ಬೆಂಗಳೂರು (ಡಿ.14):  ರಾಜ್ಯದಲ್ಲಿ ಭಾನುವಾರ ಕೋವಿಡ್‌ ಸೋಂಕಿನಿಂದ 5 ಜನರು ಮೃತರಾಗಿದ್ದು, 6 ತಿಂಗಳ ಬಳಿಕ ದಾಖಲಾದ ಕನಿಷ್ಠ ಸಾವು ಇದಾಗಿದೆ. ಇದೇ ವೇಳೆ ರಾಜ್ಯದಲ್ಲಿ 1,196 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು 2,036 ಮಂದಿ ಗುಣಮುಖರಾಗಿದ್ದಾರೆ.

ಜೂನ್‌ 22ರಂದು ಐವರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಆ ಬಳಿಕ ಏರುಗತಿ ಪಡೆದಿದ್ದ ಸಾವಿನ ಸಂಖ್ಯೆ ಕಳೆದ ಒಂದೂವರೆ ತಿಂಗಳಿನಿಂದ ಇಳಿಮುಖವಾಗಿದೆ. ಭಾನುವಾರ ಬೆಂಗಳೂರಿನಲ್ಲಿ 3 ಹಾಗೂ ದಕ್ಷಿಣ ಕನ್ನಡ ಹಾಗೂ ಮೈಸೂರಿನಲ್ಲಿ ತಲಾ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ತನ್ಮೂಲಕ 6 ತಿಂಗಳ ನಂತರ ದೈನಂದಿನ ಸಾವಿನ ಸಂಖ್ಯೆ 5ಕ್ಕೆ ಇಳಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 11,944 ಸೋಂಕಿತರು ಮೃತರಾಗಿದ್ದಾರೆ.

ಇದೇ ವೇಳೆ, ಸಕ್ರಿಯ ಪ್ರಕರಣಗಳು 17,409ಕ್ಕೆ ಕುಸಿದಿವೆ. 260 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ 244 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಈ ಸಂಖ್ಯೆ 260ಕ್ಕೆ ಏರಿದೆ.

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!

ಈವರೆಗೆ ಒಟ್ಟು 9.01 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 8.72 ಲಕ್ಷ ಜನ ಗುಣಮುಖರಾಗಿದ್ದಾರೆ. 88,542 ಕೊರೋನಾ ಪರೀಕ್ಷೆ ನಡೆದಿದೆ. ಈವರೆಗೆ ಒಟ್ಟು 1.23 ಕೋಟಿ ಪರೀಕ್ಷೆ ನಡೆಸಲಾಗಿದೆ.

ಗದಗದಲ್ಲಿ ಒಂದೂ ಹೊಸ ಪ್ರಕರಣ ವರದಿಯಾಗಿಲ್ಲ. ಉಳಿದಂತೆ ಬೆಂಗಳೂರು ನಗರದಲ್ಲಿ 672, ಬಾಗಲಕೋಟೆ 3, ಬಳ್ಳಾರಿ 36, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 27, ಬೀದರ್‌ 5, ಚಾಮರಾಜ ನಗರ 19, ಚಿಕ್ಕಬಳ್ಳಾಪುರ 55, ಚಿಕ್ಕಮಗಳೂರು 14, ಚಿತ್ರದುರ್ಗ 33, ದಕ್ಷಿಣ ಕನ್ನಡ 36, ದಾವಣಗೆರೆ 11, ಧಾರವಾಡ 9, ಹಾಸನ 20, ಹಾವೇರಿ 10 ಕಲಬುರಗಿ ತಲಾ 11, ಕೊಡಗು 30, ಕೋಲಾರ 14, ಕೊಪ್ಪಳ 8, ಮಂಡ್ಯ 15, ಮೈಸೂರು 42, ರಾಯಚೂರು 29, ರಾಮನಗರ 5, ಶಿವಮೊಗ್ಗ 4, ತುಮಕೂರು 28, ಉಡುಪಿ 11, ಉತ್ತರ ಕನ್ನಡ 22, ವಿಜಯಪುರ 11 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 7 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.