Asianet Suvarna News Asianet Suvarna News

Constitution Day: 70 ವರ್ಷ ಕಳೆದರೂ ನೆರೆ ದೇಶಗಳಂತೆ ನಮ್ಮಲ್ಲಿ ಅರಾಜಕತೆ, ಸೈನಿಕ ದಂಗೆಗಳು ನಡೆದಿಲ್ಲ

ಆಧುನಿಕ ಪ್ರಜಾಪ್ರಭುತ್ವದ ಉದ್ದೇಶವೆಂದರೆ ರಾಜಾಧಿಕಾರದ ಮೇಲೆ ನಿಯಂತ್ರಣವನ್ನು ಹೇರುವುದು ಮಾತ್ರವಲ್ಲ, ಬದಲಾಗಿ ಜನರ ಕಲ್ಯಾಣವನ್ನು ಸಾಧಿಸುವುದೇ ಪ್ರಜಾಪ್ರಭುತ್ವದ ನಿಜವಾದ ಗುರಿ - ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌

Constitution Day 2021 Development Journey of Indi Has been Progressing on strength of our Constitution hls
Author
Bengaluru, First Published Nov 26, 2021, 1:19 PM IST

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ (Baba Saheb Ambedkar) ಅವರಿಂದ ರಚಿಸಲ್ಪಟ್ಟ ಸಂವಿಧಾನ (Constitution) ಸಂಪೂರ್ಣ ಯಶಸ್ವಿಯಾಗಿದೆ. ಈ ಸಂವಿಧಾನವೇ ದೇಶವಾಸಿಗಳೆಲ್ಲರಿಗೂ ಪ್ರೇರಕ ಶಕ್ತಿಯಾಗಿದೆ. ನರೇಂದ್ರ ಮೋದಿಯವರು (Narendra Modi) ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ 2015ರಿಂದ ನವೆಂಬರ್‌ 26ನ್ನು ಸಂವಿಧಾನ ದಿವಸವನ್ನಾಗಿ ಆಚರಿಸಲು ಕರೆ ನೀಡಿದ್ದರು.

ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನ ದಿನವನ್ನು ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್‌ ಜೋಶಿ ಅವರು ಈ ದಿನದ ಮಹತ್ವವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸುತ್ತಾ, ಇದರ ಆಚರಣೆಯಲ್ಲಿ ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿ ಹಾಗೂ ಲೋಕಸಭಾ ಸ್ಪೀಕರ್‌ ಭಾಗವಹಿಸುತ್ತಿದ್ದು, ರಾಷ್ಟ್ರಪತಿಗಳು ಸಂವಿಧಾನದ ಪೀಠಿಕೆಯನ್ನು ಓದುವುದಾಗಿ ತಿಳಿಸಿದ್ದಾರೆ. ತನ್ಮೂಲಕ ಭಾರತ ಸಂವಿಧಾನದ ಪೀಠಿಕೆಯನ್ನು ದೇಶವಾಸಿಗಳೆಲ್ಲರೂ ಓದುವುದರ ಮೂಲಕ ಹಾಗೂ ಕ್ವಿಜ್‌ನಲ್ಲಿ ಭಾಗವಹಿಸುವುದರ ಮೂಲಕ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Constitution Day: ಸಂವಿಧಾನದ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು

ಸಂವಿಧಾನದ ಗಟ್ಟಿತನ

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ರ ದಣಿವರಿಯದ ಪ್ರಯತ್ನದ ಫಲವಾಗಿ ದೇಶಕ್ಕೆ ದೀರ್ಘವಾದ ಸಂವಿಧಾನ ರೂಪುಗೊಂಡಿತು. ಹೀಗೆ ರೂಪಿತವಾದ ಸಂವಿಧಾನದ ಪ್ರತಿಯನ್ನು ಡಾ.ಬಾಬು ರಾಜೇಂದ್ರ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆಯು 26 ನವೆಂಬರ್‌ 1949ರಂದು ಅಂಗೀಕರಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶಾದ್ಯಂತ ನವೆಂಬರ್‌ 26ನ್ನು ಸಂವಿಧಾನ ರಚನಾ ದಿನವೆಂದು ಆಚರಿಸಲಾಗುತ್ತಿದೆ.

ಭಾರತದ ಸಂವಿಧಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಶ್ರೇಷ್ಠ ಗ್ರಂಥವೆಂದು ಪರಿಗಣಿಸಲಾಗುತ್ತದೆ. ವಿವಿಧ ಭಾಷೆ, ಆಚರಣೆ, ಸಂಸ್ಕೃತಿ ಮತ್ತು ಭೌಗೊಳಿಕ ವೈವಿಧ್ಯತೆಗಳನ್ನು ಹೊಂದಿರುವ, 130 ಕೋಟಿಗಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಸಂವಿಧಾನವು ಆಚರಣೆಗೆ ಬಂದು ಎಪ್ಪತ್ತು ವರ್ಷಗಳನ್ನು ಪೂರೈಸಿದ್ದರೂ ಯಾವುದೇ ಅರಾಜಕತೆ ಹಾಗೂ ನೆರೆ ರಾಷ್ಟ್ರಗಳಲ್ಲಿ ಕಂಡು ಬರುವ ಸೈನಿಕ ದಂಗೆಗಳಂತಹ ಘಟನೆಗಳು ಸಂಭವಿಸಿಲ್ಲವೆಂದರೆ ಭಾರತ ಸಂವಿಧಾನದ ಗಟ್ಟಿತನವನ್ನು ಅರ್ಥೈಸಿಕೊಳ್ಳಬಹುದಾಗಿದೆ.

ಜನಸಾಮಾನ್ಯರ ಹಕ್ಕು ರಕ್ಷಣೆ

ಭಾರತ ಬ್ರಿಟಿಷರ ಆಳ್ವಿಕೆಗೊಳಪಟ್ಟು ಹಲವು ದಶಕಗಳೇ ಪೂರ್ಣಗೊಂಡಿದ್ದವು. ಈ ದೇಶದ ಸಂಪತ್ತನ್ನು ಲೂಟಿ ಮಾಡುವುದರೊಂದಿಗೆ ಬ್ರಿಟಿಷ್‌ ಸರ್ಕಾರವು ಮೂಲ ದೇಶವಾಸಿಗಳನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿತ್ತು. ಸ್ವಂತ ನೆಲದಲ್ಲಿಯೇ ಗುಲಾಮರಾಗಿ ಬ್ರಿಟಿಷರ ವೈಭೋಗಕ್ಕಾಗಿ ಎಲ್ಲವನ್ನು ಸಮರ್ಪಿಸಿ ಅನ್ನ-ಆಸರೆ ಇಲ್ಲದೆ ದೇಶವಾಸಿಗಳು ಪರಿತಪಿಸುತ್ತಿದ್ದರು. ಇದರ ವಿರುದ್ಧ ದೊಡ್ಡ ಸ್ವಾತಂತ್ರ್ಯ ಚಳವಳಿ ಪ್ರಾರಂಭವಾಯಿತು. ಒಂದೆಡೆ ಶಾಂತಿಯುತ ಹೋರಾಟ ನಡೆದರೆ, ಈ ನೆಲದ ಸ್ವಾತಂತ್ರ್ಯಕ್ಕಾಗಿ ನೆತ್ತರ ಕಾಲುವೆಯನ್ನೇ ಹರಿಸಿದ ಕ್ರಾಂತಿಕಾರಿಗಳ ಹೋರಾಟಗಳೂ ಜರುಗಿದವು. ಅ

ನ್ಯಮಾರ್ಗವಿಲ್ಲದ ಬ್ರಿಟಿಷರು ಭಾರತದಿಂದ ಕಾಲ್ಕೀಳಬೇಕಾಯಿತು. ಆಗ ಸ್ವಾತಂತ್ರ್ಯೋತ್ತರದ ಭಾರತ ಹೇಗಿರಬೇಕು, ಸರ್ಕಾರದ ಆಡಳಿತ ವೈಖರಿ, ನ್ಯಾಯಾಂಗ ವ್ಯವಸ್ಥೆ ಹಾಗೂ ಜನಸಾಮಾನ್ಯರ ಹಕ್ಕುಗಳು ಹೇಗೆ ರಕ್ಷಿಸಲ್ಪಡಬೇಕು ಎಂಬ ನಿಯಮಗಳನ್ನು ರೂಪಿಸಿಕೊಂಡು ಈ ದೇಶದ ಪ್ರತಿಯೊಬ್ಬರೂ ತಾವೇ ರೂಪಿಸಿಕೊಂಡ ನಿಯಮಗಳಿಗೆ ಬದ್ಧರಾಗಿರಬೇಕು ಹಾಗೂ ಭಾರತವು ತನ್ನ ಗಡಿ ಹಾಗೂ ಗಡಿಯೊಳಗಿನ ಎಲ್ಲಾ ಆಗುಹೋಗುಗಳಿಗೆ ಯಾರಿಗೂ ಮಣಿಯದೆ ಸಾರ್ವಭೌಮತ್ವದಿಂದಿರಬೇಕು ಎಂಬ ಸದಾಶಯದ ಮಾರ್ಗದರ್ಶನ ರೂಪುರೇಷೆಯನ್ನು ಭಾರತದ ಸಂವಿಧಾನ ಎನ್ನಲಾಗುತ್ತದೆ. ಈ ಸಂವಿಧಾನವನ್ನು ರಚಿಸುವ ಜವಾಬ್ದಾರಿಯನ್ನು ಹೊತ್ತವರೇ ಸಂವಿಧಾನ ರಚನಾ ಸಭೆಯ ಸದಸ್ಯರು.

ಸಂವಿಧಾನದ ಆಶೋತ್ತರಗಳೇನು?

ಸಂವಿಧಾನ ರಚನಾ ಸಭೆಯನ್ನು ಹೇಗೆ ಆಯ್ಕೆ ಮಾಡಲಾಯಿತು ಎಂದರೆ, ಆ ಸಂದರ್ಭದಲ್ಲಿ 93 ರಾಜಸಂಸ್ಥಾನಗಳು ಹಾಗೂ 11 ಗೌವರ್ನರ್‌ ಆಡಳಿತ ಪ್ರದೇಶಗಳಿದ್ದವು. ಈ ಎಲ್ಲಾ ಪ್ರದೇಶಗಳಿಂದ ಸರಾಸರಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಒಬ್ಬರಂತೆ ಒಟ್ಟು 389 ಸದಸ್ಯರನ್ನು ಆಯ್ಕೆಮಾಡಿ ಅದನ್ನು ಸಂವಿಧಾನ ರಚನಾ ಸಭೆ ಎನ್ನಲಾಯಿತು. ದಿನಾಂಕ 9.12.1946ರಂದು ಪಾರ್ಲಿಮೆಂಟಿನ ಸೆಂಟ್ರಲ್‌ ಹಾಲ್‌ನಲ್ಲಿ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಜರುಗಿತು. ಮುಸ್ಲಿಂ ಲೀಗ್‌ ಹಾಗೂ ಕೆಲ ರಾಜಸಂಸ್ಥಾನದ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳದಿರುವುದರಿಂದ ಅಂದು ಜಮಾವಣೆಗೊಂಡ ಸದಸ್ಯರ ಸಂಖ್ಯೆ 211 ಆಗಿತ್ತು. ಇದರ ಹಂಗಾಮಿ ಅಧ್ಯಕ್ಷರಾಗಿ ಸಚ್ಚಿದಾನಂದ ಸಿನ್ಹಾರವರು ಆಯ್ಕೆಯಾದರೆ, ಪೂರ್ಣ ಅಧ್ಯಕ್ಷರಾಗಿ ಡಾ.ಬಾಬು ರಾಜೇಂದ್ರ ಪ್ರಸಾದ್‌ ಕಾರ್ಯನಿರ್ವಹಿಸಿದರು.

ಇವರಲ್ವೇ ಹಿರಿಯರು: ಬಿಡಿಗಾಸೂ ಪಡೆಯದೇ ಇಡೀ ಸಂವಿಧಾನ ಕೈಯಲ್ಲೇ ಬರೆದರು!

ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್‌, ರಚನೆಯಾಗಲಿರುವ ಭಾರತ ಸಂವಿಧಾನದ ಆಶೋತ್ತರಗಳು ಹೇಗಿರಬೇಕು? ಸರ್ಕಾರದ ಮಾದರಿ ಯುರೋಪ್‌ ಅಥವಾ ಅಮೆರಿಕ ದೇಶದಂತಿರಬೇಕೆ? ನ್ಯಾಯಾಂಗ ವ್ಯವಸ್ಥೆಯ ಹಂತಗಳು ಯಾವುವು? ಚುನಾವಣಾ ಪದ್ಧತಿ, ಆಡಳಿತ ವ್ಯವಸ್ಥೆ, ಜನಸಾಮಾನ್ಯರ ಹಕ್ಕುಗಳ ರಕ್ಷಣೆ, ವಿದೇಶಾಂಗ ನೀತಿ, ತುರ್ತು ಪರಿಸ್ಥಿತಿಗಳ ನಿರ್ವಹಣೆ ಮುಂತಾದವುಗಳ ಬಗ್ಗೆ ವಿಸ್ತೃತವಾದ ಚರ್ಚೆ ಸಂವಿಧಾನ ರಚನಾ ಸಭೆಯಲ್ಲಿ ಜರುಗುತ್ತಿತ್ತು. ಅವುಗಳನ್ನೆಲ್ಲ ಕ್ರೋಢೀಕರಿಸಿ ವಿಭಿನ್ನ ಜಾತಿ, ಸಂಸ್ಕೃತಿ ಹಾಗೂ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವುದರೊಂದಿಗೆ ಭವಿಷ್ಯದ ದಿಕ್ಸೂಚಿಯಾಗಬಲ್ಲ ಸಂವಿಧಾನದ ಕರಡನ್ನು ರಚಿಸುವ ಜವಾಬ್ದಾರಿಯನ್ನು ಬಾಬಾಸಾಹೇಬ್‌ ಅಂಬೇಡ್ಕರ್‌ರವರಿಗೆ ವಹಿಸಲಾಯಿತು. ಈ ಕಾರ್ಯವನ್ನು ಸಂವಿಧಾನ ಶಿಲ್ಪಿ ಬಾಬಾಸಾಹೇಬ್‌ ಅಂಬೇಡ್ಕರ್‌ ಯಶಸ್ವಿಯಾಗಿ ನಿರ್ವಹಿಸಿದರು.

ಸಂವಿಧಾನದ ಮೂಲ ಸ್ವರೂಪ

ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ರವರು ರಚಿಸಿದ ಸಂವಿಧಾನವು ಮೂರು ಭಾಗಗಳನ್ನೊಳಗೊಂಡಿದೆ. 1.ಪೀಠಿಕೆ 2.ಭಾಗಗಳು ಮತ್ತು 3.ಪರಿಚ್ಛೇದಗಳು. ಪೀಠಿಕೆಯು ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಆತ್ಮಗೌರವದೊಂದಿಗೆ ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರೂ ಅಭಿವೃದ್ಧಿ ಹೊಂದುವ ಹಾಗೂ ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಬದ್ಧತೆಯನ್ನು ನಮಗೇ ನಾವೇ ನೀಡಿಕೊಳ್ಳುತ್ತಿದ್ದೇವೆ ಎಂಬ ಸದಾಶಯವನ್ನು ವ್ಯಕ್ತಪಡಿಸುತ್ತದೆ. ಸಂವಿಧಾನದ ಎರಡನೆಯ ಭಾಗದಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಒಪ್ಪಿಕೊಂಡು ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ, ನ್ಯಾಯಾಧೀಶರು ಮುಂತಾದ ಸಂವಿಧಾನಾತ್ಮಕ ಹುದ್ದೆಗಳ ಆಯ್ಕೆಯ ವಿಧಾನವನ್ನು ತಿಳಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ತಿಳಿಸುತ್ತದೆ. ಇದೇ ಭಾಗದಲ್ಲಿ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ವಾಗ್ದಾನವನ್ನೂ ನೀಡಲಾಗಿದೆ. ಇವುಗಳ ಉಲ್ಲಂಘನೆಯಾದಲ್ಲಿ ಸಾಮಾನ್ಯ ವ್ಯಕ್ತಿಯೂ ಸಹ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯವನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಅಧಿಕಾರಿಗಳನ್ನು ನೇಮಿಸಿಕೊಳ್ಳುವ ವಿಧಾನವನ್ನು ತಿಳಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಾಂಧವ್ಯ ಹಾಗೂ ಮಿತಿಗಳನ್ನು ಅರ್ಥೈಸಲಾಗಿದೆ. ಮೂರನೇಯ ಭಾಗವಾದ ಪರಿಚ್ಛೇದಗಳಲ್ಲಿ ನಿರ್ಧಿಷ್ಟವಿಷಯಕ್ಕೆ ಸಂಬಂಧಿಸಿದ ವಿವರಣೆಗಳನ್ನು ನಿಡಲಾಗಿದೆ.

ತಿದ್ದುಪಡಿ ಎಂದರೆ ಏನು?

ಸಂವಿಧಾನ ತಿದ್ದುಪಡಿ ಎಂದರೇನು ಎಂದು ಸಂವಿಧಾನದ ಅನುಚ್ಛೇದ 368 ತಿದ್ದುಪಡಿ ಕುರಿತು ವಿವರಿಸುತ್ತದೆ. ಸಂವಿಧಾನದ ಮೂಲ ಆಶೋತ್ತರಗಳನ್ನು ಹಾಗೂ ಸ್ವರೂಪವನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಮೂಲ ಆಶೋತ್ತರಗಳನ್ನು ಇನ್ನಷ್ಟುಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಯಾವುದೇ ಹೊಸ ವಿಷಯಗಳ ಸೇರ್ಪಡೆ ಅಥವಾ ಕುಂದುಕೊರತೆಯ ನಿವಾರಣೆಗಾಗಿ ಜಾರಿಗೊಳಿಸಲಾಗುವ ಕ್ರಮವನ್ನು ತಿದ್ದುಪಡಿ ಎನ್ನಲಾಗುತ್ತದೆ. ಇಲ್ಲಿಯವರೆಗೆ ಸುಮಾರು 105 ತಿದ್ದುಪಡಿಗಳನ್ನು ಮಾಡಲಾಗಿದೆ.

ಇಂತಹ ಅದ್ಭುತ ಸಂವಿಧಾನವನ್ನು ರಚಿಸುವುದಕ್ಕಾಗಿ ಸಂವಿಧಾನ ರಚನಾ ಸಭೆಯು ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನಗಳ ಪರಿಶ್ರಮ ನಡೆಸಿದೆ. ಅವರೆಲ್ಲರ ಪರಿಶ್ರಮದ ಬೆವರಿನ ಮೌಲ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ, ರಾಷ್ಟ್ರೀಯತೆಯ ಬದ್ಧತೆಗಾಗಿ ನವೆಂಬರ್‌ 26ನ್ನು ಸಂವಿಧಾನ ರಚನಾ ದಿನವನ್ನಾಗಿ ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. 26 ನವೆಂಬರ್‌ 1949ರಂದು ಅಂಗೀಕರಿಸಲಾದ ಸಂವಿಧಾನವು 26 ಜನವರಿ 1950ರಿಂದ ಜಾರಿಗೆ ಬಂದಿತು.

- ಪಿ.ರಾಜೀವ್‌, ಶಾಸಕ, ಕುಡಚಿ

 

Follow Us:
Download App:
  • android
  • ios