ಬೆಂಗಳೂರು (ನ.08):  ರಾಜ್ಯದಲ್ಲಿ ಹೊಸದಾಗಿ ಕೊರೋನಾ ಸೋಂಕು ದೃಢಪಡುತ್ತಿರುವ ಪ್ರಮಾಣದಲ್ಲಿ ಇಳಿಕೆ ಮುಂದುವರೆದಿದ್ದು, ಶನಿವಾರ ಕೇವಲ 2258 ಜನರಿಗೆ ಮಾತ್ರ ಹೊಸದಾಗಿ ಸೋಂಕು ದೃಢಪಟ್ಟಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಹೊಸ ಸೋಂಕು ಮತ್ತು ಸಾವು ಎರಡೂ ಪ್ರಕರಣಗಳೂ ಕಳೆದ ನಾಲ್ಕು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆಯಾದಂತಾಗಿದೆ.

ಜುಲೈ ಮೊದಲ ವಾರದ ಬಳಿಕ ರಾಜ್ಯದಲ್ಲಿ ಏಕದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಾರಂಭಿಸಿದ್ದವು. ಸೋಂಕಿತರ ದಿನವೊಂದರ ಸಾವಿನ ಸಂಖ್ಯೆ ಕೂಡ 20 ದಾಟಿತ್ತು. ನಂತರ ನಿರಂತರವಾಗಿ ಏರುತ್ತಾ ಬಂದಿದ್ದ ಸೋಂಕು ಮತ್ತು ಸಾವಿನ ಪ್ರಮಾಣ ಕಳೆದ ಕೆಲವು ವಾರಗಳಿಂದ ಇಳಿಮುಖವಾಗುತ್ತಾ ಸಾಗಿದ್ದು, ಶನಿವಾರ ಇನ್ನಷ್ಟುಇಳಿಕೆಯಾಗಿದೆ.

5 ತಿಂಗಳ ಬಳಿಕ ಬೆಂಗಳೂರಲ್ಲಿ ಕಡಿಮೆ ಕೊರೋನಾ ಕೇಸ್‌

ರಾಜ್ಯದಲ್ಲಿ ಶನಿವಾರ ಒಟ್ಟು 1.06 ಲಕ್ಷ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು ಇದರಲ್ಲಿ 2258 ಮಂದಿಗೆ (ಶೇ.2.12) ಮಾತ್ರ ಸೋಂಕು ದೃಢಪಟ್ಟವರದಿಯಾಗಿದೆ. ಇದೇ ದಿನ ಚಿಕಿತ್ಸೆ ಫಲಿಸದೆ 22 ಮಂದಿ (ಶೇ.0.97) ಸಾವನ್ನಪ್ಪಿದ್ದಾರೆ. ಇನ್ನು ಸೋಂಕಿನಿಂದ ಗುಣಮುಖರಾದ 2239 ಮಂದಿಯನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 8.44 ಲಕ್ಷ ದಾಟಿದರೆ, ಒಟ್ಟು ಸಾವನ್ನಪ್ಪಿದ ಸೋಂಕಿತರ ಸಂಖ್ಯೆ 11,369 ತಲುಪಿದೆ. ಇನ್ನು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 7.99 ಲಕ್ಷ ದಾಟಿದ್ದು ಎಂಟು ಲಕ್ಷದ ಗಡಿ ಸಮೀಪಿಸಿದೆ. ಉಳಿದಂತೆ 33,320 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಗಳಲ್ಲಿ, ಹೋಂ ಐಸೋಲೇಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗಳಲ್ಲಿರುವವರ ಪೈಕಿ 887 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲಾವಾರು:

ಜಿಲ್ಲಾವಾರು ಶನಿವಾರ ಬೆಂಗಳೂರು ನಗರದಲ್ಲಿ ಅತಿಹೆಚ್ಚು 1046 ಮಂದಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಬಾಗಲಕೋಟೆ 24, ಬಳ್ಳಾರಿ 55, ಬೆಳಗಾವಿ 19, ಬೆಂಗಳೂರು ಗ್ರಾಮಾಂತರ 70, ಬೀದರ್‌ 2, ಚಾಮರಾಜನಗರ 13, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 63, ಚಿತ್ರದುರ್ಗ 98, ದಕ್ಷಿಣ ಕನ್ನಡ 72, ದಾವಣಗೆರೆ 44, ಧಾರವಾಡ 12, ಗದಗ 7, ಹಾಸನ 83, ಹಾವೇರಿ 26, ಕಲಬುರಗಿ 24, ಕೊಡಗು 18, ಕೋಲಾರ 19, ಕೊಪ್ಪಳ 22, ಮಂಡ್ಯ 68, ಮೈಸೂರು 79, ರಾಯಚೂರು 8, ರಾಮನಗರ 28, ಶಿವಮೊಗ್ಗ 24, ತುಮಕೂರು 165, ಉಡುಪಿ 18, ಉತ್ತರ ಕನ್ನಡ 29, ವಿಜಯಪುರ 58 ಮತ್ತು ಯಾದಗಿರಿಯಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ.

ಸಾವು ಎಲ್ಲೆಲ್ಲಿ?:  ಶನಿವಾರ ಬೆಂಗಳೂರಿನಲ್ಲಿ 7, ತುಮಕೂರಲ್ಲಿ 3, ಕೋಲಾರ, ಮೈಸೂರು ತಲಾ 2, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೀದರ್‌, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಉತ್ತರ ಕನ್ನಡ ತಲಾ ಒಂದು ಸಾವು ಸಂಭವಿಸಿದೆ.