ವಿಶ್ವನಾಥ ಮಲೇಬೆನ್ನೂರ

ಬೆಂಗಳೂರು(ಸೆ.07): ಕೊರೋನಾ ಸೋಂಕಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕ್ಷೇತ್ರ ಸಂಪೂರ್ಣವಾಗಿ ಕುಸಿದಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 13 ಹೊಸ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿದೆ.

ಮಹಾಮಾರಿ ಕೊರೋನಾ ಸೋಂಕಿನ ಭೀತಿಗೆ ಕಟ್ಟಡ ನಿರ್ಮಾಣಕ್ಕೆ ನೆಲಕಚ್ಚಿದೆ. ಇದರಿಂದ ಬಿಬಿಎಂಪಿಗೆ ಸಂಪನ್ಮೂಲ ಕ್ರೋಢಿಕರಣದ ಮೇಲೆಯೂ ಭಾರೀ ಹೊಡೆದ ಬಿದ್ದಿದ್ದು, ಪ್ರತಿ ವರ್ಷ ಬಿಬಿಎಂಪಿ ನಗರದಲ್ಲಿ ಸುಮಾರು 130ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, 100ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣಕ್ಕೆ ಸಿಸಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಒಸಿ ನೀಡಲಾಗುತ್ತಿತ್ತು. ಇದರಿಂದ ಬಿಬಿಎಂಪಿಗೆ ಸುಮಾರು ಪ್ರತಿ ವರ್ಷ 300 ಕೋಟಿಗೂ ಅಧಿಕ ಮೊತ್ತದ ಆದಾಯ ಬರುತ್ತಿತ್ತು. ಆದರೆ, ಪ್ರಸಕ್ತ 2020-21ನೇ ಸಾಲಿನಲ್ಲಿ ಕೇವಲ 13 ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, 20 ಕಟ್ಟಡಗಳಿಗೆ ನಿರ್ಮಾಣ ಆರಂಭಿಸುವ ಅನುಮತಿ (ಸಿಸಿ), 28 ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (ಒಸಿ) ನೀಡಲಾಗಿದೆ. ಇದರಿಂದ ಬಿಬಿಎಂಪಿ ಈ ಆರ್ಥಿಕ ವರ್ಷದಲ್ಲಿ ಕೇವಲ 37 ಕೋಟಿ ರು. ಮಾತ್ರ ಆದಾಯ ಬಂದಿದೆ. ಸುಮಾರು 200 ಕೋಟಿಗೂ ಹೆಚ್ಚಿನ ಆದಾಯ ಖೋತಾ ಅನುಭವಿಸಬೇಕಾಗಿದೆ.

ಚೇತರಿಕೆ ಇಲ್ಲ:

ಕೊರೋನಾ ಸೋಂಕಿನ ಭೀತಿಯಿಂದ ಮಾರ್ಚ್‌ನಿಂದ ಲಾಕ್‌ಡೌನ್‌ ಘೋಷಿಸಲಾಯಿತು. ಇದರಿಂದ ಇಡೀ ಬೆಂಗಳೂರು ಸುಮಾರು ಮೂರು ತಿಂಗಳು ಸ್ಥಬ್ದವಾಗಿತ್ತು. ಪರಿಣಾಮ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತು. ಕಟ್ಟಡ ನಿರ್ಮಾಣ ಕ್ಷೇತ್ರದ ಕೂಲಿ ಕಾರ್ಮಿಕರು ಬೆಂಗಳೂರು ನಗರ ತೊರೆದು ತಮ್ಮ ಸ್ವಂತ ರಾಜ್ಯ ಮತ್ತು ಜಿಲ್ಲೆ, ಗ್ರಾಮಗಳಿಗೆ ತೆರಳಿದ್ದಾರೆ. ಸೋಂಕಿನ ಭೀತಿ ಕಡಿಮೆಯಾದರೂ ಕೂಲಿ ಕಾರ್ಮಿಕರು ಬೆಂಗಳೂರಿನ ಕಡೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.

ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!

ಜತೆಗೆ ಈಗಾಗಲೇ ಸಾಕಷ್ಟು ಮಂದಿ ಬೆಂಗಳೂರು ನಗರ ತೊರೆದು ಗ್ರಾಮಗಳ ಕಡೆ ತೆರಳಿದ್ದಾರೆ. ಇದರಿಂದ ಬಾಡಿಗೆದಾರರು ಇಲ್ಲದೇ ಬಹುತೇಕ ಮನೆಗಳು ಖಾಲಿ ಖಾಲಿಯಾಗಿವೆ. ವಾಣಿಜ್ಯ ವಹಿವಾಟು ಸಹ ಮೊದಲಿನಂತೆ ಆರಂಭವಾಗಿಲ್ಲ. ಪರಿಣಾಮ ಹೊಸ ಕಟ್ಟಡ ನಿರ್ಮಾಣಕ್ಕೆ ಜನ ಮುಂದಾಗುತ್ತಿಲ್ಲ.

ಅಧಿಕಾರಿಗಳಿಂದ ವಿಳಂಬ:

ಇನ್ನು ಕೆಲವು ಕಡೆ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿಗೆ ಮತ್ತು ಸಿಸಿ ನೀಡುವುದಕ್ಕೆ ಹಾಗೂ ನಿರ್ಮಾಣಗೊಂಡ ಕಟ್ಟಡಕ್ಕೆ ಒಸಿ ಪ್ರಮಾಣ ಪತ್ರ ಪಡೆಯುವುದಕ್ಕೆ ಬಿಬಿಎಂಪಿಯ ನಗರ ಯೋಜನಾ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ಭಾಗಿಯಾಗಿರುವುದರಿಂದ ಅನುಮತಿ ನೀಡದೇ ವಿಳಂಬ ಮಾಡಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಅರ್ಜಿಗಳನ್ನು ತಕ್ಷಣ ಪರಿಶೀಲನೆ ನಡೆಸಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ‘ಕನ್ನಡಪ್ರಭ’ಕ್ಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಟ್ಟಡ ನಕ್ಷೆ, ಸಿಸಿ, ಒಸಿಯಿಂದ ಬಿಬಿಎಂಪಿ ಕೋಟ್ಯಂತರ ರುಪಾಯಿ ಆದಾಯ ಬರದಲಿದೆ. ಹೀಗಾಗಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗೆ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಗರ ಯೋಜನೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ​ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಕಳೆದ ಐದು ವರ್ಷ ವಿವರ

ವರ್ಷ ನಕ್ಷೆ ಮಂಜೂರಾತಿ ಸಿಸಿ ಒಸಿ ಅದಾಯ (ಕೋಟಿ)

2015-16 183 178 111 224
2016-17 141 147 153 250
2017-18 168 93 160 337
2018-19 167 118 140 397
2019-20 134 146 199 237
2020-21 13 20 28 37