ಎರಡು ಬಾರಿ ಟೆಂಡರ್ ಆಹ್ವಾನಿಸಿದರೂ ನಗರದಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾದ 100 ‘ಶಿ ಟಾಯ್ಲೆಟ್’ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಬಿಬಿಎಂಪಿಯೇ ತಲಾ ₹15 ಲಕ್ಷದಿಂದ ₹20 ಲಕ್ಷ ವೆಚ್ಚ ಮಾಡಿ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಡಿ.4) : ಎರಡು ಬಾರಿ ಟೆಂಡರ್ ಆಹ್ವಾನಿಸಿದರೂ ನಗರದಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾದ 100 ‘ಶಿ ಟಾಯ್ಲೆಟ್’ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳು ಮುಂದೆ ಬಾರದ ಹಿನ್ನೆಲೆಯಲ್ಲಿ ಬಿಬಿಎಂಪಿಯೇ ತಲಾ ₹15 ಲಕ್ಷದಿಂದ ₹20 ಲಕ್ಷ ವೆಚ್ಚ ಮಾಡಿ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ.
ರಾಜ್ಯ ಸರ್ಕಾರ ‘ಶುಭ್ರ ಬೆಂಗಳೂರು’ ಯೋಜನೆಯಡಿ ನಗರದಲ್ಲಿ ಮಹಿಳೆಯರಿಗೆ ಅತ್ಯಾಧುನಿಕ ಹಾಗೂ ಹಲವು ಸೌಲಭ್ಯವಿರುವ ವಿಶೇಷ ‘ಶಿ ಟಾಯ್ಲೆಟ್’ಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಯೋಜನೆಯಡಿ ಬಿಬಿಎಂಪಿ ನೀಡುವ ಸ್ಥಳದಲ್ಲಿ ಗುತ್ತಿಗೆ ಪಡೆದ ಸಂಸ್ಥೆ ಬಂಡವಾಳ ಹೂಡಿ ‘ಶಿ ಟಾಯ್ಲೆಟ್’ ನಿರ್ಮಿಸಬೇಕು. ಆ ಕಟ್ಟಡದ ಮೇಲೆ ಜಾಹೀರಾತು ಫಲಕ ಅಳವಡಿಕೆಗೆ ಬಿಬಿಎಂಪಿ ಅನುಮತಿ ನೀಡಿ, ಖಾಸಗಿ ಸಂಸ್ಥೆ ಆ ಮೂಲಕ ಆದಾಯ ಗಳಿಸಲು ಅವಕಾಶ ನೀಡಿತ್ತು.
ಈ ಕುರಿತು ಕಳೆದ ಒಂದು ವರ್ಷದಿಂದ ಎರಡು ಬಾರಿ ಬಿಬಿಎಂಪಿ ಟೆಂಡರ್ ಆಹ್ವಾನಿಸಿದ್ದರೂ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಗಳು ಮುಂದೆ ಬರುತ್ತಿಲ್ಲ. ಹೀಗಾಗಿ, ಬಿಬಿಎಂಪಿಯೇ ಖರ್ಚು ಮಾಡಿ ಶಿ ಟಾಯ್ಲಿಟ್ ಸ್ಥಾಪನೆಗೆ ಚಿಂತನೆ ನಡೆಸಿದೆ.
ಜಾಹೀರಾತು ನಿಷೇಧಕ್ಕೆ ಹಿಂದೇಟು:
ಬೆಂಗಳೂರಿನಲ್ಲಿ ಹೊರಾಂಗಣ ಜಾಹೀರಾತು ಬ್ಯಾನರ್, ಹೋಲ್ಡಿಂಗ್ ಸೇರಿದಂತೆ ಇನ್ನಿತರೆ ಜಾಹೀರಾತು ಫಲಕ ಅಳವಡಿಕೆಗೆ ನಿಷೇಧ ವಿಧಿಸಲಾಗಿದೆ. ಹೀಗಾಗಿ, ಖಾಸಗಿ ಸಂಸ್ಥೆಗಳು ಶಿ ಟಾಯ್ಲಿಟ್ ನಿರ್ಮಾಣದಿಂದ ತಮಗೆ ಯಾವುದೇ ಲಾಭ ಆಗುವುದಿಲ್ಲ. ಜತೆಗೆ ಬಿಬಿಎಂಪಿ ಶೌಚಾಲಯ ನಿರ್ಮಾಣಕ್ಕೆ ನೀಡುವ ಸ್ಥಳವೂ ಬಹಳ ಮುಖ್ಯವಾಗುತ್ತದೆ. ಈ ಕಾರಣಕ್ಕೆ ಖಾಸಗಿ ಸಂಸ್ಥೆಗಳು ಮುಂದೆ ಬಾರದ ಕಾರಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪಾಲಿಕೆಯಿಂದಲೇ ಶಿ ಟಾಯ್ಲಿಟ್ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ.
₹20 ಕೋಟಿ ವೆಚ್ಚ: 100 ಶಿ ಟಾಯ್ಲಿಟ್ ನಿರ್ಮಿಸಲು ₹20 ಕೋಟಿ ವೆಚ್ಚವಾಗಲಿದೆ. ಪಾದಚಾರಿ ಮಾರ್ಗ 3.5 ಮೀಟರ್‌ಗಿಂತ ಹೆಚ್ಚಿನ ಜಾಗ ಇರುವ ಕಡೆ ಮಾತ್ರ ಈ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ನೌಕರರಿಗೆ ಬಯೋಮೆಟ್ರಿಕ್ ಆತಂಕ: ಷರತ್ತಿನಲ್ಲಿ ಏನಿದೆ?
ಶಿ ಟಾಯ್ಲೆಟ್ ವಿಶೇಷತೆ
ಶಿ ಟಾಯ್ಲಿಟ್‌ಗಳು ಮೂತ್ರ ವಿಸರ್ಜನೆ ವ್ಯವಸ್ಥೆ ಜತೆಗೆ ಮಕ್ಕಳಿಗೆ ಹಾಲುಣಿಸಲು, ಮಹಿಳೆಯರಿಗೆ ಬಟ್ಟೆ ಬದಲಿಸಲು ಸೂಕ್ತ ವ್ಯವಸ್ಥೆ, ವಿಶ್ರಾಂತಿ ಪಡೆಯಲು ಸ್ಥಳಾವಕಾಶ ಇರಲಿದೆ.
ಖಾಸಗಿಯವರು ಎರಡರಿಂದ ಮೂರು ಲಕ್ಷ ರು. ಶೌಚಾಲಯ ನಿರ್ಮಾಣಕ್ಕೆ ವೆಚ್ಚ ಮಾಡಿ 30 ವರ್ಷ ಜಾಹೀರಾತು ಪ್ರದರ್ಶನದ ಅನುಮತಿ ಪಡೆಯುತ್ತಿದ್ದರು. ಆದರೆ ಜಾಹೀರಾತು ನಿಯಮ ಬಿಗಿ ಪಡಿಸಿರುವುದರಿಂದ ಶಿ ಟಾಯ್ಲಿಟ್ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಗಳು ಮುಂದಾಗುತ್ತಿಲ್ಲ. ಹಾಗಾಗಿ, ಬಿಬಿಎಂಪಿಯಿಂದಲೇ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ.
