ನ್ಯಾಯದಾನಕ್ಕೆ ಸಂವಿಧಾನ ತಳಹದಿ: ಸಿಜೆ ನೂತನ ಸಿಜೆಗೆ ಸ್ವಾಗತ ಕೊನೆಯವರೆಗೂ ಸಂವಿಧಾನದ ತತ್ವಗಳಡಿಯೇ ಕಾರ್ಯ ನಿರ್ವಹಣೆ: ನ್ಯಾ.ವರಾಳೆ
ಬೆಂಗಳೂರು (ಅ.18) : ನ್ಯಾಯದಾನಕ್ಕೆ ಸಂವಿಧಾನ ತಳಹದಿಯಾಗಬೇಕೇ ಹೊರತು ಧರ್ಮವಲ್ಲ ಎಂದು ಹೈಕೋರ್ಚ್ ನೂತನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ವಕೀಲರ ಸಂಘ ಸೋಮವಾರ ಹೈಕೋರ್ಚ್ ವಕೀಲರ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾನತೆಯೇ ಸಂವಿಧಾನದ ಮೂಲ ತತ್ವವಾಗಿದೆ. ಅಂಬೇಡ್ಕರ್ ಅವರ ಸಂವಿಧಾನ ತಮ್ಮನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ. ನ್ಯಾಯದಾನಕ್ಕೆ ಸಂವಿಧಾನವೇ ತಳಹದಿಯಾಗಬೇಕು ಧರ್ಮವಲ್ಲ. ತಾವು ಕೊನೆಯವರೆಗೂ ಸಂವಿಧಾನದ ತತ್ವಗಳಡಿಯೇ ಕಾರ್ಯ ನಿರ್ವಹಿಸುತ್ತೇನೆ ಎಂದು ನುಡಿದರು.
26 ವರ್ಷದ ಬಳಿಕ ರಾಜ್ಯ ಹೈಕೋರ್ಟ್‌ಗೆ ಕನ್ನಡಿಗ ಸಿಜೆ!
ಇದಕ್ಕೂ ಮುನ್ನ ವಕೀಲರ ಪರಿಷತ್ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಪಿ.ಬಿ.ವರಾಳೆ ಅವರು, ನ್ಯಾಯಾಂಗ ಆಡಳಿತ ಹಾಗೂ ಕಾರ್ಯನಿರ್ವಹಣೆಯಲ್ಲಿ ಕರ್ನಾಟಕ ಹೈಕೋರ್ಚ್ ದೇಶದ ಪ್ರಮುಖ ಹೈಕೋರ್ಚ್‌ಗಳಲ್ಲಿ ಒಂದಾಗಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಕಂಪ್ಯೂಟರೀಕರಣ, ತಂತ್ರಜ್ಞಾನ ಅಳವಡಿಕೆ ಹಾಗೂ ಮೂಲಸೌಕರ್ಯದ ವಿಚಾರದಲ್ಲಿ ರಾಜ್ಯ ಹೈಕೋರ್ಚ್ ಮುಂಚೂಣಿಯಲ್ಲಿದೆ. ಇಲ್ಲಿನ ಲೋಕ ಅದಾಲತ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಇಂತಹ ಹೈಕೋರ್ಚ್‌ನಲ್ಲಿ ಕಾರ್ಯ ನಿರ್ವಹಿಸುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಕೀಲ ವಿವೇಕ ರೆಡ್ಡಿ, ಕರ್ನಾಟಕ-ಮಹಾರಾಷ್ಟ್ರ ನಡುವೆ ಸೌಹಾರ್ದ ಸಂಬಂಧವಿದೆ. ಈ ಹಿಂದಿನ ಅತ್ಯುತ್ತಮ ಮುಖ್ಯ ನ್ಯಾಯಮೂರ್ತಿಗಳಂತೆಯೇ ವರಾಳೆ ಅವರು ಸಹ ತಮ್ಮದೇ ಆದ ಛಾಪು ಮೂಡಿಸಲಿ ಎಂದರು. ಅಡ್ವೊಕೇಟ್ ಪ್ರಭುಲಿಂಗ ಕೆ.ನಾವದಗಿ, ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು ಉಪಸ್ಥಿತರಿದ್ದರು.
ಮುಂದಿನ ಸಿಜೆಐ ಬಗ್ಗೆ ನಿರ್ಧರಿಸಿ, ಮುಖ್ಯ ನ್ಯಾಯಮೂರ್ತಿಗೆ ಕೇಂದ್ರ ಸರ್ಕಾರದ ಪತ್ರ
ಸಂಪೂರ್ಣ ಕನ್ನಡದಲ್ಲೇ ಭಾಷಣ
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮೋತಕಪಲ್ಲಿ ಕಾಶೀನಾಥ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಸ್ವಾಗತಿಸಿ, ಸಂಪೂರ್ಣವಾಗಿ ಕನ್ನಡದಲ್ಲಿಯೇ ಭಾಷಣ ಮಾಡಿದ್ದು ವಿಶೇಷವಾಗಿತ್ತು. ಮುಖ್ಯ ನ್ಯಾಯಮೂರ್ತಿಗಳಿಗೆ ಸ್ವಾಗತ ಕೋರಿ ವಕೀಲ ಪರಿಷತ್ ಅಧ್ಯಕ್ಷರು ಕನ್ನಡದಲ್ಲೇ ಭಾಷಣ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.
