ಬೆಂಗಳೂರು (ಫೆ.27):  ಶುಕ್ರವಾರ ರಾಜ್ಯದಲ್ಲಿ 571 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಫೆಬ್ರವರಿ ತಿಂಗಳಲ್ಲಿ ದಿನವೊಂದರಲ್ಲಿ ಪತ್ತೆಯಾದ ಗರಿಷ್ಠ ಪ್ರಮಾಣದ ಸೋಂಕಿತರ ಸಂಖ್ಯೆ ಇದಾಗಿದೆ. ಈ ನಡುವೆ ಸೋಂಕಿನಿಂದ 642 ಮಂದಿ ಗುಣಮುಖರಾಗಿದ್ದಾರೆ. ನಾಲ್ಕು ಮಂದಿ ಮರಣವನ್ನಪ್ಪಿದ್ದಾರೆ.

ಈ ತಿಂಗಳಲ್ಲಿ ಎರಡನೇ ಬಾರಿ (ಫೆ. 6ರಂದು 531 ಸೋಂಕಿತರು) ಐನೂರಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಪ್ರಸ್ತುತ 5,501 ಸಕ್ರಿಯ ಪ್ರಕರಣಗಳಿದ್ದು 121 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 9.50 ಲಕ್ಷ ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಈ ಪೈಕಿ 9.32 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 12,320 ಮಂದಿ ಮೃತರಾಗಿದ್ದಾರೆ.

ಈ ತಿಂಗಳಲ್ಲೇ ಅತಿ ಹೆಚ್ಚು ಕೊರೋನಾ ಪರೀಕ್ಷೆ (76,799) ಕೂಡ ಶುಕ್ರವಾರವೇ ನಡೆದಿದೆ. ಫೆ. 5ರಿಂದ ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಪ್ರಮಾಣ 75 ಸಾವಿರದ ಗಡಿ ದಾಟಿರಲಿಲ್ಲ.

ಕರ್ನಾಟಕದಲ್ಲಿ ಹೊಸ ಕೊರೋನಾ ಸಂಖ್ಯೆಯಲ್ಲಿ ಕೊಂಚ ಏರಿಕೆ, 2ನೇ ಅಲೆ ಶುರುವಾಯ್ತಾ? ..

ಬೆಂಗಳೂರು ನಗರದಲ್ಲಿ ಮೂವರು, ಹಾಸನ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು ನಗರದಲ್ಲಿ 368, ಮೈಸೂರು 36, ದಕ್ಷಿಣ ಕನ್ನಡದಲ್ಲಿ 22 ಮಂದಿಯಲ್ಲಿ ಹೊಸದಾಗಿ ಸೋಂಕು ವರದಿಯಾಗಿದೆ.

ಲಸಿಕೆ ಅಭಿಯಾನ: ರಾಜ್ಯದಲ್ಲಿ ಶುಕ್ರವಾರ 814 ಲಸಿಕಾ ಕೇಂದ್ರಗಳಲ್ಲಿ 21,888 ಮಂದಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಒಟ್ಟು 83,166 ಮಂದಿಗೆ ಲಸಿಕೆ ನೀಡುವ ಗುರಿಯಿದ್ದರೂ ಶೇ.74 ಮಂದಿ ಫಲಾನುಭವಿಗಳು ಲಸಿಕೆ ಪಡೆದಿಲ್ಲ. ರಾಜ್ಯದಲ್ಲಿ ಈವರೆಗೆ 4.47 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರು, 1.58 ಲಕ್ಷ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. 2.06 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಎರಡನೇ ಡೋಸ್‌ ಕೂಡ ನೀಡಲಾಗಿದೆ.

2 ದಿನ ಲಸಿಕೆ ಅಭಿಯಾನ ಸ್ಥಗಿತ: ಈ ಮಧ್ಯೆ ಕೋವಿನ್‌ 1.0 ಪೋರ್ಟಲ್‌ ಅನ್ನು ಕೋವಿನ್‌ 2.0 ಪೋರ್ಟಲ್‌ ಆಗಿ ಪರಿವರ್ತಿಸುವ ಕಾರಣದಿಂದ ಶನಿವಾರ ಮತ್ತು ಭಾನುವಾರ ಲಸಿಕೆ ಅಭಿಯಾನ ನಡೆಯುವುದಿಲ್ಲ ಎಂದು ತಿಳಿಸಲಾಗಿದೆ.