ಕಮಿಷನ್ ಕೇಳಿಲ್ಲ ಎಂದರೆ ಡಿಕೆಶಿ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಸಿಟಿ ರವಿ ಸವಾಲು
ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಅವರು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಆ.13): ತಾವು ಹಾಗೂ ತಮ್ಮ ಸರ್ಕಾರ ಪ್ರಮಾಣಿಕ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವಿಸುವುದಾದರೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಒತ್ತಾಯದಂತೆ ಅಜ್ಜಯ್ಯನವರ ಮಠದಲ್ಲಿ ಅವರು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿ, ನಂಬಿಕೆ ಸಲುವಾಗಿ ಗುತ್ತಿಗೆದಾರರು ಈ ಒತ್ತಾಯ ಮಾಡಿದ್ದಾರೆ. ತಾವೇನೂ ತಪ್ಪೇ ಮಾಡಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಅಲ್ಲಿಗೆ ಹೋಗಿ ಪ್ರಮಾಣ ಮಾಡಿ ಸಾಬೀತು ಪಡಿಸಬಹುದಲ್ಲ ಎಂದರು.
ಗುತ್ತಿಎಗೆದಾರರಿಂದ ಮಾಹಿತಿ ಸಂಗ್ರಹ :
ಗುತ್ತಿಗೆದಾರರ ಬಳಿ ನಾನೂ ಸಹ ಮಾಹಿತಿ ಪಡೆದಿದ್ದೇನೆ. ಮೊದಲು ಹಳೇ ಕಾಮಗಾರಿಗಳ ಬಿಲ್ ಶೇ.7 ರಷ್ಟು ಕಮಿಷನ್ ನಿಗದಿಪಡಿಸಿದ್ದರು. ನಾವು ಅದಕ್ಕೆ ಒಪ್ಪಿದೆವು. ನಂತರ ಮಧ್ಯವರ್ತಿಗಳು ಶೇ.10 ಕೊಡಬೇಕು ಎಂದರು. ಸ್ವಲ್ಪ ಚರ್ಚೆ ಮಾಡಿದೆವು. ಆದರೂ ಶೇ.15ರಷ್ಟಕ್ಕೆ ಆದರೆ ಮಾತ್ರ ಬಿಲ್ ನೀಡುವುದಾಗಿ ತಿಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂದರು. ಆರೋಪ ಸುಳ್ಳು ಎನ್ನುವುದಾದರೆ ಗುತ್ತಿಗೆದಾರರ ಸಂಘದವರು ಕೇಳಿದಂತೆ ಅಜ್ಜಯ್ಯನ ಮಠ(Ajjaiah mutt)ಕ್ಕೆ ಹೋಗಿ ಪ್ರಮಾಣ ಮಾಡುವ ಮೂಲಕ ಅದನ್ನು ಸಾಬೀತು ಪಡಿಸಲಿ. ಇದೇ ವೇಳೆ ಸತ್ಯ ಮಾಡುವಾಗ ನನ್ನ ಜೀವನದಲ್ಲೇ ಇನ್ನಾವ ಲಂಚವನ್ನೂ ಸ್ವೀಕರಿಸಿಲ್ಲ ಎಂದು ಮಾಡಿದರೆ ಅವರಿಗೆ ಇನ್ನಾವ ಸಾಕ್ಷ್ಯವೂ ಬೇಕಾಗುವುದಿಲ್ಲ ಎಂದು ಟೀಕಿಸಿದರು.
ಒಂದೇ ದಿನದಲ್ಲಿ ವಸೂಲಿ ಕಾಂಗ್ರೆಸ್ ವಿರುದ್ದ ಆರೋಪ :
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಬಹುತೇಕ ಕಾಂಗ್ರೆಸ್ ಶಾಸಕರು ಒಂದೇ ದಿನದಲ್ಲಿ ವಸೂಲಿಗೆ ಹೊರಟುಬಿಟ್ಟಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ(CT Ravi) ಆರೋಪಿಸಿದರು. ಬಹಿರಂಗವಾಗಿ ನಾನು ಅಷ್ಟು ಖರ್ಚು ಮಾಡಿದ್ದೇನೆ, ನಾನೇನು ದಾನ-ಧರ್ಮಕ್ಕೆ ರಾಜಕಾರಣ ಮಾಡುತ್ತಿದ್ದೇನ, ನಾನೇನು ಧರ್ಮರಾಯನ, ಖರ್ಚು ಮಾಡಿದ ಹಣ ವಸೂಲಿ ಆಗದೇ ಇದ್ದಲ್ಲಿ ಹೆಂಡರು ಮಕ್ಕಳನ್ನು ಬೀದಿಗೆ ನಿಲ್ಲಿಸಬೇಕಾ ಎಂದು ಶಾಸಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ: ಗುತ್ತಿಗೆದಾರ ಹೇಮಂತ್ ಸವಾಲು!
ಅಧಿಕಾರಕ್ಕೆ ಬಂದ ತಕ್ಷಣವೇ ಇದು ಆರಂಭವಾಗಿದೆ. ಕರಪ್ಶನ್ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು. ನಮ್ಮ ದೇಶ ಮತ್ತು ರಾಜ್ಯದ ಹಗರಣಗಳನ್ನು ಪಟ್ಟಿ ಮಾಡಿದರೆ ಶೇ.90 ರಷ್ಟು ಹಗರಣಗಳು ನಡೆದಿರುವುದು ಕಾಂಗ್ರೆಸ್ ಕಾಲಘಟ್ಟದಲ್ಲೇ. ಶೇ.90 ರಷ್ಟು ಪ್ರತಿಶತ ಅಪರಾಧಿ ಸ್ಥಾನದಲ್ಲಿರುವವರು ಕಾಂಗ್ರೆಸ್ನ ಸಚಿವರು ಮತ್ತು ಅವರ ಕಾಲಘಟ್ಟದ ಅಧಿಕಾರಿಗಳು. ಭ್ರಷ್ಟಾಚಾರದ ಬೀಜ ಬಿತ್ತಿದ್ದೇ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದಿಂದ ವಿಮುಖವಾಗಿರುತ್ತದೆ ಎಂಬುದನ್ನು ಯಾರೂ ನಂಬುವುದಿಲ್ಲ ಎಂದರು. ಕಾಂಗ್ರೆಸಿಗರು ಯಾವ ಪ್ರಾಮಾಣಿಕತೆಯ ಸೋಗು ಹಾಕಿದರೂ ಅಲ್ಲಿ ಭ್ರಷ್ಟಾಚಾರದ ವಾಸನೆಯೇ ಇರುತ್ತದೆ. ಕಾಂಗ್ರೆಸ್‌ನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿಯಬೇಕಾದ ಅವಶ್ಯಕತೆಯೇ ಇಲ್ಲ ಎಂದರು.
ಶೇ.40 ಕಮಿಷನ್ ಇದ್ದದ್ದು ಶೇ.15ಕ್ಕೆ ಬಂತೆಂದು ಹೇಳುವ ಮೂಲಕ ಶೇ.40 ಇದ್ದದ್ದು ಒಪ್ಪಿದಂತಾಯಿತಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಗಮನಿಸಿದ್ದೇನೆ. ಅದು ಹಾಗಲ್ಲ. ನೀವು ಹಳೇ ಬಿಲ್‌ಗೆ ಶೇ.15 ಕೇಳುತ್ತಿದ್ದೀರಿ. ಹೊಸದಕ್ಕೆ ನಿಮ್ಮದು ಶೇ.50 ದಾಟಬಹುದು ಎಂದು ಕುಟುಕಿದರು.