ಮಾಡಿಸಿಕೊಂಡು ವರದಿ ನೆಗೆಟಿವ್ ಇದ್ದರೆ ಅಂತಹವರಿಗೆ ಪರೀಕ್ಷೆಗೊಳಪಡಿಸುತ್ತಿಲ್ಲ. ಆದರೆ, ವರದಿ ಕಡ್ಡಾಯವಾಗಿ ಸಾರ್ವಜನಿಕರು ತಮ್ಮ ಬಳಿ ಇಟ್ಟುಕೊಳ್ಳಬೇಕು. ವರದಿ ಇಲ್ಲದಿದ್ದರೆ ಕೃಷ್ಣಾದಲ್ಲಿಯೇ ಆ್ಯಂಟಿಜನ್ ಪರೀಕ್ಷಾ ವರದಿಯು ಕೇವಲ 10 ನಿಮಿಷದಲ್ಲಿ ಬರುವುದರಿಂದ ಅಲ್ಲಿಯೇ ಪರೀಕ್ಷಿಸಿ ಫಲಿತಾಂಶ ನೋಡಿ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಕಳೆದ ತಿಂಗಳು ಮುಖ್ಯಮಂತ್ರಿ ಸೇರಿದಂತೆ ಕೃಷ್ಣಾದಲ್ಲಿನ ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡು ಈ ಪರೀಕ್ಷೆ ಮಾಡಿಸಲಾಗುತ್ತಿದೆ. ವರದಿ ನೆಗೆಟಿವ್ ಬಂದರೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಪಾಸಿಟಿವ್ ವರದಿ ಬಂದಲ್ಲಿ ಅಂತಹವರನ್ನು ಒಳಗೆ ಬಿಡುವುದಿಲ್ಲ ಎಂದು ಮೂಲಗಳು ಹೇಳಿವೆ.
